ಪಶ್ಚಿಮ ಏಷ್ಯಾ ಸಂಘರ್ಷದಿಂದ ತೈಲ ಮಾರಾಟ ಕಂಪನಿಗಳಿಗೆ ನಷ್ಟ: ಮೇ 15ರೊಳಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ?
Petrol-Diesel price hike: ಪಂಚ ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕಠಿಣ ಆರ್ಥಿಕ ನಿರ್ಧಾರಗಳತ್ತ ಕೇಂದ್ರ ಸರ್ಕಾರ ಮುಖ ಮಾಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತೈಲ ಮಾರಾಟ ಕಂಪನಿಗಳ ನಷ್ಟ ಹೆಚ್ಚುತ್ತಿರುವ ಕಾರಣ ಮೇ 15ರೊಳಗೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಮೇ 9: ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ (US-Isreal-Iran war) ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಹೆಚ್ಚಿದ್ದು, ಭಾರತ ಸರ್ಕಾರದ ಮೇಲೆ ಆರ್ಥಿಕ ಒತ್ತಡ ಹೆಚ್ಚುತ್ತಿದೆ. ಕಳೆದ 70 ದಿನಗಳಿಂದ ದಿನಕ್ಕೆ ಸುಮಾರು 1,000 ಕೋಟಿ ರುಪಾಯಿ ನಷ್ಟವನ್ನು ಸರ್ಕಾರ ಭರಿಸುತ್ತಿದ್ದು, ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕಠಿಣ ಆರ್ಥಿಕ ನಿರ್ಧಾರಗಳತ್ತ ಕೇಂದ್ರ ಸರ್ಕಾರ ಮುಖ ಮಾಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತೈಲ ಮಾರಾಟ ಕಂಪನಿಗಳ ನಷ್ಟ ಹೆಚ್ಚುತ್ತಿರುವ ಕಾರಣ ಮೇ 15ರೊಳಗೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುವ (Fuel price) ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದರೂ ಭಾರತ ಮಾತ್ರ ಅದರ ಸಂಪೂರ್ಣ ಹೊರೆಯನ್ನು ಗ್ರಾಹಕರ ಮೇಲೆ ಹೇರಿರಲಿಲ್ಲ. ಚೀನಾ, ಬ್ರಿಟನ್, ನಾರ್ವೆ, ಜರ್ಮನಿ ಮತ್ತು ನೆದರ್‌ಲ್ಯಾಂಡ್ಸ್ ಈಗಾಗಲೇ ಪೆಟ್ರೋಲ್ ಬೆಲೆಯನ್ನು ಶೇಕಡ 27ರಷ್ಟು ಹೆಚ್ಚಿಸಿವೆ. ಇದೇ ವೇಳೆ ಜಪಾನ್, ದಕ್ಷಿಣ ಕೊರಿಯಾ, ಸ್ಪೇನ್ ಹಾಗೂ ಇಟಲಿ ದೇಶಗಳಲ್ಲಿ ಇಂಧನ ದರಗಳು ಶೇಕಡ 30ಕ್ಕಿಂತ ಹೆಚ್ಚು ಏರಿಕೆಯಾಗಿದೆ.
ಚುನಾವಣೆ ಮುಗಿದ ಬೆನ್ನಲ್ಲೇ ಎಲ್‌ಪಿಜಿ ದುಬಾರಿ, ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ
ಇರಾನ್ ಯುದ್ಧದ ಆರಂಭಿಕ ಹಂತದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 126 ಡಾಲರ್ ತಲುಪಿದ್ದಾಗ, ಪರಿಸ್ಥಿತಿ ಶೀಘ್ರದಲ್ಲೇ ನಿಯಂತ್ರಣಕ್ಕೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರ, ಪೆಟ್ರೋಲ್ ಲೀಟರ್‌ಗೆ 24 ರುಪಾಯಿ ಮತ್ತು ಡೀಸೆಲ್‌ಗೆ 30 ರುಪಾಯಿ ಹೊರೆವನ್ನು ತಾನೇ ಭರಿಸಿತ್ತು. ಆದರೆ ಈಗಲೂ ಅದೇ ಪರಿಸ್ಥಿತಿ ಮುಂದುವರಿದಿದೆ. ಇದರ ಜತೆಗೆ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನೂ ಕಡಿತಗೊಳಿಸಿದ್ದು, ಇದರಿಂದ ಸರ್ಕಾರದ ಖಜಾನೆಗೆ ಸುಮಾರು 1,70,000 ಕೋಟಿ ರುಪಾಯಿ ನಷ್ಟವುಂಟಾಗಿದೆ ಎನ್ನಲಾಗಿದೆ.
ಏಪ್ರಿಲ್ ಅಂತ್ಯದ ವೇಳೆಗೆ ತೈಲ ಮಾರುಕಟ್ಟೆ ಕಂಪನಿಗಳಿಗೆ 30,000 ಕೋಟಿ ರುಪಾಯಿ ನಷ್ಟವಾಗಿದ್ದು, ಜೂನ್ ಅಂತ್ಯದ ವೇಳೆಗೆ ಇದು 50,000 ಕೋಟಿ ರುಪಾಯಿ ತಲುಪಬಹುದು ಎಂದು ಅಂದಾಜಿಸಲಾಗಿದೆ. ಇದೇ ವೇಳೆ ಅನಿಲ ವಲಯದಲ್ಲಿಯೂ ಸುಮಾರು 20,000 ಕೋಟಿ ರುಪಾಯಿ ನಷ್ಟವಾಗಿದೆ
ಪ್ರಸ್ತುತ, ಭಾರತವು 5.33 ಮಿಲಿಯನ್ ಟನ್ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳನ್ನು ಹೊಂದಿದ್ದು, ದೇಶದ 15 ದಿನಗಳ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ. ಆದರೆ ಜಪಾನ್ ಮತ್ತು ದಕ್ಷಿಣ ಕೊರಿಯಾ ಮಾದರಿಯಲ್ಲಿ ಈ ಸಂಗ್ರಹ ಸಾಮರ್ಥ್ಯವನ್ನು 30 ದಿನಗಳ ಮಟ್ಟಕ್ಕೆ ಹೆಚ್ಚಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಭಾರತ ತನ್ನ ದೈನಂದಿನ ಇಂಧನ ಅಗತ್ಯಗಳನ್ನು ಪೂರೈಸಲು ಪ್ರತಿದಿನ ಸುಮಾರು 20,000 ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಬೇಕಿದೆ.