Tariff Announcement: ಅಮೆರಿಕದಿಂದ ಶೇ. 25ರಷ್ಟು ತೆರಿಗೆ ಘೋಷಣೆಗೆ ಭಾರತದ ಮೊದಲ ಪ್ರತಿಕ್ರಿಯೆ
Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ. 25ರಷ್ಟು ಸುಂಕವನ್ನು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಭಾರತ ಪ್ರತಿಕ್ರಿಯಿಸಿದ್ದು, ರೈತರು, ಉದ್ಯಮಿಗಳು ಮತ್ತು ವ್ಯಾಪಾರಿಗಳ ಹಿತಾಸಕ್ತಿಗಳನ್ನು ಕಾಪಾಡಲು ದೃಢ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ. “ಭಾರತ ಹಾಗೂ ಅಮೆರಿಕ ನಡುವೆ ಒಪ್ಪಂದ ಏರ್ಪಡುವ ಕುರಿತು ರಾಷ್ಟ್ರೀಯ ಹಿತಾಸಕ್ತಿ ಆಧಾರದ ಮೇಲೆ ಅಧ್ಯಯನ ನಡೆಸಲಾಗುತ್ತಿದೆ” ಎಂದು ಕೇಂದ್ರ ಹೇಳಿದೆ.

ಸಾಂದರ್ಭಿಕ ಚಿತ್ರ.

ದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತೀಯ ಸರಕುಗಳ ಮೇಲೆ ಶೇ. 25ರಷ್ಟು ಸುಂಕವನ್ನು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಭಾರತ ಪ್ರತಿಕ್ರಿಯಿಸಿದ್ದು, ರೈತರು, ಉದ್ಯಮಿಗಳು ಮತ್ತು ವ್ಯಾಪಾರಿಗಳ ಹಿತಾಸಕ್ತಿಗಳನ್ನು ಕಾಪಾಡಲು ದೃಢ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ. ಜತೆಗೆ ಈ ಬಗ್ಗೆ ಅಮೆರಿಕದೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದೆ. “ಭಾರತ ಹಾಗೂ ಅಮೆರಿಕ ನಡುವೆ ಒಪ್ಪಂದ ಏರ್ಪಡುವ ಕುರಿತು ರಾಷ್ಟ್ರೀಯ ಹಿತಾಸಕ್ತಿ ಆಧಾರದ ಮೇಲೆ ಅಧ್ಯಯನ ನಡೆಸಲಾಗುತ್ತಿದೆ” ಎಂದು ಕೇಂದ್ರ ಸರ್ಕಾರ ಹೇಳಿದೆ.
"ಕೆಲವು ತಿಂಗಳಿಂದ ಭಾರತ ಮತ್ತು ಅಮೆರಿಕ ಮಧ್ಯೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ನಡೆಸುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ನಾವು ಆ ಉದ್ದೇಶಕ್ಕೆ ಬದ್ಧರಾಗಿದ್ದೇವೆ" ಎಂದು ಭಾರತ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
BREAKING: 🇮🇳🇺🇸 India responds to Trump’s 25% tariff threat!
— Mayank Dudeja (@imcryptofreak) July 30, 2025
Official statement:
“India and the US have been engaged in negotiations on concluding a fair, balanced, and mutually beneficial trade agreement. The Government will take all steps necessary to secure our national… pic.twitter.com/bI3rqcnjxX
ಇತ್ತೀಚೆಗೆ ಇಂಗ್ಲೆಂಡ್ ಜತೆ ಸಹಿ ಹಾಕಲಾದ ಮುಕ್ತ ವ್ಯಾಪಾರ ಒಪ್ಪಂದವನ್ನು ಉಲ್ಲೇಖಿಸಿ ಭಾರತವು, ತನ್ನ ಮಾರುಕಟ್ಟೆಗಳನ್ನು ವಿದೇಶಿ ಕಂಪನಿಗಳಿಗೆ ತೆರೆದಿಡುವುದರ ಜತೆಗೆ, ದೇಶೀಯ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡುವ ಬಗ್ಗೆಯೂ ಗಮನ ಹರಿಸುವುದಾಗಿ ಹೇಳಿದೆ.
ಈ ಸುದ್ದಿಯನ್ನೂ ಓದಿ: Donald Trump: ಭಾರತದ ಮೇಲೆ ಶೇ. 25ರಷ್ಟು ತೆರಿಗೆ ಘೋಷಿಸಿದ ಅಮೆರಿಕ; ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಕೇಂದ್ರ ಹೇಳಿದ್ದೇನು?
"ದ್ವಿಪಕ್ಷೀಯ ವ್ಯಾಪಾರದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯನ್ನು ಸರ್ಕಾರ ಗಮನಿಸಿದೆ. ಅದರ ಪರಿಣಾಮಗಳನ್ನು ಸರ್ಕಾರ ಅಧ್ಯಯನ ಮಾಡುತ್ತಿದೆ. ಕಳೆದ ಕೆಲವು ತಿಂಗಳಿಂದ ಅಮೆರಿಕದೊಂದಿಗೆ ನ್ಯಾಯಯುತ ಮತ್ತು ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ತೀರ್ಮಾನಿಸುವ ಕುರಿತು ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಆ ಉದ್ದೇಶಕ್ಕೆ ನಾವು ಬದ್ಧರಾಗಿದ್ದೇವೆ" ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಭಾರತದ ಸುಂಕ ರಚನೆಯು ಟ್ರಂಪ್ ಅವರಿಂದ ಪದೇ ಪದೆ ಟೀಕೆಗೆ ಗುರಿಯಾಗಿದೆ. ಅಮೆರಿಕದ ಉತ್ಪನ್ನಗಳ ಮೇಲೆ ಸುಂಕ ವಿಧಿಸುವ ವಿಷಯದಲ್ಲಿ ದೆಹಲಿಯನ್ನು ಅವರು ವಿರೋಧಿಸುತ್ತಲೇ ಬಂದಿದ್ದಾರೆ.
ಹೊಸದಾಗಿ ಘೋಷಿಸಲಾದ ಸುಂಕಗಳು ಭಾರತದ ಹಲವು ಉನ್ನತ-ಕಾರ್ಯನಿರ್ವಹಣೆಯ ರಫ್ತು ವಲಯಗಳನ್ನು ಗುರಿಯಾಗಿರಿಸಿಕೊಂಡಿವೆ. ಆಟೋ ಮೊಬೈಲ್‌ಗಳು, ಆಟೋ ಘಟಕಗಳು, ಉಕ್ಕು, ಅಲ್ಯೂಮಿನಿಯಂ, ಸ್ಮಾರ್ಟ್‌ಫೋನ್‌ಗಳು, ಸೌರ ಮಾಡ್ಯೂಲ್‌ಗಳು, ಸಮುದ್ರ ಉತ್ಪನ್ನಗಳು, ರತ್ನಗಳು, ಆಭರಣಗಳು ಮತ್ತು ಆಯ್ದ ಸಂಸ್ಕರಿಸಿದ ಆಹಾರ ಮತ್ತು ಕೃಷಿ ವಸ್ತುಗಳು ಎಲ್ಲವೂ ಶೇ. 25 ಪಟ್ಟಿಯಲ್ಲಿವೆ. ಆದರೆ ಔಷಧಗಳು, ಸೆಮಿಕಂಡಕ್ಟರ್ ಮತ್ತು ಕೆಲವೊಂದು ಪ್ರಮುಖ ಖನಿಜಗಳನ್ನು ಇದರಿಂದ ಹೊರಗಿಡಲಾಗಿದೆ.
ಟ್ರಂಪ್ ಘೋಷಿಸಿರುವ ಸುಂಕಗಳು 2026ರ ಉಳಿದ ಹಣಕಾಸು ವರ್ಷದಲ್ಲಿಯೂ ಜಾರಿಯಲ್ಲಿದ್ದರೆ ಭಾರತದ ಜಿಡಿಪಿ ಶೇ. 0.2ರಿಂದ ಶೇ. 0.5ರಷ್ಟು ಕುಗ್ಗಬಹುದು ಎಂದು ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಮೊದಲೇ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಭಾರತೀಯ ಸರಕುಗಳ ಆಮದಿನ ಮೇಲೆ ಹೆಚ್ಚುವರಿ ದಂಡದೊಂದಿಗೆ ಶೇ. 25 ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದರು. ರಷ್ಯಾದಿಂದ ಭಾರತದ ನಿರಂತರ ತೈಲ ಆಮದು ಮತ್ತು ದೀರ್ಘಕಾಲದ ವ್ಯಾಪಾರದಿಂದಾಗಿ ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.