ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಭೀಕರ ದೃಶ್ಯ ವೈರಲ್‌; ಇಲ್ಲಿದೆ ಎದೆ ನಡುಗಿಸುವ ವಿಡಿಯೊ

ಮಂಗಳೂರಿನ ಬಜ್ಪೆಯ ಕಿನ್ನಿಪದವು ಬಳಿ ದುಷ್ಕರ್ಮಿಗಳು ತಲ್ವಾರ್‌ಗಳಿಂದ ಹಲ್ಲೆ ನಡೆಸಿ ಹಿಂದೂ ಕಾರ್ಯಕರ್ತ, ಫಾಜಿಲ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಿದ್ದಾರೆ. ಘಟನೆಯ ವಿಡಿಯೊ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಭೀಕರ ದೃಶ್ಯ ವೈರಲ್‌

Profile Ramesh B May 1, 2025 11:18 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದ್ದು, ಕರಾವಳಿ ಬೆಚ್ಚಿ ಬಿದ್ದಿದೆ. ಗುರುವಾರ (ಮೇ 1) ರಾತ್ರಿ ಹಿಂದೂ ಕಾರ್ಯಕರ್ತ, ಫಾಜಿಲ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿ (Suhas Shetty) ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ (Mangalore Murder Case). ಮಂಗಳೂರಿನ ಬಜ್ಪೆಯ ಕಿನ್ನಿಪದವು ಬಳಿ ಘಟನೆ ನಡೆದಿದ್ದು, ದುಷ್ಕರ್ಮಿಗಳು ತಲ್ವಾರ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೊ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಡಿಯೊದಲ್ಲಿ ಸುಹಾಸ್‌ ಅವರನ್ನು ನೆಲಕ್ಕೆ ಕೆಡವಿ ನಾಲ್ಕೈದು ಮಂದಿ ಸುತ್ತುವರೆದು ತಲ್ವಾರ್‌ನಿಂದ ಹಲ್ಲೆ ಮಾಡುತ್ತಿರುವುದು ಕಂಡು ಬಂದಿದೆ. ಕಾರು ಅಡ್ಡಗಟ್ಟಿ ಸುಹಾಸ್‌ ಶೆಟ್ಟಿ ಮೇಲೆ ಹಲ್ಲೆ ನಡೆಸಲಾಗಿದೆ. ಗಂಭೀರ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 2022ರಲ್ಲಿ ನಡೆದಿದ್ದ ಫಾಜಿಲ್‌ ಕೊಲೆಗೆ ಪ್ರತೀಕಾರವಾಗಿ ಸುಹಾಸ್‌ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ. ಹತ್ಯೆ ಖಂಡಿಸಿ ಮಂಗಳೂರು ನಗರದ ಎ.ಜೆ.ಆಸ್ಪತ್ರೆ ಎದುರು ನೂರಾರು ಹಿಂದೂ ಕಾರ್ಯಕರ್ತರು ಜಮಾಯಿಸಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗೆ ರಾಜ್ಯ ಬಿಜೆಪಿ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್, ಶಾಸಕ ಭರತ್‌ ಶೆಟ್ಟಿ ಮತ್ತಿತರ ನಾಯಕರು ಆಗಮಿಸಿ ಮಾಹಿತಿ ಪಡೆದಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆಯ ಭೀಕರ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Pakistan Zindabad: ಮಂಗಳೂರಿನಲ್ಲಿ ಮುಸ್ಲಿಂ ಯುವಕನ ಹತ್ಯೆ; ಇನ್ಸ್‌ಪೆಕ್ಟರ್‌ ಸೇರಿ ಮೂವರು ಸಸ್ಪೆಂಡ್

ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದ ಕಾರ್ಯಕರ್ತನಾಗಿದ್ದರು. ಸಹಾಸ್​ ಶೆಟ್ಟಿ ವಿರುದ್ಧ ಹಲವು ಕೊಲೆ, ಕೊಲೆ ಯತ್ನ ಕೇಸ್​ಗಳು ದಾಖಲಾಗಿದ್ದವು. ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಂಗಳೂರು ಹಲವೆಡೆ ನಾಕಾಬಂದಿ ಹಾಕಿದ್ದಾರೆ. ಹಲವು ಬಿಜೆಪಿ ನಾಯಕರು, ಹಿಂದೂಪರ ಸಂಘಟನೆಯ ಮುಖಂಡರು ಹತ್ಯೆಯನ್ನು ಖಂಡಿಸಿದ್ದಾರೆ.

2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಕಾರವಾಗಿ 2022ರ ಜುಲೈ 28ರಂದು ಸುರತ್ಕಲ್​ನಲ್ಲಿ ಫಾಜಿಲ್‌ನನ್ನು ಕೊಲೆ ಮಾಡಲಾಗಿತ್ತು. ಇದೀಗ ಆ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಯಾರು ಈ ಸುಹಾಸ್‌ ಶೆಟ್ಟಿ?

ಸುಹಾಸ್‌ ಶೆಟ್ಟಿ ಈ ಹಿಂದೆ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯರೂ ಆಗಿದ್ದರು. ಫಾಜಿಲ್‌ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಂತರ ಅವರಿಗೆ ಯಾವುದೇ ಜವಾಬ್ದಾರಿ ಇರಲಿಲ್ಲ. ಹಲವು ಕೊಲೆ, ಕೊಲೆಯತ್ನ ಪ್ರಕರಣದ ಆರೋಪಿಯಾಗಿದ್ದ ಸುಹಾಸ್‌, ಫಾಜಿಲ್‌ ಹತ್ಯೆ ಕೇಸ್‌ನಲ್ಲಿ ಜಾಮೀನಿನ ಮೇರೆಗೆ ಜೈಲಿನಿಂದ ಹೊರಗೆ ಬಂದಿದ್ದರು. ಗುರುವಾರ ಹಲ್ಲೆ ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ಸುಹಾಸ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಾಗಿತ್ತು. ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಸುಹಾಸ್ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವಮೋರ್ಚ ಮುಖಂಡ ಪ್ರವೀಣ್‌ ನೆಟ್ಟಾರು ಅವರನ್ನು 2022ರಲ್ಲಿ ಜು. 26ರಂದು ರಾತ್ರಿ ಬೈಕಿನಲ್ಲಿ ಬಂದ ಇನ್ನೊಂದು ಕೋಮಿಗೆ ಸೇರಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೈಗೈದಿದ್ದರು. ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ 2022ರಲ್ಲಿ ಸುರತ್ಕಲ್‌ನ ಫಾಜಿಲ್‌ನ ಹತ್ಯೆ ಮಾಡಲಾಗಿತ್ತು. ಬಜ್ಪೆ ಠಾಣೆಯಲ್ಲಿ ರೌಡಿಶೀಟರ್‌ಗಳಾಗಿದ್ದ ಸುಹಾಸ್ ಶೆಟ್ಟಿ ಬಗ್ಗೆ ಹಾಗೂ ಅಭಿಷೇಕ್ ಈ ಹತ್ಯೆಯ ಸೂತ್ರಧಾರಿಗಳು ಎಂಬ ಆರೋಪವಿದೆ.