ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶೀಘ್ರದಲ್ಲೇ ಬದಲಾಗಲಿದೆ ಭಾರತೀಯ ನೋಟುಗಳ ಸ್ವರೂಪ: ಕಾಗದ ಬದಲು ಪಾಲಿಮರ್ ನೋಟು ಪರಿಚಯಿಸಲು ಮುಂದಾದ ಆರ್‌ಬಿಐ; ಕಾರಣವೇನು?

RBI's Currency Makeover: ಭಾರತೀಯ ರಿಸರ್ವ್ ಬ್ಯಾಂಕ್ ದೇಶದಲ್ಲಿ ಪಾಲಿಮರ್ ಕರೆನ್ಸಿ ನೋಟುಗಳನ್ನು ಪರಿಚಯಿಸುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ. ನೋಟು ಮುದ್ರಣ ವೆಚ್ಚ ಹೆಚ್ಚಳ ಹಾಗೂ ಬೇಗ ಹಾಳಾಗುವ ಕಾಗದದ ನೋಟುಗಳ ಸಮಸ್ಯೆಗೆ ಪರಿಹಾರವಾಗಿ ಈ ಕ್ರಮ ಪರಿಗಣನೆಯಲ್ಲಿದೆ. ಆಸ್ಟ್ರೇಲಿಯಾ, ಕೆನಡಾ ಹಾಗೂ ಬ್ರಿಟನ್‌ನಂತಹ ದೇಶಗಳಲ್ಲಿ ಯಶಸ್ವಿಯಾಗಿರುವ ಪಾಲಿಮರ್ ನೋಟುಗಳು ಹೆಚ್ಚು ಬಾಳಿಕೆ ಬರುವುದರಿಂದ ದೀರ್ಘಾವಧಿಯಲ್ಲಿ ಸರ್ಕಾರದ ವೆಚ್ಚವನ್ನು ಕಡಿಮೆ ಮಾಡಲಿವೆ.

ಭಾರತಕ್ಕೆ ಕಾಲಿಡಲಿದೆ ಶೀಘ್ರವೇ ಪಾಲಿಮರ್ ಕರೆನ್ಸಿ

ಸಾಂದರ್ಭಿಕ ಚಿತ್ರ -

Profile
Sushmitha Jain May 30, 2026 4:09 PM

ನವದೆಹಲಿ, ಮೇ 30: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಮತ್ತೊಮ್ಮೆ ದೇಶದಲ್ಲಿ ಪಾಲಿಮರ್ ಕರೆನ್ಸಿ ನೋಟುಗಳನ್ನು ಪರಿಚಯಿಸಲು ಗಂಭೀರ ಚಿಂತನೆ ನಡೆಸುತ್ತಿದ್ದು, ಇತ್ತೀಚೆಗೆ ಪಾಟ್ನಾ ಮತ್ತು ಮುಂಬೈಯಲ್ಲಿ ನಡೆದ ಆಡಳಿತ ಮಂಡಳಿ ಸಭೆಗಳಲ್ಲಿ ಈ ಪ್ರಸ್ತಾವನೆ ಚರ್ಚೆಗೆ ಬಂದಿದೆ. ಭಾರತದಲ್ಲಿ ನೋಟುಗಳ ಮುದ್ರಣ ವೆಚ್ಚ ಗಗನಕ್ಕೇರುತ್ತಿರುವುದು ಮತ್ತು ಚಲಾವಣೆಯಲ್ಲಿರುವ ನೋಟುಗಳು ಬೇಗನೆ ಹರಿದು ಹಾಳಾಗುತ್ತಿರುವುದನ್ನು ಆರ್‌ಬಿಐ ವಾರ್ಷಿಕ ವರದಿಗಳು ಸ್ಪಷ್ಟಪಡಿಸಿದ್ದು, ಈ ಬದಲಾವಣೆಗೆ ಮುಖ್ಯ ಕಾರಣ.

ಸಾಮಾನ್ಯ ಕಾಗದದ ನೋಟುಗಳಿಗೆ ಹೋಲಿಸಿದರೆ ಪಾಲಿಮರ್ ನೋಟುಗಳು ಹೆಚ್ಚು ಬಾಳಿಕೆ ಬರುತ್ತವೆ. ಇವು ಕೊಳಕು ಮತ್ತು ತೇವಾಂಶವನ್ನು ಪ್ರತಿರೋಧಿಸುವ ಸಾಮರ್ಥ್ಯ ಹೊಂದಿದ್ದು, ಭಾರತದ ಹವಾಮಾನ ಮತ್ತು ಬಳಕೆಯ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತ. ಇವುಗಳ ಆರಂಭಿಕ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರೂ, ದೀರ್ಘಕಾಲದ ಬಾಳಿಕೆಯಿಂದಾಗಿ ಪದೇ ಪದೆ ನೋಟುಗಳನ್ನು ಮುದ್ರಿಸುವ ಅಗತ್ಯವಿರುವುದಿಲ್ಲ. ಇದು ದೀರ್ಘಾವಧಿಯಲ್ಲಿ ಸರ್ಕಾರದ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ನೋಟು ಮುದ್ರಣದ ವೆಚ್ಚ

ಆರ್‌ಬಿಐ ಅಂಕಿ-ಅಂಶಗಳ ಪ್ರಕಾರ, ಕರೆನ್ಸಿ ಮುದ್ರಣದ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದೆ. ಆರ್ಥಿಕ ವರ್ಷ 2025ರಲ್ಲಿ ನೋಟು ಮುದ್ರಣ ವೆಚ್ಚವು ಗರಿಷ್ಠ 6,372 ಕೋಟಿ ರುಪಾಯಿಗೆ ತಲುಪಿತ್ತು. ಆದರೆ ಆರ್ಥಿಕ ವರ್ಷ 2026ರಲ್ಲಿ ಇದು 4,875 ಕೋಟಿ ರುಪಾಯಿಗೆ ಇಳಿದಿದೆ. ಇದಕ್ಕೂ ಮುನ್ನ 2017ರಲ್ಲಿ ನೋಟು ಅಮಾನ್ಯೀಕರಣ ಮತ್ತು ಹೊಸ ನೋಟುಗಳ ಬಿಡುಗಡೆಯಿಂದಾಗಿ ಈ ವೆಚ್ಚ ದಾಖಲೆಯ 7,965 ಕೋಟಿ ರುಪಾಯಿಗೆ ಏರಿತ್ತು.

ಜನರಲ್ ಕ್ಯಾಟಲಿಸ್ಟ್ ನೇತೃತ್ವದಲ್ಲಿ 63 ಮಿಲಿಯನ್ ಡಾಲರ್ ಸಂಗ್ರಹಿಸಿದ ಸ್ಕ್ಯಾಪಿಯಾ

ಕೇವಲ ಮುದ್ರಣ ವೆಚ್ಚ ಮಾತ್ರವಲ್ಲದೆ, ಹಾನಿಗೊಳಗಾದ ಮತ್ತು ಕೊಳಕಾದ ನೋಟುಗಳನ್ನು ನಿರಂತರವಾಗಿ ಬದಲಾಯಿಸುವುದು ಆರ್‌ಬಿಐಗೆ ದೊಡ್ಡ ಸವಾಲಾಗಿದೆ. 2026ರ ಆರ್ಥಿಕ ವರ್ಷದಲ್ಲಿ ಚಲಾವಣೆಯಿಂದ ಹಿಂಪಡೆಯಲಾದ ನೋಟುಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ 500 ರುಪಾಯಿಯ ನೋಟುಗಳು (598.3 ಕೋಟಿ ಪ್ರತಿಗಳು) ಮತ್ತು 100 ರುಪಾಯಿಯ ನೋಟುಗಳು (581.1 ಕೋಟಿ ಪ್ರತಿಗಳು) ಪ್ರಮುಖವಾದವು.

ಜಾಗತಿಕವಾಗಿ ಆಸ್ಟ್ರೇಲಿಯಾ, ಕೆನಡಾ ಮತ್ತು ಬ್ರಿಟನ್‌ನಂತಹ ದೇಶಗಳು ಈಗಾಗಲೇ ಸಂಪೂರ್ಣವಾಗಿ ಪಾಲಿಮರ್ ಕರೆನ್ಸಿಗೆ ಬದಲಾಗಿವೆ. ಭಾರತವು ಈ ಹಿಂದೆ 2012ರಲ್ಲಿ ಪಾಲಿಮರ್ ನೋಟುಗಳ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತಾದರೂ, ಅದು ಯಶಸ್ವಿಯಾಗಿ ಮುಂದುವರಿದಿರಲಿಲ್ಲ. ಆದರೆ ಪ್ರಸ್ತುತ ಹೆಚ್ಚುತ್ತಿರುವ ವೆಚ್ಚ ಮತ್ತು ಬಾಳಿಕೆಯ ಸವಾಲುಗಳನ್ನು ಎದುರಿಸಲು ಆರ್‌ಬಿಐ ಈ ಪ್ರಸ್ತಾವನೆಯನ್ನು ಮರುಪರಿಶೀಲಿಸುತ್ತಿದ್ದು, ಪಾಲಿಮರ್ ನೋಟುಗಳ ಪರವಾಗಿ ಬಲವಾದ ವಾದ ಮೂಡಿ ಬಂದಿದೆ. ಈಗ ಭಾರತಕ್ಕೆ ನೋಟುಗಳನ್ನು ಮುದ್ರಿಸುವುದಷ್ಟೇ ಅಲ್ಲ, ಅವುಗಳನ್ನು ದೀರ್ಘಕಾಲ ಬಾಳಿಕೆ ಬರುವಂತೆ ಮಾಡುವುದು ಅಗತ್ಯವಾಗಿದೆ.