ವ್ಯಾಪಾರಿಗಳಿಗೆ ತುಸು ರಿಲೀಫ್: ಯುಪಿಐ ವಹಿವಾಟಿನ ಎಂಡಿಆರ್ ಶುಲ್ಕ ಜಾರಿ ಮುಂದೂಡಿಕೆ ಸಾಧ್ಯತೆ
UPI transaction Fees: 2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಶೇ. 0.4ರ ಮರ್ಚೆಂಟ್ ಡಿಸ್ಕೌಂಟ್ ದರವನ್ನು ಹಬ್ಬದ ಋತುವಿನ ಬಳಿಕ ಜಾರಿಗೊಳಿಸುವ ಸಾಧ್ಯತೆಯಿದೆ. ವರದಿಯ ಪ್ರಕಾರ, ವ್ಯಾಪಾರಿಗಳ ಸಂಘಟನೆಗಳು, ಫಿನ್‌ಟೆಕ್ ಕಂಪನಿಗಳು ಮತ್ತು ಪಾವತಿ ಸೇವಾ ಸಂಸ್ಥೆಗಳು ಈ ನಿಯಮದ ಜಾರಿಯನ್ನು ಮುಂದೂಡುವಂತೆ ಎನ್‌ಪಿಸಿಐಗೆ ಮನವಿ ಮಾಡಿವೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಅ. 9: 2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಶೇ. 0.4ರ ಮರ್ಚೆಂಟ್ ಡಿಸ್ಕೌಂಟ್ ದರ (MDR) ಹಬ್ಬದ ಋತುವಿನ ಬಳಿಕ ಜಾರಿಯಾಗುವ ಸಾಧ್ಯತೆ ಇದೆ. ಈ ಮೊದಲು ಅಕ್ಟೋಬರ್ 15ರಂದು ಈ ನಿಯಮ ಜಾರಿಯಾಗಲಿದೆ ಎನ್ನಲಾಗಿತ್ತು. ಇದೀಗ 2027ರ ಜನವರಿವರೆಗೆ ಮುಂದೂಡುವ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ವರದಿಯ ಪ್ರಕಾರ, ವ್ಯಾಪಾರಿಗಳ ಸಂಘಟನೆಗಳು, ಫಿನ್‌ಟೆಕ್ ಕಂಪನಿಗಳು ಮತ್ತು ಪಾವತಿ ಸೇವಾ ಸಂಸ್ಥೆಗಳು ಈ ನಿಯಮದ ಜಾರಿಯನ್ನು ಮುಂದೂಡುವಂತೆ ಎನ್‌ಪಿಸಿಐಗೆ ಮನವಿ ಮಾಡಿವೆ. ವಿವಿಧ ವಹಿವಾಟುಗಳಿಗೆ ಬೇರೆ ಬೇರೆ ಎಂಡಿಆರ್ ದರಗಳನ್ನು ಅನ್ವಯಿಸುವುದು, ಯಾವ ವಹಿವಾಟುಗಳಿಗೆ ಈ ಶುಲ್ಕ ಅನ್ವಯಿಸಬೇಕು ಎಂಬ ಗೊಂದಲ ಹಾಗೂ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ವ್ಯಾಪಾರಿಗಳು ಸಿದ್ಧರಾಗದೆ ಇರುವುದು ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ.
ಹಣಕಾಸು ಸಚಿವಾಲಯದೊಂದಿಗೆ ಚರ್ಚೆಗಳು ನಡೆಯುತ್ತಿರುವುದರಿಂದ ಮುಂದಿನ ಎರಡು ದಿನಗಳಲ್ಲಿ ಎನ್‌ಪಿಸಿಐ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಕಳೆದ ತಿಂಗಳು ಯುಪಿಐ ಸ್ಟೀರಿಂಗ್ ಸಮಿತಿಯು 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಶೇ. 0.4ರಷ್ಟು ಎಂಡಿಆರ್ ನಿಗದಿಪಡಿಸಿತ್ತು. ಈ ನಿಯಮವು ಅಕ್ಟೋಬರ್ 15ರಿಂದ ಜಾರಿಗೆ ಬರಬೇಕಿತ್ತು.
ನಿರ್ಮಲಾ ಸೀತಾರಾಮನ್ ಜೊತೆ ಸಭೆ ಬಳಿಕ ‘ನೋ ಯುಪಿಐ ಡೇ’ ಪ್ರತಿಭಟನೆ ಹಿಂಪಡೆದ ವ್ಯಾಪಾರಿಗಳು
ಪಾವತಿಗಳನ್ನು ಪ್ರಕ್ರಿಯೆಗೊಳಿಸುವ ಸೇವೆಗಾಗಿ ವ್ಯಾಪಾರಿಗಳು ಬ್ಯಾಂಕ್‌ಗಳಿಗೆ ಪಾವತಿಸುವ ಶುಲ್ಕವೇ ಮರ್ಚೆಂಟ್ ಡಿಸ್ಕೌಂಟ್ ದರ. ಶೇ. 0.4ರ ದರದ ಪ್ರಕಾರ, 2,000 ರೂ. ವಹಿವಾಟಿಗೆ 8 ರೂ. ಹಾಗೂ 10,000 ರೂ. ವಹಿವಾಟಿಗೆ 40 ರೂ. ಶುಲ್ಕ ಅನ್ವಯವಾಗಲಿದೆ.
ಜಾರಿ ವಿಳಂಬವಾಗಲು ಕಾರಣವೇನು?
ವರದಿಯ ಪ್ರಕಾರ, ಹಬ್ಬದ ಋತು ಮುಗಿಯುವವರೆಗೆ ಎಂಡಿಆರ್ ನಿಯಮದ ಜಾರಿಯನ್ನು ಮುಂದೂಡುವಂತೆ ಹಲವು ಪಾವತಿ ಉದ್ಯಮಗಳ ಸಂಘಟನೆಗಳು ಮತ್ತು ವ್ಯಾಪಾರಿಗಳು ಎನ್‍ಪಿಸಿಐಗೆ ಮನವಿ ಮಾಡಿವೆ. ಹಬ್ಬದ ಸಂದರ್ಭದಲ್ಲಿ ಎಂಡಿಆರ್ ಶುಲ್ಕ ಜಾರಿಯಾದರೆ ವ್ಯಾಪಾರಕ್ಕೆ ಮಾಡುವ ವೆಚ್ಚ ಹೆಚ್ಚಾಗಬಹುದು ಎಂಬ ಆತಂಕ ಸರ್ಕಾರಕ್ಕೂ ಇದೆ. ಈಗಾಗಲೇ ಹಣದುಬ್ಬರದಿಂದಾಗಿ ಗ್ರಾಹಕರು ಬೆಲೆ ಏರಿಕೆಯ ಒತ್ತಡ ಎದುರಿಸುತ್ತಿರುವ ಸಮಯದಲ್ಲಿ, ಈ ಹೆಚ್ಚುವರಿ ಶುಲ್ಕವು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದು ಎನ್ನುವುದು ಕಳವಳಕ್ಕೆ ಕಾರಣ.
ಹೆಚ್ಚಿನ ವಹಿವಾಟು ವೆಚ್ಚವನ್ನು ವ್ಯಾಪಾರಿಗಳು ಗ್ರಾಹಕರಿಗೆ ವರ್ಗಾಯಿಸಬಹುದು ಎಂಬ ಕಳವಳವೂ ಇದೆ. ಹಣದುಬ್ಬರ ಹೆಚ್ಚಳದಿಂದ ಜನರ ಖರೀದಿ ಸಾಮರ್ಥ್ಯ ಕುಂಠಿತವಾಗುತ್ತಿರುವ ಹಿನ್ನೆಲೆಯಲ್ಲಿ, ಹಬ್ಬದ ಮಾರಾಟದ ಋತುವಿಗೂ ಮುನ್ನ ಗ್ರಾಹಕರ ಖರೀದಿ ಉತ್ಸಾಹ ಕಡಿಮೆಯಾಗಬಹುದು ಎಂಬ ಆತಂಕ ಉದ್ಯಮ ವಲಯದಲ್ಲಿದೆ ಎಂದು ವರದಿ ತಿಳಿಸಿದೆ.
ಎನ್‌ಪಿಸಿಐ ಈ ನಿಯಮದ ಜಾರಿಯನ್ನು ಮುಂದೂಡಿದರೆ, ವ್ಯಾಪಾರಿಗಳು ಮತ್ತು ಪಾವತಿ ಕಂಪನಿಗಳಿಗೆ ಹೊಸ ಎಂಡಿಆರ್ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದಕ್ಕೆ ತಕ್ಕಂತೆ ತಮ್ಮ ಪಾವತಿ ವ್ಯವಸ್ಥೆಗಳನ್ನು ಸಿದ್ಧಪಡಿಸಿಕೊಳ್ಳಲು ಹೆಚ್ಚುವರಿ ಸಮಯ ಸಿಗಲಿದೆ.