ಹೊಸ ಆದಾಯ ತೆರಿಗೆ ಹೊಸ ನಿಯಮ 2026: ಟ್ಯಾಕ್ಸ್‌ನಲ್ಲಿ ಆದ ಬದಲಾವಣೆಗಳು ಏನು? ಇಲ್ಲಿದೆ ಸಂಪೂರ್ಣ ವಿವರ
New Income Tax Rules 2026: ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ಹೊಸ ಆದಾಯ ತೆರಿಗೆ ನಿಯಮಗಳು, ತೆರಿಗೆ ದರಗಳಿಗಿಂತ ಹೆಚ್ಚು ಸಂಬಳದ ರಚನೆ ಮೇಲೆ ಗಮನ ಹರಿಸಿವೆ. ಊಟ ಭತ್ಯೆ, ಮಕ್ಕಳ ಶಿಕ್ಷಣ, ಹಾಸ್ಟೆಲ್ ವೆಚ್ಚ ಹಾಗೂ ಉಡುಗೊರೆಗಳ ಮೇಲಿನ ವಿನಾಯಿತಿಗಳನ್ನು ಹೆಚ್ಚಿಸಲಾಗಿದೆ. ಬೆಂಗಳೂರನ್ನು ಸೇರಿದಂತೆ ಕೆಲವು ನಗರಗಳನ್ನು ಮೆಟ್ರೋ ಪಟ್ಟಿಗೆ ಸೇರಿಸುವ ಮೂಲಕ HRA ಲಾಭ ಹೆಚ್ಚಿಸಲಾಗಿದೆ. ತಜ್ಞರ ಪ್ರಕಾರ, ತೆರಿಗೆದಾರರು ಕೇವಲ ಹಳೆಯ ಮತ್ತು ಹೊಸ ಪದ್ಧತಿಯನ್ನು ಹೋಲಿಸುವುದಕ್ಕಿಂತ, ತಮ್ಮ ಸಂಬಳದ ಘಟಕಗಳನ್ನು ಸೂಕ್ತವಾಗಿ ಮರುರಚನೆ ಮಾಡಿಕೊಳ್ಳುವುದು ಉತ್ತಮ.
ಸಾಂದರ್ಭಿಕ ಚಿತ್ರ -
ದೆಹಲಿ, ಏ. 1: ಆದಾಯ ತೆರಿಗೆ ಇಲಾಖೆಯು (Income Tax Department) ಕಳೆದ ತಿಂಗಳು ಸೂಚಿಸಿದಂತೆ, ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ (New Income Tax Rules) ಜಾರಿಗೆ ಬಂದಿದೆ. ಇದು ವೇತನದಾರರು ತಮ್ಮ ಆದಾಯವನ್ನು ಹೇಗೆ ವಿನ್ಯಾಸಗೊಳಿಸಬೇಕು ಮತ್ತು ತೆರಿಗೆ ಯೋಜನೆಯನ್ನು ಹೇಗೆ ರೂಪಿಸಬೇಕು ಎಂಬ ವಿಚಾರದಲ್ಲಿ ಮಹತ್ತರ ಬದಲಾವಣೆಯನ್ನು ತಂದಿದೆ. ಕೇವಲ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಸ್ಮಾರ್ಟ್ ಸಂಬಳ ರಚನೆಯ ಮೂಲಕ ತೆರಿಗೆ ಉಳಿತಾಯಕ್ಕೆ ಇಲ್ಲಿ ಒತ್ತು ನೀಡಲಾಗಿದೆ.
ಸಂಬಳದ ರಚನೆಯಲ್ಲಿನ ಬದಲಾವಣೆ
ತಜ್ಞರ ಪ್ರಕಾರ, ಈ ಹೊಸ ಬದಲಾವಣೆಯು ಕೇವಲ ತೆರಿಗೆ ಉಳಿತಾಯಕ್ಕೆ ಸೀಮಿತವಾಗದೆ, ಸಂಬಳದ ಘಟಕಗಳನ್ನು ಅತ್ಯುತ್ತಮವಾಗಿಸುವತ್ತ (Salary Optimisation) ಗಮನಹರಿಸಿದೆ. ಉದಾಹರಣೆಗೆ, ಊಟದ ಪ್ರಯೋಜನಗಳ (Meal Benefits) ಮೂಲಕವೇ ಒಬ್ಬ ವ್ಯಕ್ತಿಯು ವಾರ್ಷಿಕವಾಗಿ 1,05,600 ರುಪಾಯಿಗಳವರೆಗೆ ತೆರಿಗೆ ಮುಕ್ತ ಸಂಬಳವನ್ನು ಪಡೆಯಬಹುದು.
ಪ್ರಮುಖ ವಿನಾಯಿತಿಗಳು ಮತ್ತು ಭತ್ಯೆಗಳು
ಹೊಸ ನಿಯಮಗಳ ಅಡಿಯಲ್ಲಿ ಹಲವಾರು ಭತ್ಯೆಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ:
- ಮಕ್ಕಳ ಶಿಕ್ಷಣ ಭತ್ಯೆ: ಪ್ರತಿ ಮಗುವಿಗೆ ತಿಂಗಳಿಗೆ 100 ರು.ಯಿಂದ 3,000 ರು.ಗೆ ಏರಿಕೆ.
- ಹಾಸ್ಟೆಲ್ ಭತ್ಯೆ: ಪ್ರತಿ ಮಗುವಿಗೆ ತಿಂಗಳಿಗೆ 300 ರು.ಯಿಂದ 9,000 ರು.ಗೆ ಏರಿಕೆ.
- ಉಚಿತ ಊಟದ ವಿನಾಯಿತಿ: ಪ್ರತಿ ಊಟಕ್ಕೆ 50 ರೂ.ಯಿಂದ 200 ರು.ಗೆ ಹೆಚ್ಚಳ.
- ಉಡುಗೊರೆ ವಿನಾಯಿತಿ: ವಾರ್ಷಿಕ ಮಿತಿಯನ್ನು 15,000 ರು.ಗೆ ಹೆಚ್ಚಿಸಲಾಗಿದೆ.
12,000 ಸಿಬ್ಬಂದಿಗೆ ಗೇಟ್ ಪಾಸ್ ನೀಡಿದ ಟೆಕ್ ದೈತ್ಯ ಕಂಪನಿ ಒರಾಕಲ್; ಮತ್ತೊಂದು ರೌಂಡ್ ಉದ್ಯೋಗ ಕಡಿತ ಸಾಧ್ಯತೆ
ಬೆಂಗಳೂರು ಈಗ 'ಮೆಟ್ರೋ' ನಗರ!
ಕರ್ನಾಟಕದ ತೆರಿಗೆದಾರರಿಗೆ ಮತ್ತೊಂದು ಸಿಹಿ ಸುದ್ದಿ ಎಂದರೆ, ಮನೆ ಬಾಡಿಗೆ ಭತ್ಯೆ (HRA) ಲೆಕ್ಕಾಚಾರಕ್ಕಾಗಿ ಬೆಂಗಳೂರನ್ನು ಮೆಟ್ರೋ ನಗರಗಳ ಪಟ್ಟಿಗೆ ಸೇರಿಸಲಾಗಿದೆ. ಇದರೊಂದಿಗೆ ಅಹಮದಾಬಾದ್, ಹೈದರಾಬಾದ್ ಮತ್ತು ಪುಣೆ ನಗರಗಳೂ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಇಲ್ಲಿನ ಉದ್ಯೋಗಿಗಳು ಹೆಚ್ಚಿನ HRA ವಿನಾಯಿತಿ ಪಡೆಯಲು ಅರ್ಹರಾಗಿದ್ದಾರೆ.
ಹಳೆಯ ಮತ್ತು ಹೊಸ ಪದ್ಧತಿ: ವ್ಯತ್ಯಾಸವೇನು?
ಹಳೆಯ ತೆರಿಗೆ ಪದ್ಧತಿಯು ವಿವಿಧ ಹೂಡಿಕೆಗಳ ಮೇಲೆ ಕಡಿತ ಮತ್ತು ವಿನಾಯಿತಿಗಳನ್ನು ನೀಡುವುದನ್ನು ಮುಂದುವರಿಸುತ್ತದೆ. ಹೊಸ ತೆರಿಗೆ ಪದ್ಧತಿಯು ಸರಳವಾಗಿದ್ದು, ಕೆಲವು ನಿರ್ದಿಷ್ಟ ಪಾವತಿಗಳನ್ನು ಹೊರತುಪಡಿಸಿ ಹೆಚ್ಚಿನ ಕಡಿತಗಳನ್ನು ಅನುಮತಿಸುವುದಿಲ್ಲ. ಆದರೂ ಸಂಬಳದ ಘಟಕಗಳಲ್ಲಿನ ಬದಲಾವಣೆಗಳಿಂದಾಗಿ ಎರಡೂ ಪದ್ಧತಿಗಳ ನಡುವಿನ ವ್ಯತ್ಯಾಸವು ಕಡಿಮೆಯಾಗುತ್ತಿದೆ.
ತೆರಿಗೆದಾರರು ಏನು ಮಾಡಬೇಕು?
- ಕೇವಲ ತೆರಿಗೆ ದರಗಳನ್ನು ಹೋಲಿಸಬೇಡಿ, ನಿಮ್ಮ ಸಂಬಳದ ರಚನೆಯನ್ನು ಪರಿಶೀಲಿಸಿ.
- ಕಂಪನಿಯು ನೀಡುವ ಊಟ, ಪ್ರಯಾಣ ಮತ್ತು ಇತರ ಭತ್ಯೆಗಳ ಲಾಭ ಪಡೆದುಕೊಳ್ಳಿ.
- 12 ಲಕ್ಷ ರುಪಾಯಿಗಿಂತ ಹೆಚ್ಚಿನ ಆದಾಯ ಹೊಂದಿರುವವರು ತೆರಿಗೆ ದಕ್ಷತೆಯನ್ನು ಹೆಚ್ಚಿಸಲು ಸಂಬಳದ ಘಟಕಗಳನ್ನು ಮರುಹೊಂದಿಸುವುದು ಸೂಕ್ತ.