ಶೋ ರೂಂ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿ ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ ಆಭರಣ ದೋಚಿದ ದರೋಡೆಕೋರರು
Robbers Loot Jewellery Showroom: ಹಾಡ ಹಗಲೇ ಜ್ಯುವೆಲ್ಲರಿಗೆ ನುಗ್ಗಿದ 8 ಮಂದಿ ಶಸ್ತ್ರಧಾರಿ ದರೋಡೆಕೋರರು ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ ಚಿನ್ನ, ವಜ್ರದ ಆಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಚಂಪಾರನ್ ಜಿಲ್ಲೆಯ ಬೆಟ್ಟಿಯಾದ ಸುಪ್ರಿಯಾ ರಸ್ತೆಯಲ್ಲಿರುವ ಸೆನ್ಕೋ ಗೋಲ್ಡ್ & ಡೈಮಂಡ್ ಶೋ ರೂಂನಲ್ಲಿ ನಡೆದಿದೆ.
ಚಾಟ್‌ಜಿಪಿಟಿ ರಚಿತ ಚಿತ್ರ -
ಪಾಟ್ನಾ, ನ. 18: ಬಿಹಾರದಲ್ಲಿ ಬೃಹತ್ ಕಳವು ನಡೆದಿದ್ದು, ಹಾಡ ಹಗಲೇ ಜ್ಯುವೆಲ್ಲರಿಗೆ ನುಗ್ಗಿದ 8 ಮಂದಿ ಶಸ್ತ್ರಧಾರಿ ದರೋಡೆಕೋರರು ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ ಚಿನ್ನ, ವಜ್ರದ ಆಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ಚಂಪಾರನ್ ಜಿಲ್ಲೆಯ ಬೆಟ್ಟಿಯಾದ ಸುಪ್ರಿಯಾ ರಸ್ತೆಯಲ್ಲಿರುವ ಸೆನ್ಕೋ ಗೋಲ್ಡ್ & ಡೈಮಂಡ್ ಶೋ ರೂಂನಲ್ಲಿ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿ ಕಳವು ಮಾಡಲಾಗಿದೆ (Robbers Loot Jewellery Showroom). 3 ದ್ವಿಚಕ್ರ ವಾಹನಗಳಲ್ಲಿ ಬಂದ ದರೋಡೆಕೋರರು ಈ ಕೃತ್ಯ ಎಸಗಿದ್ದು, ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗನ್ ತೋರಿಸಿ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿಕೊಂಡ ದರೋಡೆಕೋರರು ಬಳಿಕ ಚಿನ್ನ ಮತ್ತು ವಜ್ರದ ಆಭರಣ ದೋಚಿದ್ದಾರೆ. ಕಳುವಾದ ಆಭರಣಗಳ ಮೌಲ್ಯ 30ರಿಂದ 40 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ನಿಖರ ಮೌಲ್ಯ ಇನ್ನಷ್ಟೇ ಗೊತ್ತಾಗಬೇಕಿದೆ.
ದರೋಡೆಯ ದೃಶ್ಯ:
BREAKING बिहार के बेतिया में अपराधियों ने दिनदहाड़े बड़ी वारदात को अंजाम दिया। सुप्रिया सिनेमा रोड स्थित सेंको ज्वेलर्स शोरूम में हथियारबंद बदमाशों ने करोड़ों के आभूषण लूट लिए। बताया जा रहा है कि तीन बाइक पर सवार करीब 8 अपराधी शोरूम पहुंचे और हथियारों के बल पर लूटपाट की। शुरुआती जानकारी के मुताबिक 30 से 40 करोड़ रुपये के आभूषण लूटे जाने की आशंका है। दिनदहाड़े इतनी बड़ी लूट ने बिहार की कानून-व्यवस्था पर फिर सवाल खड़े कर दिए हैं। #Bettiah #BiharNews #BreakingNews
— Prabhakar Kumar (@prabhakarjourno) November 18, 2026
ಕಾಳಿಭಾಗ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಜನನಿಬಿಡ ರಸ್ತೆಯಲ್ಲಿರುವ ಶೋ ರೂಂನಲ್ಲಿ ಹಗಲೇ ಈ ದರೋಡೆ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದು ಇದ್ದಕ್ಕಿದ್ದಂತೆ ಶೋ ರೂಂ ಒಳಗೆ ನುಗ್ಗಿದ 8 ಮಂದಿ ಗನ್ ತೋರಿಸಿ ಸಿಬ್ಬಂದಿಯನ್ನು ತಡೆದು ಬ್ಯಾಗಿಗೆ ಆಭರಣ ತುಂಬಿಸಿಕೊಂಡು ಹೊರಟು ಹೋಗಿದ್ದಾರೆ. ಸದ್ಯ ಈ ದರೋಡೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ದರೋಡೆಕೋರರು ಒಳ ನುಗ್ಗಿದ ಕೂಡಲೇ ಸಿಬ್ಬಂದಿ ಕೈಯನ್ನು ಹಗ್ಗದಿಂದ ಬಿಗಿದು ಮೊಬೈಲ್ ದೂರ ಇರಿಸಿದ್ದಾರೆ. ಅಲ್ಲದೆ ಇಬ್ಬರ ತಲೆಗೆ ಹೊಡೆದಿದ್ದಾರೆ.
30ರಿಂದ 40 ಕೋಟಿ ರೂಪಾಯಿ ಮೌಲ್ಯದ ಆಭರಣ ಕಳವು
ಪ್ರಾಥಮಿಕ ಮಾಹಿತಿಯ ಪ್ರಕಾರ 30ರಿಂದ 40 ಕೋಟಿ ರೂಪಾಯಿ ಮೌಲ್ಯದ ಆಭರಣ ಕಳವಾಗಿದ್ದು, ಅಂತಿಮ ಲೆಕ್ಕ ಸ್ಟಾಕ್ ರೆಕಾರ್ಡ್ ಪರಿಶೀಲಿಸಿದ ಬಳಿಕವೇ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಸಿಸಿಟಿವಿ ಕ್ಯಾಮರಾ ಪರಿಶೀಲಿಸುತ್ತಿದ್ದಾರೆ. ಇದಕ್ಕಾಗಿ ಶೋ ರೂಂ ಮತ್ತು ಸುತ್ತಮುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ಫೂಟೇಜ್ ವಶಕ್ಕೆ ಪಡೆದಿದ್ದಾರೆ. ರಾಜ್ಯದ ಅತೀ ದೊಡ್ಡ ದರೋಡೆಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ.
ಮತ್ತೆ ಬರುತ್ತೇವೆ ಎಂದ ದರೋಡೆಕೋರರು
ಅಚ್ಚರಿ ಎಂದರೆ ದರೋಡೆಕೋರರು ಆಭರಣ ದೋಚಿದ ಬಳಿಕ ಮತ್ತೆ ಬರುವುದಾಗಿ ಎಚ್ಚರಿಸಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ. ʼʼಶೋ ರೂಂನಿಂದ ಹೊರಡುವಾಗ ಕೆಲವರು ಮತ್ತೆ ಬರುವುದಾಗಿ ಹೇಳಿದ್ದಾರೆʼʼ ಎಂದು ಆ ಮಹಿಳೆ ತಿಳಿಸಿದ್ದಾರೆ. ಮಾಹಿತಿ ಪಡೆದ ಕೂಡಲೇ ಡಿಐಜಿ ಹರಿಕಿಶೋರ್ ರಾಯ್, ಎಸ್‌ಪಿ ಕುಮಾರ್ ಗೌತಮ್ ಮತ್ತು ಡಿಎಸ್‌ಪಿ ಅಜಿತ್ ಕುಮಾರ್ ಸ್ಥಳಕ್ಕೆ ಧಾವಿಸಿದರು. ತನಿಖೆ ನಡೆಯುತ್ತಿದೆ. ದರೋಡೆಕೋರರು ನಗರ ಬಿಟ್ಟು ಹೋಗದಂತೆ ವಿವಿಧ ರಸ್ತೆಗಳಲ್ಲಿ ಪರಿಶೀಲನೆಯನ್ನು ಹೆಚ್ಚಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ತಮಿಳುನಾಡಿನ ಜ್ಯುವೆಲ್ಲರಿಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆವರಣ ದೋಚಲಾಗಿತ್ತು.