ದೇಶದಲ್ಲಿ ಎಲ್‌ಪಿಜಿ ಕೊರತೆಯಾಗಿಲ್ಲ, ವಿತರಣೆಗೆ ಬೇಕಾಗುವಷ್ಟು ಇದೆ: ಕೇಂದ್ರ ಸರ್ಕಾರ ಸ್ಪಷ್ಟನೆ
ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ಏಕಾಏಕಿ ತೈಲ, ಅಡುಗೆ ಅನಿಲ ಬೇಡಿಕೆ ಹೆಚ್ಚಿತ್ತು. ಇದರ ಪರಿಣಾಮ ವಿತರಣೆಯಲ್ಲಿ ಉಂಟಾದ ವ್ಯತ್ಯಯದಿಂದ ದೇಶಾದ್ಯಂತ ತೈಲ, ಅಡುಗೆ ಅನಿಲ ಬಿಕ್ಕಟ್ಟು ಕಾಣಿಸಿಕೊಂಡಿದೆ. ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ. ಈ ಕುರಿತು ವಿತರಕರಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡಿದೆ.
ಸಂಗ್ರಹ ಚಿತ್ರ -
ನವದೆಹಲಿ: ದೇಶದಲ್ಲಿ ಎಲ್‌ಪಿಜಿ ಕೊರತೆ (LPG crisis) ಇಲ್ಲ ಎಂದು ಕೇಂದ್ರ ಸರ್ಕಾರ (central government) ಸ್ಪಷ್ಟನೆಯನ್ನು ನೀಡಿದೆ. ಇಸ್ರೇಲ್ (Israel) ಮತ್ತು ಯುಎಸ್ (US) ಸೇನಾ ಪಡೆಯು ಇರಾನ್ (Iran war) ಮೇಲೆ ದಾಳಿ ನಡೆಸಿದ ಪರಿಣಾಮ ಪಶ್ಚಿಮ ಏಷ್ಯಾದಲ್ಲಿ (West Asia Conflict) ಉಂಟಾಗಿರುವ ಉದ್ವಿಗ್ನತೆಯ ಕಾರಣದಿಂದ ದೇಶದಲ್ಲಿ ಏಕಾಏಕಿ ತೈಲ, ಅಡುಗೆ ಅನಿಲ ಬೇಡಿಕೆ ಹೆಚ್ಚಾಗಿದ್ದು, ಇದರ ಪರಿಣಾಮ ವಿತರಣೆಯ ಮೇಲಾಗಿದೆ. ಹೀಗಾಗಿ ದೇಶಾದ್ಯಂತ ತೈಲ, ಅಡುಗೆ ಅನಿಲ ಬಿಕ್ಕಟ್ಟು ಕಾಣಿಸಿಕೊಂಡಿತ್ತು. ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ. ಈ ಕುರಿತು ವಿತರಕರಿಂದ ಯಾವುದೇ ದೂರುಗಳು ಬಂದಿಲ್ಲ ಎಂಬುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಭಾರತದಲ್ಲಿ ಎಲ್‌ಪಿಜಿ ಪರಿಸ್ಥಿತಿ ಕಳವಳಕಾರಿಯಾಗಿದೆ ಎನ್ನುವ ವಾತಾವರಣ ನಿರ್ಮಾಣವಾಗಿದ್ದು, ಈ ಕುರಿತು ವಿತರಕರು ಯಾವುದೇ ದೂರು ನೀಡಿಲ್ಲ ಎಂದು ಸೋಮವಾರ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡಿದೆ. ಸಿಎನ್‌ಜಿ (ಸಂಕುಚಿತ ನೈಸರ್ಗಿಕ ಅನಿಲ) ಮತ್ತು ಪಿಎನ್‌ಜಿ (ಪೈಪ್ಡ್ ನೈಸರ್ಗಿಕ ಅನಿಲ) ಯ ಶೇ. 100ರಷ್ಟು ಪೂರೈಕೆ ಇದೆ. ಪೆಟ್ರೋಲ್ ಪಂಪ್‌ಗಳಲ್ಲಿಯೂ ಅನಿಲ ಖಾಲಿಯಾಗಿರುವ ಕುರಿತು ಯಾವುದೇ ದೂರುಗಳು ಬಂದಿಲ್ಲ ಎಂದು ಸರ್ಕಾರ ತಿಳಿಸಿದೆ.
ಭಾರತಕ್ಕೆ ಎಲ್‌ಪಿಜಿ ಹೊತ್ತು ತರುವ ನೌಕೆಗೆ ಮಾತ್ರ ಹೊರ್ಮುಜ್ ಜಲಸಂಧಿಯ ದಾರಿ ಬಿಡಲು ಇರಾನ್ ಒಪ್ಪಿಗೆ
ದೇಶೀಯ ಗ್ರಾಹಕರ ಹಿತಾಸಕ್ತಿಗಳಿಗೆ ಆದ್ಯತೆ ನೀಡಲು ಅದರಲ್ಲೂ ವಿಶೇಷವಾಗಿ ಮನೆ ಮತ್ತು ಆದ್ಯತೆಯ ವಲಯಗಳಿಗೆ ನಿರಂತರ ಎಲ್‌ಪಿಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಎಲ್‌ಪಿಜಿ ಪರಿಸ್ಥಿತಿ ಕಳವಳಕಾರಿಯಾಗಿದ್ದರೂ ಕೂಡ ಅದು ದೇಶೀಯ ಬಳಕೆದಾರರಿಗೆ ಬೇಕಾಗುವಷ್ಟು ಲಭ್ಯವಿದೆ. ವಾಣಿಜ್ಯ ಮಾರಾಟವನ್ನು ಭಾಗಶಃ ಮಾತ್ರ ವಿತರಣೆ ಮಾಡಲಾಗುತ್ತಿದೆ. ಯಾವುದೇ ರೀತಿಯಲ್ಲಿ ಹೆಚ್ಚಿನ ಸಂಗ್ರಹಣೆಗೆ ಅವಕಾಶವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರ್ಕೆಟಿಂಗ್ ಮತ್ತು ತೈಲ ಸಂಸ್ಕರಣಾಗಾರ) ಸುಜಾತ ಶರ್ಮಾ ಅವರು, ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಚ್ಚಾ ತೈಲ ಲಭ್ಯವಿದೆ. ಎಲ್ಲಾ ಸಂಸ್ಕರಣಾಗಾರಗಳು ಅತ್ಯುನ್ನತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಮ್ಮ ಪೆಟ್ರೋಲ್ ಪಂಪ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಿಯೂ ಕೊರತೆಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದರು.
ಇಂಡಿಯನ್ ಆಯಿಲ್ 500 ರೂ. ಉಚಿತ ಅನಿಲವನ್ನು ನೀಡುತ್ತಿದ್ದು, ಬಿಪಿಸಿಎಲ್ ಮತ್ತು ಗೈಲ್‌ನಂತಹ ಇತರ ಕಂಪೆನಿಗಳು ಜನರು ಪಿಎನ್‌ಜಿಯನ್ನು ಗರಿಷ್ಠ ಬಳಕೆ ಮಾಡುವಂತೆ ಪ್ರೋತ್ಸಾಹಿಸುತ್ತಿದೆ. ಸಾಧ್ಯವಾದಲ್ಲೆಲ್ಲಾ ಪಿಎನ್‌ಜಿ ಸಂಪರ್ಕಗಳಿಗೆ ಬದಲಾಯಿಸಲು ಎಲ್‌ಪಿಜಿ ಗ್ರಾಹಕರನ್ನು ವಿನಂತಿಸಿದೆ ಎಂದು ಅವರು ತಿಳಿಸಿದರು.
Stock Market: ಸೆನ್ಸೆಕ್ಸ್ 1,000 ಅಂಕ ಜಿಗಿತ, ಕೊನೆಗೂ ಅಬ್ಬರಿಸಿದ ಗೂಳಿ; ಕಾರಣವೇನು?
ನಗರ ಪ್ರದೇಶಗಳಲ್ಲಿನ ವಾಣಿಜ್ಯ ಎಲ್‌ಪಿಜಿ ಗ್ರಾಹಕರು ಪಿಎನ್‌ಜಿ ಸಂಪರ್ಕಗಳನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ಇದಕ್ಕಾಗಿ ಅವರು ಇಮೇಲ್, ಪತ್ರ ಅಥವಾ ನಗರ ಅನಿಲ ವಿತರಣಾ (ಸಿಜಿಡಿ) ಕಂಪನಿಗಳ ಗ್ರಾಹಕ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಎಲ್‌ಪಿಜಿ ಸರಬರಾಜಿನ ಮೇಲಿನ ಒತ್ತಡವನ್ನು ಕಡಿಮೆ ರೆಸ್ಟೋರೆಂಟ್‌ಗಳು ಸೇರಿದಂತೆ ಕೆಲವು ವಲಯಗಳಿಗೆ ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.