ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold-Silver Prices Fall: ಇರಾನ್‌ ಯುದ್ಧ ಹೊರತಾಗಿಯೂ ಬಂಗಾರದ ದರ ಇಳಿದಿದ್ದೇಕೆ?

Gold Silver Price: ಇರಾನ್‌ ಯುದ್ಧದ ಹೊರತಾಗಿಯೂ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಸಂಭವಿಸಿದೆ. ಯುದ್ಧ ಆರಂಭವಾದ ಬಳಿಕ 38 ದಿನಗಳಲ್ಲಿ 24 ಕ್ಯಾರಟ್‌ ಬಂಗಾರದಲ್ಲಿ 10 ಗ್ರಾಂಗೆ 11,730 ರುಪಾಯಿಗೆ ಇಳಿದಿದೆ. ಅದೇ ರೀತಿ 22 ಕ್ಯಾರಟ್‌ ಬಂಗಾರದ ದರದಲ್ಲಿ 10 ಗ್ರಾಂಗೆ 10,750 ರುಪಾಯಿ ಕಡಿಮೆಯಾಗಿದೆ. ಅದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

ಇರಾನ್‌ ಯುದ್ಧ ಹೊರತಾಗಿಯೂ ಬಂಗಾರದ ದರ ಇಳಿಕೆ

ಸಾಂದರ್ಭಿಕ ಚಿತ್ರ -

ದೆಹಲಿ, ಏ. 7: ಇರಾನ್‌ ಯುದ್ಧದ (Iran War) ಹೊರತಾಗಿಯೂ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಸಂಭವಿಸಿದೆ (Gold Silver Price). 2026ರ ಫೆಬ್ರವರಿ 27ರಂದು 24 ಕ್ಯಾರಟ್‌ನ ಪ್ರತಿ 10 ಗ್ರಾಂ ಚಿನ್ನದ ದರ 1,61,570/- ಇತ್ತು. ಆಭರಣ ಚಿನ್ನ ಅಥವಾ 22 ಕ್ಯಾರಟ್‌ನ 10 ಗ್ರಾಂ ಬಂಗಾರದ ದರ 1,48,100/- ಇತ್ತು. 2026ರ ಏಪ್ರಿಲ್‌ 7ರಂದು 24 ಕ್ಯಾರಟ್‌ ಬಂಗಾರದ ದರ 1,49,840/- ಇತ್ತು. 22 ಕ್ಯಾರಟ್‌ ಚಿನ್ನದ ದರ 1,37,350/- ಇತ್ತು. ಅಂದರೆ ಯುದ್ಧ ಆರಂಭವಾದ ಬಳಿಕ 38 ದಿನಗಳಲ್ಲಿ 24 ಕ್ಯಾರಟ್‌ ಬಂಗಾರದಲ್ಲಿ 10 ಗ್ರಾಂಗೆ 11,730/- ಇಳಿದಿದೆ. ಅದೇ ರೀತಿ 22 ಕ್ಯಾರಟ್‌ ಬಂಗಾರದ ದರದಲ್ಲಿ 10 ಗ್ರಾಂಗೆ 10,750/- ಇಳಿಕೆಯಾಗಿದೆ.

ಸಾಮಾನ್ಯವಾಗಿ ಜಿಯೊ ಪಾಲಿಟಿಕಲ್‌ ಸಂಘರ್ಷಗಳು, ಯುದ್ಧದ ಸಂದರ್ಭದಲ್ಲಿ ಬಂಗಾರದ ದರ ಏರಿಕೆಯಾಗುತ್ತದೆ. ಆದರೆ ಈ ಸಲ ಪಶ್ಚಿಮ ಏಷ್ಯಾದಲ್ಲಿ ಇರಾನ್‌ ಯುದ್ಧ ಸಂಭವಿಸಿದ್ದರೂ, ಬಂಗಾರದ ದರ ಇಳಿಕೆಯಾಗಿದೆ.

ಇದಕ್ಕೆ ಹಲವು ಕಾರಣಗಳು ಇವೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಪ್ರಾಬಲ್ಯ ಹೆಚ್ಚಳವಾಗಿರುವುದು, ಅಮೆರಿಕ ಟ್ರೆಶರಿ ಬಾಂಡ್‌ಗಳ ಉತ್ಪತ್ತಿಯಲ್ಲಿ ಹೆಚ್ಚಳವಾಗಿರುವುದು, ಪ್ರಾಫಿಟ್‌ ಟೇಕಿಂಗ್‌ ಪ್ರಭಾವ ಬೀರಿದೆ. ಡಾಲರ್‌ ಪ್ರಬಲವಾಗಿರುವುದರಿಂದ ಈಗಿ ಜಿಯೊ ಪಾಲಿಟಿಕಲ್‌ ಅನಿಶ್ಚಿತತೆಯ ಸಂದರ್ಭ ಹೂಡಿಕೆದಾರರಿಗೆ ಬಂಗಾರ ಮತ್ತು ಬೆಳ್ಳಿಗಿಂತ ಡಾಲರ್‌ ಹೆಚ್ಚು ಆಕರ್ಷಕವಾಗಿದೆ. ಡಾಲರ್‌ ಪ್ರಾಬಲ್ಯ ಹೆಚ್ಚುತ್ತಿರುವುದು ಇದಕ್ಕೆ ಕಾರಣ.

ನಗದು ನಿಷೇಧ, ಐಡಿ ಕಾರ್ಡ್ ಪ್ರದರ್ಶನಕ್ಕೆ ಬ್ರೇಕ್; ಏಪ್ರಿಲ್ 10ರಿಂದ ಹೆದ್ದಾರಿ ಪ್ರಯಾಣಕ್ಕೆ ಹೊಸ ನಿಯಮ

ಸ್ಟಾಕ್‌ ಮಾರ್ಕೆಟ್‌ ಮತ್ತು ಇತರ ಕಡೆಗಳಲ್ಲಿ ನಷ್ಟ ಉಂಟಾಗಿರುವುದರಿಂದ ಹೂಡಿಕೆದಾರರು ಬಂಗಾರವನ್ನು ಮತ್ತು ಬೆಳ್ಳಿಯನ್ನು ಮಾರಾಟ ಮಾಡುತ್ತಿದ್ದಾರೆ. ಕಚ್ಚಾ ತೈಲ ದರ ಹೆಚ್ಚುತ್ತಿರುವುದರಿಂದ ಹಣದುಬ್ಬರ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಫೆಡರಲ್‌ ರಿಸರ್ವ್‌ ಬಡ್ಡಿ ದರ ಇಳಿಸುವ ನಿರೀಕ್ಷೆಯೂ ಕಡಿಮೆಯಾಗಿದೆ. ಇದು ಡಾಲರ್‌ ಅನ್ನು ಪ್ರಬಲಗೊಳಿಸಿದೆ. ಇರಾನ್‌ ಯುದ್ಧದ ಪರಿಣಾಮವಾಗಿ, ಕೈಗಾರಿಕಾ ವಲಯದಲ್ಲಿ ಕೂಡ ಬೆಳ್ಳಿಗೆ ಬೇಡಿಕೆ ಇತ್ತೀಚೆಗೆ ಕಡಿಮೆಯಾಗಿದೆ.

2025ರಲ್ಲಿ ಬಂಗಾರದ ದರದಲ್ಲಿ 60 ಪರ್ಸೆಂಟ್‌ ಏರಿಕೆಯಾಗಿತ್ತು. ಬೆಳ್ಳಿಯ ದರ 160% ಹೆಚ್ಚಳವಾಗಿತ್ತು. ಬಂಗಾರ ಈಗ ಹೂಡಿಕೆಯ ಪ್ರಮುಖ ಸಾಧನಗಳಲ್ಲೊಂದಾಗಿದೆ. ಇಟಿಎಫ್‌ಗಳೂ ಸಾಕಷ್ಟು ಹೂಡಿಕೆ ಮಾಡುತ್ತಿವೆ. ಸೆಂಟ್ರಲ್‌ ಬ್ಯಾಂಕ್‌ಗಳು ಖರೀದಿಸುತ್ತಿವೆ. ಹೀಗಾಗಿ ಇದರಲ್ಲಿ ಏರಿಳಿತವೂ ಆಗುತ್ತಿದೆ.

ಬೆಳ್ಳಿ ಮತ್ತು ಬಂಗಾರ ಮೂಲತಃ ಸ್ಟ್ರಾಂಗ್‌ ಅಸೆಟ್‌ ಆಗಿವೆಯಾದ್ದರಿಂದ, ಅದರ ದರ ಕಡಿಮೆಯಾದಾಗ ಹೂಡಿಕೆಗೆ ಒಂದು ಅವಕಾಶ ಸೃಷ್ಟಿಯಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಸೇಫ್‌ ಹೆವೆನ್‌ ಬದಲಿಗೆ ಒತ್ತಡದ ಸಂದರ್ಭದಲ್ಲಿ ಬಳಸಬಹುದಾದ ಲಿಕ್ವಿಡ್‌ ಅಸೆಟ್‌ ಆಗಿ ಪರಿಣಮಿಸಿದೆ.

ಇರಾನ್‌ ಯುದ್ಧದ ಪರಿಣಾಮ ಬಂಗಾರ-ಬೆಳ್ಳಿಯ ದರದಲ್ಲಿ ಉಂಟಾಗಿರುವ ಇಳಿಕೆಯ ಟ್ರೆಂಡ್‌ ತಾತ್ಕಾಲಿಕವಾಗಿರಬಹುದು. ಫಂಡಮೆಂಟಲ್‌ ಆಗಿ ಶಿಫ್ಟ್‌ ಆಗಿಲ್ಲ. 2025ರಲ್ಲಿ ಉಭಯ ಲೋಹಗಳ ದರ ಗಣನೀಯ ಏರಿಕೆಯಾಗಿದ್ದರಿಂದ ಪ್ರಾಫಿಟ್‌ ಬುಕಿಂಗ್‌ ಕೂಡ ನಡೆದಿದೆ. ಆದರೆ ಲಾಂಗ್‌ ಟರ್ಮ್‌ ದೃಷ್ಟಿಯಿಂದ ನೋಡಿದ್ರೆ ಬಂಗಾರ-ಬೆಳ್ಳಿ ಹೂಡಿಕೆ ಒಂದು ಪ್ರಮುಖ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗುತ್ತದೆ.