ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಿಯಕರನೊಂದಿಗೆ ಸೇರಿ ಹಾವಿನಿಂದ ಕಚ್ಚಿಸಿ ಪತಿಯನ್ನೇ ಕೊಂದ ಪತ್ನಿ: ಭೀಕರ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಉತ್ತರ ಪ್ರದೇಶದ ಮೀರತ್‌ನಲ್ಲಿ ಹಾವಿನ ಕಡಿತದಿಂದ ಸಾವು ಎನಿಸಿಕೊಂಡಿದ್ದ ಪ್ರಕರಣವು ಇದೀಗ ಕೊಲೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ. ಪತ್ನಿ, ಆಕೆಯ ಪ್ರಿಯಕರ ಹಾಗೂ ಇಬ್ಬರು ಸೇರಿ ನಿದ್ದೆ ಮಾತ್ರೆ ನೀಡಿ ವಿಷಪೂರಿತ ಹಾವಿನಿಂದ ಪತಿಯನ್ನು ಕಚ್ಚಿಸಿ ಕೊಲೆ ಮಾಡಿರುವುದು ಗೊತ್ತಾಗಿದೆ. ಅಕ್ರಮ ಸಂಬಂಧ ಹಾಗೂ 20 ಲಕ್ಷ ರುಪಾಯಿ ವಿಮಾ ಹಣದ ಆಸೆಯೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿ-ಪ್ರಿಯಕರನಿಂದ ಪತಿಯ ಭೀಕರ ಕೊಲೆ; ಕೃತ್ಯ ಬಯಲಾಗಿದ್ದೇಗೆ?

ಅತುಲ್ ಪನ್ವಾರ್ ಮತ್ತು ದಾಮಿನಿ (ಸಂಗ್ರಹ ಚಿತ್ರ) -

Profile
Sushmitha Jain Jul 18, 2026 11:16 PM

ಲಖನೌ, ಜು. 18: ಉತ್ತರ ಪ್ರದೇಶದ ಮೀರತ್ (Meerat) ಜಿಲ್ಲೆಯಲ್ಲಿ ಹಾವಿನ ಕಡಿತ (Snakebite)ದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲಾಗಿದ್ದ ಪ್ರಕರಣವೊಂದು ಭೀಕರ ಕೊಲೆ ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ. ಪತಿಯನ್ನು ಹಾವಿನಿಂದ ಕಡಿಸಿ ಕೊಂದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ನಾಲ್ಕು ಜನರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಅತುಲ್ ಪನ್ವಾರ್ (35) ಎಂದು ಗುರುತಿಸಲಾಗಿದೆ. ಅತುಲ್ ಪತ್ನಿ ದಾಮಿನಿ, ಆಕೆಯ ಪ್ರಿಯಕರ ತುಷಾರ್ ಮತ್ತು ಇಬ್ಬರು ಸಹಚರರು ಸೇರಿ ಈ ಹತ್ಯೆಯ ಸ್ಕೆಚ್ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತುಷಾರ್-ದಾಮಿನಿಯ ಅಕ್ರಮ ಸಂಬಂಧಕ್ಕೆ ಅತುಲ್ ಅಡ್ಡಿಯಾಗಿದ್ದಲ್ಲದೆ, ಆತನ ಹೆಸರಿನಲ್ಲಿದ್ದ 20 ಲಕ್ಷ ರುಪಾಯಿ ವಿಮಾ ಹಣವನ್ನು ಲಪಟಾಯಿಸಲು ಈ ಪ್ಲ್ಯಾನ್‌ ಮಾಡಲಾಗಿತ್ತು.

ಅಹಮದಾಬಾದ್ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 8 ಮಂದಿ ಸಾವು

ಅತುಲ್ ಮತ್ತು ದಾಮಿನಿ 2019ರಲ್ಲಿ ಪ್ರೇಮ ವಿವಾಹವಾಗಿ ಹಸ್ತಿನಾಪುರದಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದರು. ಇದೇ ಶಾಲೆಯಲ್ಲಿ ತುಷಾರ್ ಚಾಲಕನಾಗಿದ್ದ. ಶುಕ್ರವಾರ ಮುಂಜಾನೆ ಅತುಲ್ ಮನೆಯಲ್ಲಿ ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಗೆ ತರಲಾಗಿತ್ತು. ಹಾಸಗೆಯ ಮೇಲೆ ಹಾವೂ ಕೂಡ ಪತ್ತೆಯಾಗಿತ್ತು. ಆದರೆ ಕುಟುಂಬಸ್ಥರ ಅನುಮಾನದ ಮೇರೆಗೆ ತನಿಖೆ ನಡೆಸಿದ ಪೊಲೀಸರು ದಾಮಿನಿಯ ಮೊಬೈಲ್ ಕರೆಗಳ ಆಧಾರದ ಮೇಲೆ ಇಡೀ ರಹಸ್ಯವನ್ನು ಬಯಲಿಗೆಳೆದಿದ್ದಾರೆ.

ಘಟನೆಯ ರಾತ್ರಿ ದಾಮಿನಿ ಮೊದಲು ಅತುಲ್ ಅವರಿಗೆ ಹಾಲಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಟ್ಟಿದ್ದಾಳೆ. ಅತುಲ್ ಪ್ರಜ್ಞೆ ತಪ್ಪಿದ ನಂತರ, ಪ್ರಿಯಕರ ತುಷಾರ್ ತನ್ನ ಸಹಚರರಾದ ಸೋನು ಮತ್ತು ಉದಯ್ ನೆರವಿನಿಂದ ವಿಷಪೂರಿತ ಹಾವನ್ನು ತಂದು ಅತುಲ್ ಕಂಬಳಿಯೊಳಗೆ ಬಿಟ್ಟಿದ್ದಾನೆ. ಹಾವಿನ ಕಡಿತದಿಂದ ಅತುಲ್ ಸಾವನ್ನಪ್ಪಿದ್ದಾರೆ.

ಕೊಲೆಗೆ ಸಹಕರಿಸಿದ ಸೋನು ಮತ್ತು ಉದಯ್‌ಗೆ ವಿಮಾ ಹಣದಲ್ಲಿ ತಲಾ 5 ಲಕ್ಷ ರುಪಾಯಿ ಕೊಡುವುದಾಗಿ ಆಮಿಷ ಒಡ್ಡಲಾಗಿತ್ತು. 20 ದಿನಗಳ ಹಿಂದೆಯೂ ಅತುಲ್‌ನನ್ನು ಕಾರ್‌ನಿಂದ ಗುದ್ದಿ ಕೊಲ್ಲಲು ಯತ್ನಿಸಲಾಗಿತ್ತು, ಆದರೆ ಅವರು ಹೆಲ್ಮೆಟ್ ಧರಿಸಿದ್ದರಿಂದ ಬದುಕುಳಿದಿದ್ದರು.

ಸದ್ಯ ಪೊಲೀಸರು ನಾಲ್ಕೂ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ. ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಈ ಹತ್ಯಾಕಾಂಡದ ಕುರಿತು ತೀವ್ರ ತನಿಖೆ ಮುಂದುವರಿದಿದೆ. ಪೊಲೀಸರು ಕೊಲೆಗೆ ಬಳಸಲಾದ ಹಾವನ್ನು ತರಲು ನೆರವಾದ ಹಾವಾಡಿಗನಿಗಾಗಿ ತಲಾಶ್ ನಡೆಸುತ್ತಿದ್ದು, ಘಟನಾ ಸ್ಥಳದಿಂದ ಪ್ರಮುಖ ಸಾಕ್ಷ್ಯಗಳನ್ನು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.