ದೇಶದ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ, ಮೊದಲ ಮೂರು ಸ್ಥಾನ ಪಡೆದ ರಾಜ್ಯಗಳು ಯಾವುವು?
ದೇಶದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಐದು ರಾಜ್ಯಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಕರ್ನಾಟಕಕ್ಕಿಂತ ಮೊದಲ ಮೂರು ಸ್ಥಾನಗಳನ್ನು ಮಹಾರಾಷ್ಟ್ರ, ತಮಿಳುನಾಡು, ಉತ್ತರಪ್ರದೇಶ ಪಡೆದುಕೊಂಡಿದೆ. ಇನ್ನು ದೇಶದ ಶ್ರೀಮಂತ, ಬಡ ರಾಜ್ಯಗಳ ಪಟ್ಟಿಯಲ್ಲಿ ಕೇಂದ್ರಾಡಳಿತ ಪ್ರದೇಶಗಳೂ ಸೇರಿಕೊಂಡಿವೆ. ಅವುಗಳು ಯಾವುವು, ಯಾವ ಸ್ಥಾನದಲ್ಲಿದೆ ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಸಂಗ್ರಹ ಚಿತ್ರ -
ನವದೆಹಲಿ: ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಅಡೆತಡೆಗಳ ಹೊರತಾಗಿಯೂ 2025ರಲ್ಲಿ ಭಾರತವು ಸತತ ನಾಲ್ಕನೇ ವರ್ಷ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದಕ್ಕಾಗಿ ರಾಜ್ಯಗಳ ಕೊಡುಗೆ ಗಣನೀಯವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ರಾಜ್ಯವಾರು ಉತ್ಪನ್ನವನ್ನು (Gross State Domestic Product) ಆಧರಿಸಿ 2025ರ ಹಣಕಾಸು ವರ್ಷದಲ್ಲಿ ಶ್ರೀಮಂತ (richest state) ಮತ್ತು ಬಡ ರಾಜ್ಯಗಳ (poorest states) ಪಟ್ಟಿಯನ್ನು ಮಾಡಲಾಗಿದೆ. ಇದರಲ್ಲಿ ಕರ್ನಾಟಕವು (Karnataka) ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದರೆ ಕರ್ನಾಟಕಕ್ಕಿಂತ ಮೊದಲ ಮೂರು ಸ್ಥಾನಗಳನ್ನು ಮಹಾರಾಷ್ಟ್ರ, ತಮಿಳುನಾಡು, ಉತ್ತರಪ್ರದೇಶ ಪಡೆದುಕೊಂಡಿದೆ.
2025ರ ಹಣಕಾಸು ವರ್ಷದಲ್ಲಿ ಭಾರತದ ಜಿಎಸ್ ಡಿಪಿ ಅಂಕಿ ಅಂಶಗಳ ಪ್ರಕಾರ 10 ಅತ್ಯಂತ ಶ್ರೀಮಂತ ಮತ್ತು ಬಡ ರಾಜ್ಯಗಳನ್ನು ಗುರುತಿಸಲಾಗಿದೆ. ಅಗ್ರ ಹತ್ತು ಶ್ರೀಮಂತ ರಾಜ್ಯಗಳಲ್ಲಿ 29.7 ಲಕ್ಷ ಕೋಟಿ ರೂ. ಜಿಎಸ್ ಡಿಪಿ ಹೊಂದಿರುವ ಉತ್ತರ ಪ್ರದೇಶವು ಕರ್ನಾಟಕವನ್ನು ಹಿಂದಿಕ್ಕಿದೆ. ಕರ್ನಾಟಕದ ಜಿಎಸ್ ಡಿಪಿ 28.8 ಲಕ್ಷ ಕೋಟಿ ರೂ. ಆಗಿದೆ.
ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ ಭಾರತದ ಜಿಡಿಪಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 7.4ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇದು ಹಿಂದಿನ ವರ್ಷದಲ್ಲಿ ಶೇ. 6.5ರಷ್ಟಾಗಿತ್ತು. 2026ರ ಆರಂಭದಲ್ಲೇ ಭಾರತದ ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಶೇಕಡಾ 0.7ರಷ್ಟು ಹೆಚ್ಚಾಗಿದ್ದು, ಜಪಾನ್ ಅನ್ನು ಹಿಂದಿಕ್ಕಿದೆ. ಈ ಮೂಲಕ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಗುರುತಿಸಿಕೊಂಡಿದೆ.
ವಿಶ್ವದ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಗೆ ರಾಜ್ಯವಾರು ಕೊಡುಗೆಗಳು ಗಣನೀಯವಾಗಿದೆ. 2025ರ ಹಣಕಾಸು ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ಅಂಕಿ ಅಂಶಗಳ ಪ್ರಕಾರ ಮಹಾರಾಷ್ಟ್ರವು ದೇಶದ ಅತ್ಯಂತ ಶ್ರೀಮಂತ ರಾಜ್ಯವಾಗಿ ಗುರುತಿಸಲ್ಪಟ್ಟಿದೆ. ರಾಜಧಾನಿ ಮುಂಬೈಯ ಅಪಾರ ಕೊಡುಗೆಯೊಂದಿಗೆ ರಾಜ್ಯದ ಜಿಎಸ್ ಡಿಪಿ 45.31 ಲಕ್ಷ ಕೋಟಿ ರೂ. ಅನ್ನು ದಾಖಲಿಸಿದೆ. ಎರಡನೇ ಸ್ಥಾನದಲ್ಲಿರುವ ತಮಿಳುನಾಡು 31.1 ಲಕ್ಷ ಕೋಟಿ ರೂ. ಜಿಎಸ್ ಡಿಪಿ ಅನ್ನು ದಾಖಲಿಸಿದೆ.
ಇವುಗಳೊಂದಿಗೆ ಉತ್ತರ ಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶಗಳು ಕೂಡ ದೇಶದ 10 ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಸೇರಿವೆ. ಬಡ ರಾಜ್ಯಗಳ ಪಟ್ಟಿಯಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ಅರುಣಾಚಲ ಪ್ರದೇಶ, ಪುದುಚೇರಿ ಮತ್ತು ಮೇಘಾಲಯಗಳು ಗುರುತಿಸಿಕೊಂಡಿವೆ.
ಶ್ರೀಮಂತ ರಾಜ್ಯಗಳು
ಭಾರತೀಯ ರಿಸರ್ವ್ ಬ್ಯಾಂಕ್ ದಾಖಲಿಸಿರುವ ರಾಜ್ಯವಾರು ಅಂಕಿ ಅಂಶಗಳ ಪ್ರಕಾರ 2025 ರ ಹಣಕಾಸು ವರ್ಷದಲ್ಲಿ ಜಿಎಸ್ ಡಿಪಿ ಆಧಾರದಲ್ಲಿ ಗುರುತಿಸಿಕೊಂಡಿರುವ ಅತ್ಯಂತ ಶ್ರೀಮಂತ ರಾಜ್ಯಗಳು.
ಮಹಾರಾಷ್ಟ್ರ- 45.32 ಲಕ್ಷ ಕೋಟಿ ರೂ., ತಮಿಳುನಾಡು- 31.19 ಲಕ್ಷ ಕೋಟಿ ರೂ., ಉತ್ತರ ಪ್ರದೇಶ- 29.78 ಲಕ್ಷ ಕೋಟಿ ರೂ., ಕರ್ನಾಟಕ- 28.84 ಲಕ್ಷ ಕೋಟಿ ರೂ., ಪಶ್ಚಿಮ ಬಂಗಾಳ- 18.15 ಲಕ್ಷ ಕೋಟಿ ರೂ., ರಾಜಸ್ಥಾನ- 17.04 ಲಕ್ಷ ಕೋಟಿ ರೂ., ತೆಲಂಗಾಣ- 16.41 ಲಕ್ಷ ಕೋಟಿ ರೂ., ಆಂಧ್ರಪ್ರದೇಶ- 15.93 ಲಕ್ಷ ಕೋಟಿ ರೂ., ಮಧ್ಯ ಪ್ರದೇಶ- 15.03 ಲಕ್ಷ ಕೋಟಿ ರೂ., ದೆಹಲಿ- 12.15 ಲಕ್ಷ ಕೋಟಿ ರೂ.
ಬಡ ರಾಜ್ಯಗಳು
2025 ರ ಹಣಕಾಸು ವರ್ಷದಲ್ಲಿ ಜಿಎಸ್ ಡಿಪಿ ಆಧಾರದಲ್ಲಿ ಗುರುತಿಸಿಕೊಂಡಿರುವ ಬಡ ರಾಜ್ಯಗಳು
ಅರುಣಾಚಲ ಪ್ರದೇಶ- 4,423 ಕೋಟಿ ರೂ., ತ್ರಿಪುರ- 8,968 ಕೋಟಿ ರೂ., ಹಿಮಾಚಲ ಪ್ರದೇಶ- 23,169 ಕೋಟಿ ರೂ., ಜಮ್ಮು ಮತ್ತು ಕಾಶ್ಮೀರ- 26,246 ಕೋಟಿ ರೂ., ಉತ್ತರಾಖಂಡ- 37,824 ಕೋಟಿ ರೂ., ಜಾರ್ಖಂಡ- 51,626 ಕೋಟಿ ರೂ., ಛತ್ತೀಸ್‌ಗಢ- 56,788 ಕೋಟಿ ರೂ., ಅಸ್ಸಾಂ- 64,367 ಕೋಟಿ ರೂ., ಪಂಜಾಬ್- 83,864 ಕೋಟಿ ರೂ., ಒಡಿಶಾ- 89,004 ಕೋಟಿ ರೂ.