ಎಎಸ್ಐ ಕೊಂದು ಅವರ ಕಾರ್ನಲ್ಲೇ ಸುಟ್ಟು ಹಾಕಿದ ಮಹಿಳಾ ಹೆಡ್ ಕಾನ್ಸ್ಟೇಬಲ್; ಅಕ್ರಮ ಸಂಬಂಧಕ್ಕೆ ಅಧಿಕಾರಿ ಬಲಿ
Gujarat News: ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ಜತೆ ಸಂಬಂಧ ಹೊಂದಿದ್ದ ಮಹಿಳಾ ಹೆಡ್ ಕಾನ್ಸ್ಟೇಬಲ್ ಕೊನೆಗೆ ಅವರನ್ನೇ ಕೊಂದು ಸಾಕ್ಷಿ ನಾಶಪಡಿಸಲು ಕಾರ್ ಸಮೇತ ಸುಟ್ಟು ಹಾಕಿ ಈಗ ಸಿಕ್ಕಿಬಿದ್ದಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇದೀಗ ನಾಲ್ವರನ್ನು ಬಂಧಿಸಿದ್ದಾರೆ. ಗುಜರಾತ್ನಲ್ಲಿ ಈ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ -
ಗಾಂಧಿನಗರ, ನ. 18: ಅಕ್ರಮ ಸಂಬಂಧಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ (Crime News). ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ (ASI) ಜತೆ ಸಂಬಂಧ ಹೊಂದಿದ್ದ ಮಹಿಳಾ ಹೆಡ್ ಕಾನ್ಸ್ಟೇಬಲ್ ಕೊನೆಗೆ ಅವರನ್ನೇ ಕೊಂದು ಸಾಕ್ಷಿ ನಾಶಪಡಿಸಲು ಕಾರ್ ಸಮೇತ ಸುಟ್ಟು ಹಾಕಿ ಈಗ ಸಿಕ್ಕಿಬಿದ್ದಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇದೀಗ ನಾಲ್ವರನ್ನು ಬಂಧಿಸಿದ್ದಾರೆ. ಗುಜರಾತ್ನ ಅರಾವಳಿ ಜಿಲ್ಲೆಯಲ್ಲಿ ಈ ಕೃತ್ಯ ನಡೆದಿದೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮುಖ್ಯ ಆರೋಪಿಯನ್ನು 37 ವರ್ಷದ ಹೆಡ್ ಕಾನ್ಸ್ಟೇಬಲ್ ಅಲ್ಫಾಬೆನ್ ಕೆಲಸ್ವ ಎಂದು ಗುರುತಿಸಲಾಗಿದೆ. ಈಕೆ ಮೃತ ಎಎಸ್ಐ, 45 ವರ್ಷದ ಅಶ್ವಿನ್ಬಾಯಿ ತಬಿಯಾಡ್ ಜತೆ ಸಂಬಂಧ ಹೊಂದಿದ್ದಳು. ಇಬ್ಬರು ಪಕ್ಕದ ಸಬ್ರಕಾಂತ ಜಿಲ್ಲೆಯ ಛಿತೋಡ ಪೊಲೀಸ್ ಠಾಣೆಯಲ್ಲಿ ಜತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಆಟೋದಲ್ಲಿ ಕರೆದೊಯ್ದು ಮಾತು ಬಾರದ, ಕಿವಿ ಕೇಳಿಸದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಘಟನೆ ವಿವರ
ಅರಾವಳಿಯ ಭಿಲೋಡದಲ್ಲಿ ನವೆಂಬರ್ 10ರಂದು ಮಾರುತಿ ಎರ್ಟಿಗಾ ಕಾರ್ ಸುಟ್ಟ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದರು. ಪರಿಶೀಲನೆ ನಡೆಸಿದ ವೇಳೆ ಕಾರ್ ಒಳಗೆ ಆಸ್ಥಿಪಂಜರ ಕಂಡುಬಂತು. ಅಶ್ವಿನ್ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೂಲಕ ಪ್ರಕರಣ ಬೇರೆಯದೇ ತಿರುವು ಪಡೆದುಕೊಂಡಿತು. ಮೃತ ಅಶ್ವಿನ್ ಅವರ ಸಹೋದರ ಸಿದ್ದರಾಜ್ ತಬಿಯಾಡ್ ದೂರಿನ ಮೇರೆಗೆ ನವೆಂಬರ್ 16ರಂದು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡರು.
ತನಿಖೆ ನಡೆಯುತ್ತಿದ್ದಂತೆ ಈ ಕೊಲೆ ವೈಯಕ್ತಿಕ ಕಾರಣಕ್ಕೆ ನಡೆಯಿತು ಎನ್ನುವುದು ಬೆಳಕಿಗೆ ಬಂತು. ಪೊಲೀಸರ ಪ್ರಕಾರ ಅಶ್ವಿನ್ ಜತೆಗಿನ ಸಂಬಂಧವನ್ನು ಅಲ್ಫಾಬೆನ್ ಕಡಿದುಕೊಳ್ಳಲು ಮುಂದಾಗಿದ್ದಳು. ಆದರೆ ಅಶ್ವಿನ್ ಇದಕ್ಕೆ ಸಿದ್ಧವಿರಲಿಲ್ಲ. ನವೆಂಬರ್ 8ರಂದು ಅಲ್ಫಾಬೆನ್ ಕರೆ ಮಾಡಿ ಛಿತೋಡದಲ್ಲಿರುವ ತನ್ನ ಮನೆಗೆ ಅಶ್ವಿನ್ ಅವರನ್ನು ಕರೆಸಿಕೊಂಡಿದ್ದಳು. ಅಶ್ವಿನ್ ಆ ರಾತ್ರಿ ತಂಗಿದ್ದರು. ಇದೇ ವೇಳೆ ಆಕೆ ಕೊಲೆ ಮಾಡಿದಳು.
ಮಾರನೆ ದಿನ ಬೆಳಗ್ಗೆ ಅಲ್ಫಾಬೆನ್ ತನ್ನ ಸಹೋದರ ಕಲ್ಪೇಶ್ಭಾಯಿಗೆ ಕರೆ ಮಾಡಿ ಸಹಾಯ ಮಾಡುವಂತೆ ಕೇಳಿಕೊಂಡಳು. ಕೂಡಲೇ ಕಲ್ಪೇಶ್ ತನ್ನ ಸಂಬಂಧಿ ಪಂಕಜ್ಕುಮಾರ್ ಕೆಲಸ್ವ ಜತೆ ಅಲ್ಫಾಬೆನ್ ಇದ್ದಲ್ಲಿಗೆ ಬಂದಿದ್ದ. ಅವರಿಬ್ಬರು ಸೇರಿ ಅಶ್ವಿನ್ ಮೃತದೇಹವನ್ನು ಬೃಹತ್ ಕವರ್ನಲ್ಲಿ ಸುತ್ತಿ ಮನೆಯೊಳಗೆ ಅಡಗಿಸಿಟ್ಟರು. ರಾತ್ರಿಯಾಗುತ್ತಿದ್ದಂತೆ ಪಂಕಜ್ ಅಶ್ವಿನ್ನ ಮೃತದೇಹ ತುಂಬಿಸಿ ಅವರದ್ದೇ ಎರ್ಟಿಗಾ ಕಾರನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದ. ಅಲ್ಫಾಬೆನ್ ಮತ್ತು ಕಲ್ಪೇಶ್ ಬಳಿಕ ಸ್ಥಳಕ್ಕೆ ಆಗಮಿಸಿದರು.
ಮಹಿಳೆಯಿಂದಲೇ ಪ್ರಿಯಕರನ ಕೊಲೆ, ಶಿರಚ್ಛೇದನ ಮಾಡಿ ಶವ ಹೂತ ನಾಲ್ವರು ಆರೋಪಿಗಳು ಅಂದರ್
ನಂತರ ಕಲ್ಪೇಶ್ ಮತ್ತು ಆತನ ಗೆಳೆಯ ಮನೋಜ್ಕುಮಾರ್ ನಿನಮ ಪೆಟ್ರೋಲ್ ಖರೀದಿಸಿದರು ತಂದರು. ಕೊನೆಗೆ ಭಿಲೋಡಕ್ಕೆ ಕಾರ್ ಕೊಂಡೊಯ್ದು ಪೆಟ್ರೋಲ್ ಸುರಿದು ಅಶ್ವಿನ್ ಅದರೊಳಗೆ ಸಿಲುಕಿ ಮೃತಪಟ್ಟಿರುವಂತೆ ಸನ್ನಿವೇಶ ಸೃಷ್ಟಿಸಿದರು. ಈ ವೇಳೆ ಅಲ್ಫಾಬೆನ್ಗೂ ಸುಟ್ಟ ಗಾಯಗಳಾಗಿದ್ದವು. ಸಿಸಿಟಿವಿ ಕ್ಯಾಮರಾ ದೃಶ್ಯದಿಂದ ಪೊಲೀಸರು ಈ ಪ್ರಕರಣ ಬೇಧಿಸಿದ್ದಾರೆ. ಸದ್ಯ ಅಲ್ಫಾಬೆನ್, ಕಲ್ಪೇಶ್, ಪಂಕಜ್ಕುಮಾರ್ ಮತ್ತು ಮನೋಜ್ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.