ತಮಿಳುನಾಡು ರಾಜಕೀಯದಲ್ಲಿ ಹೊಸ ಟ್ವಿಸ್ಟ್: ಎಐಎಡಿಎಂಕೆ-ಡಿಎಂಕೆ ಮೈತ್ರಿ ಮೂಲಕ ಸಿಎಂ ಪಟ್ಟ ಏರ್ತಾರ ವಿಸಿಕೆ ಮುಖ್ಯಸ್ಥ?
ತಮಿಳುನಾಡಿನ ಅತಂತ್ರ ಚುನಾವಣಾ ಫಲಿತಾಂಶದ ಬಳಿಕ ಸರ್ಕಾರ ರಚನೆ ಕಸರತ್ತು ಹೊಸ ತಿರುವು ಪಡೆದುಕೊಂಡಿದೆ. ಬಹುಮತಕ್ಕೆ ಕೇವಲ ಎರಡು ಶಾಸಕರ ಕೊರತೆಯಲ್ಲಿರುವ ವಿಜಯ್ ನೇತೃತ್ವದ ಟಿವಿಕೆಗೆ ವಿಸಿಕೆ ಬೆಂಬಲ ನಿರ್ಣಾಯಕವಾಗಿದೆ. ಇದೇ ವೇಳೆ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿ ತಿರುಮಾವಳವನ್ ಅವರನ್ನು ಮುಖ್ಯಮಂತ್ರಿ ಮಾಡುವ ಚರ್ಚೆಗಳು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿವೆ.
ತೋಳ್ ತಿರುಮಾವಳವನ್ (ಸಂಗ್ರಹ ಚಿತ್ರ) -
ಚೆನ್ನೈ, ಮೇ 9: ತಮಿಳುನಾಡಿನ (Tamil Nadu) ಅತಂತ್ರ ವಿಧಾನಸಭಾ ಚುನಾವಣಾ (Assembly Election) ಫಲಿತಾಂಶದ ನಂತರ ಸರ್ಕಾರ ರಚನೆಯ ಕಸರತ್ತು ಈಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಚುನಾವಣೆಯಲ್ಲಿ ಬ್ಲಾಕ್‌ಬಸ್ಟರ್ ಪ್ರದರ್ಶನ ನೀಡಿದರೂ ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು ಸೂಪರ್‌ಸ್ಟಾರ್ ವಿಜಯ್ ನೇತೃತ್ವದ ಟಿವಿಕೆ ವಿಫಲವಾದ ಬೆನ್ನಲ್ಲೇ ವಿಸಿಕೆ (VCK) ಮುಖ್ಯಸ್ಥ ತೋಳ್ ತಿರುಮಾವಳವನ್ (Thol Thirumavalavan) ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಕೇವಲ ಇಬ್ಬರು ಶಾಸಕರನ್ನು ಹೊಂದಿರುವ ಪಕ್ಷದ ನಾಯಕ ಮುಖ್ಯಮಂತ್ರಿಯಾಗುವುದು ಅಸಾಧ್ಯವೆಂದು ತೋರಬಹುದು. ಆದರೆ ತಮಿಳುನಾಡಿನ ಇಂದಿನ ಅತಂತ್ರ ಸ್ಥಿತಿಯಲ್ಲಿ ಇದು ಸಾಧ್ಯವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರಸ್ತುತ ವಿಜಯ್ ಅವರ ಟಿವಿಕೆ 116 ಶಾಸಕರ ಬೆಂಬಲ ಹೊಂದಿದ್ದು, ಬಹುಮತಕ್ಕೆ ಇನ್ನು ಇಬ್ಬರು ಶಾಸಕರ ಅಗತ್ಯವಿದೆ. ವಿಸಿಕೆಯ ಇಬ್ಬರು ಶಾಸಕರು ಬೆಂಬಲ ನೀಡಿದರೆ ವಿಜಯ್ ಸುಲಭವಾಗಿ ಸರ್ಕಾರ ರಚಿಸಬಹುದು. ಆದರೆ ವಿಸಿಕೆ ನಾಯಕರು ಅಂತಿಮ ನಿರ್ಧಾರ ಪ್ರಕಟಿಸಲು ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ದ್ರಾವಿಡ ದೈತ್ಯರ ಅಚ್ಚರಿಯ ಮೈತ್ರಿ ಕಸರತ್ತು
ಕಳೆದ ಆರು ದಶಕಗಳಿಂದ ತಮಿಳುನಾಡು ರಾಜಕಾರಣವನ್ನು ಆಳಿದ ಪರಮ ಶತ್ರುಗಳಾದ ಡಿಎಂಕೆ (59 ಸ್ಥಾನ) ಮತ್ತು ಎಐಎಡಿಎಂಕೆ (47 ಸ್ಥಾನ) ಈಗ ವಿಜಯ್ ಅವರ ವಿಜಯಯಾತ್ರೆಯನ್ನು ತಡೆಯಲು ಒಂದಾಗುವ ಆಲೋಚನೆಯಲ್ಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೂಲಗಳ ಪ್ರಕಾರ, ಈ ಎರಡೂ ಪಕ್ಷಗಳು ಒಗ್ಗೂಡಿ ವಿಸಿಕೆಯ ಬೆಂಬಲ ಪಡೆದರೆ ಒಟ್ಟು ಸಂಖ್ಯೆ 108ಕ್ಕೆ ಏರುತ್ತದೆ. ವಿಜಯ್ ಅವರ ಟಿವಿಕೆ ಕೂಟವನ್ನು ಅಧಿಕಾರದಿಂದ ದೂರವಿಡಲು, ತಿರುಮಾವಳವನ್ ಅವರನ್ನು ಮುಖ್ಯಮಂತ್ರಿ ಮಾಡುವ ಆಮಿಷವನ್ನು ದ್ರಾವಿಡ ಪಕ್ಷಗಳು ಒಡ್ಡಿವೆ ಎಂದು ಹೇಳಲಾಗುತ್ತಿದೆ.
ತಮಿಳುನಾಡು ರಾಜಕೀಯ ಥ್ರಿಲ್ಲರ್‌ಗೆ ಮತ್ತೊಂದು ಟ್ವಿಸ್ಟ್; ಬಹುಮತ ಸಾಬೀತುಪಡಿಸುವಲ್ಲಿ ಮತ್ತೆ ಎಡವಿದ ವಿಜಯ್
ಸಂಖ್ಯಾಬಲದ ಲೆಕ್ಕಾಚಾರ
ಪ್ರಸ್ತುತ ಮ್ಯಾಜಿಕ್ ಸಂಖ್ಯೆ 118 ಆಗಿದೆ. ವಿಜಯ್ ಬಣದಲ್ಲಿ 116 ಶಾಸಕರಿದ್ದರೆ (ಟಿವಿಕೆ 107, ಕಾಂಗ್ರೆಸ್ 5, ಎಡಪಕ್ಷಗಳು 4), ಡಿಎಂಕೆ-ಎಐಎಡಿಎಂಕೆ ಮತ್ತು ವಿಡಿಸಿ ಮೈತ್ರಿಕೂಟದಲ್ಲೂ ಸಹ 108 ಶಾಸಕರಷ್ಟೇ ಆಗುತ್ತಾರೆ. ಇನ್ನೂ ಹತ್ತು ಶಾಸಕರ ಕೊರತೆಯಿದ್ದರೂ, ವಿಜಯ್ ಅವರಿಗೆ ಸರ್ಕಾರ ರಚಿಸಲು ಅವಕಾಶ ಸಿಗದಂತೆ ತಡೆಯುವುದು ಇತರ ಪಕ್ಷಗಳ ತಂತ್ರ.
ತಮಿಳುನಾಡು ರಾಜಕಾರಣದಲ್ಲಿ ಇದೊಂದು ಮಹತ್ವದ ಘಟ್ಟವಾಗಿದ್ದು, ಶನಿವಾರ ಸಂಜೆ 4 ಗಂಟೆಯ ಒಳಗೆ ವಿಸಿಕೆ ತನ್ನ ನಿಲುವನ್ನು ಸ್ಪಷ್ಟಪಡಿಸುವ ಸಾಧ್ಯತೆಯಿದೆ. ಒಂದು ವೇಳೆ ತಿರುಮಾವಳವನ್ ಮುಖ್ಯಮಂತ್ರಿಯಾದರೆ, ಅದು ಭಾರತೀಯ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕಡಿಮೆ ಶಾಸಕರನ್ನು ಹೊಂದಿರುವ ನಾಯಕನೊಬ್ಬ ಮುಖ್ಯಮಂತ್ರಿ ಪಟ್ಟಕ್ಕೇರಿದ ಅಪರೂಪದ ಘಟನೆಯಾಗಲಿದೆ. ಅಲ್ಲಿಯವರೆಗೆ ತಮಿಳುನಾಡಿನ ಜನತೆ ಈ ರಾಜಕೀಯ ಹಗ್ಗಜಗ್ಗಾಟವನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ.