Impact of Freebies: ರಾಜಕೀಯ ಪಕ್ಷಗಳ ಉಚಿತ ಕೊಡುಗೆಯ ಹೊರೆ ಯಾರ ಮೇಲೆ? ದೇಶದ ಆರ್ಥಿಕತೆಯ ಮೇಲೆ ಇದರ ಪರಿಣಾಮವೇನು?
Vishwavani Money: ಚುನಾವಣೆ ಹತ್ತಿರ ಬಂದಾಗ ರಾಜಕೀಯ ಪಕ್ಷಗಳು ಸಾಕಷ್ಟು ಉಚಿತ ಕೊಡುಗೆಗಳ ಘೋಷಣೆಯನ್ನು ಮಾಡುತ್ತವೆ. ಇದರ ಲಾಭ ನಿಜವಾಗಿಯೂ ಇದೆಯೇ? ಇದರ ಹೊರೆ ಹೊರುವಷ್ಟು ಆಡಳಿತ ಪಕ್ಷಗಳು ಸಮರ್ಥವಾಗಿವೆಯೇ? ಮುಂದೆ ಇದರ ಪರಿಣಾಮಗಳು ಏನು ಎಂಬುದರ ಕುರಿತು ಆರ್ಥಿಕ ತಜ್ಞರು ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಅಶೋಕ್ ದೇವಾನಾಂಪ್ರಿಯ -
ಬೆಂಗಳೂರು, ಮೇ 27: ಚುನಾವಣೆಗಳು ಹತ್ತಿರ ಬಂದಾಗ ಉಚಿತ ಕೊಡುಗೆಗಳನ್ನು (Freebies) ರಾಜಕೀಯ ಪಕ್ಷಗಳು ಗೆಲುವಿನ ಮುಖ್ಯ ಸಾಧನ ಎಂದು ಮಾಡಿಕೊಂಡಿವೆ. ಆದರೆ ಇದು ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀಳುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳ ಹಿಂದೆ ಹಲವು ವಿಷಯಗಳಿವೆ. ಅದರಲ್ಲಿ ಮುಖ್ಯವಾಗಿ ಯಾವುದನ್ನು ಕೊಡಬೇಕು, ಯಾವುದನ್ನು ಕೊಡಬಾರದು ಎಂಬುದನ್ನು ರಾಜಕೀಯ ಪಕ್ಷಗಳು ಅರಿತಿರಬೇಕು ಎನ್ನುತ್ತಾರೆ ಖ್ಯಾತ ಹೂಡಿಕೆ ತಜ್ಞ, ಕೌಟಿಲ್ಯ ಕ್ಯಾಪಿಟಲ್ ಸಂಸ್ಥಾಪಕ (Founder of cautilya Capital) ಅಶೋಕ್ ದೇವನಾಂಪ್ರಿಯ. 'ವಿಶ್ವವಾಣಿ ಮನಿ' (Vishwavani money) ಯುಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಉಚಿತ ಕೊಡುಗೆಗಳು ರಾಜಕೀಯ ಪಕ್ಷಗಳಿಗೆ ತಕ್ಷಣದ ಸಂತೃಪ್ತಿ ಕೊಡಬಲ್ಲ ಒಂದು ಸಾಧನ ಮಾತ್ರ ಎಂದು ಹೇಳಿದರು.
ಉಚಿತ ಕೊಡುಗೆಗಳನ್ನು ಘೋಷಿಸುವಾಗ ಏನು ಕೊಡಬೇಕು, ಏನು ಕೊಡಬಾರದು ಎಂಬುದನ್ನು ಅರಿತಿರಬೇಕು. ಇಲ್ಲವಾದರೆ ಇದು ಹೊರೆಯಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿಗೆ ಉಚಿತವಾಗಿ ಏನಾದರೂ ಕೊಡುವುದಾದರೆ ಅದರಿಂದ ಅವರು ದೀರ್ಘಾವಧಿಯ ಪ್ರಯೋಜನ ಪಡೆಯುವಂತಿರಬೇಕು. ಆಗ ಅದು ಲಾಭದಾಯಕವೆನಿಸುತ್ತದೆ ಎಂದು ಅಶೋಕ್ ದೇವನಾಂಪ್ರಿಯ ತಿಳಿಸಿದರು.
ವಿಡಿಯೊ ಇಲ್ಲಿದೆ:
ಶಿಕ್ಷಣ, ಹೆಲ್ತ್ ಕೇರ್ ಬಿಟ್ಟು ಬೇರೆ ಯಾವುದೇ ಕ್ಷೇತ್ರದಲ್ಲಿ ಉಚಿತ ಕೊಡುಗೆ ಕೊಡುವುದು, ಈ ಕುರಿತು ಘೋಷಿಸುವುದು ಅಪಾಯಕಾರಿ. ಯಾಕೆಂದರೆ ಇದರಿಂದ ನಷ್ಟವೇ ಅಧಿಕ. ಅವಶ್ಯಕತೆಯನ್ನು ಉಚಿತವಾಗಿ ಕೊಡಬೇಕು. ಶೋಕಿಗಾಗಿ ಬಳಕೆಯಾಗುವುದನ್ನು ಯಾವತ್ತೂ ಉಚಿತವಾಗಿ ನೀಡಬಾರದು ಎನ್ನುತ್ತಾರೆ ಅವರು.
ಅನ್ ಲಿಸ್ಟೆಡ್ ಸ್ಟಾಕ್ ಮೇಲೆ ಹೂಡಿಕೆ ಮಾಡುವಾಗ ಇರಲಿ ಎಚ್ಚರ
ಉಚಿತವಾಗಿ ಕೊಡುವಾಗ ಲಕ್ಷಾಂತರ ಜನರನ್ನು ನೋಡಬೇಕು. ಅದರಿಂದ ಎಷ್ಟು ಮಂದಿಗೆ ಅನುಕೂಲವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಯಾವುದೇ ಒಂದು ಸವಲತ್ತನ್ನು ಉಚಿತವಾಗಿ ಕೊಡುವಾಗ ಅದರ ದೀರ್ಘಾವಧಿಯ ಪ್ರಯೋಜನಗಳ ಬಗ್ಗೆಯೂ ಅರಿವಿರಬೇಕು ಎಂದು ವಿವರಿಸಿದರು.
ಉಚಿತ ಕೊಡುಗೆಗಳು ಸರ್ಕಾರಕ್ಕೆ ಒತ್ತಡ ಉಂಟು ಮಾಡುತ್ತವೆ. ಸರ್ಕಾರ ಕೂಡ ಒಂದು ಮನೆ ಇದ್ದಂತೆ. ಅದು ತನ್ನ ಆದಾಯದಿಂದ ಸಾಲ, ಖರ್ಚು ನೋಡಿಕೊಂಡು ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕಾಗುತ್ತದೆ. ಹೀಗಾಗಿ ಉಚಿತ ಕೊಡುಗೆಗಳಿಗೆ ಒಂದು ಚೌಕಟ್ಟು ಮುಖ್ಯವಾಗಿರಬೇಕು. ಇದು ರಾಜಕೀಯ ಪಕ್ಷಗಳಿಗೆ ಗೆಲುವಿನ ಶಾರ್ಟ್ ಕಟ್ ಆಗಿರಬಾರದು ಎಂದು ಅವರು ಅಭಿಪ್ರಾಯಪಟ್ಟರು
ಚಿನ್ನ ಅಥವಾ ಬೆಳ್ಳಿ ಹೂಡಿಕೆಗೆ ಯಾವುದು ಬೆಸ್ಟ್? ತಜ್ಞರು ಏನಂತಾರೆ?
ಉಚಿತ ಕೊಡುಗೆಗಳ ಬಗ್ಗೆ ಒಂದು ಕಾನೂನು ಬರಬೇಕಿದೆ. ಯಾಕೆಂದರೆ ಉಚಿತ ಬಸ್ ಇದ್ದರೆ ಅದು ದುರ್ಬಳಕೆಯಾಗುತ್ತದೆ. ಅದೇ ಉಚಿತ ಸಿಲಿಂಡರ್ ಕೊಟ್ಟರೆ ಅನಾವಶ್ಯಕವಾಗಿ ಅದು ಬಳಕೆಯಾಗುವುದಿಲ್ಲ. ಚುನಾವಣೆಯಲ್ಲಿ ತಕ್ಷಣ ಗೆಲುವು ಸಾಧಿಸಲು ಬಳಕೆಯಾಗುವ ಉಚಿತ ಕೊಡುಗೆಗಳು ಮನುಷ್ಯರನ್ನು ಸೋಮಾರಿ ಮಾಡುತ್ತದೆ. 20ರಿಂದ 70 ವರ್ಷದ ನಡುವಿನ ಜನರು ದೇಶದ ಆಸ್ತಿ. ಅವರನ್ನು ಸೋಮಾರಿ ಮಾಡದ ಉಚಿತ ಕೊಡುಗೆಗಳನ್ನು ಕೊಡಬೇಕು. ಆಗಲೇ ದೇಶದ ಪ್ರಗತಿ ಸಾಧ್ಯವಿದೆ ಎಂದು ಅಶೋಕ್ ದೇವನಾಂಪ್ರಿಯ ಹೇಳಿದರು.