ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಗುಂಪು ಘರ್ಷಣೆ; ಹಲವು ಮನೆಗೆಳಿಗೆ ಬೆಂಕಿ
ಮಣಿಪುರದಲ್ಲಿ ಮತ್ತೆ ಗುಂಪು ಘರ್ಷಣೆ ಭುಗಿಲೆದ್ದಿದೆ. ತಂಗ್ಖುಲ್ ನಾಗಾ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆದ ಬಳಿಕ ಹಲವು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿದ್ದು, ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಲಿಟನ್ ಸರೈಖಾಂಗ್‌ನಲ್ಲಿ ತಂಗ್ಖುಲ್ ನಾಗಾ ಸಮುದಾಯದ ಸದಸ್ಯರಿಗೆ ಸೇರಿದ ಹಲವಾರು ಮನೆಗಳಿಗೆ ಕುಕಿ ಸಮುದಾಯದವರು ಬೆಂಕಿ ಹಚ್ಚಿದ್ದರೆ ಹತ್ತಿರದ ಪ್ರದೇಶದಲ್ಲಿ ಕುಕಿ ಸಮುದಾಯದ ಸದಸ್ಯರ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
ಸಂಗ್ರಹ ಚಿತ್ರ -
ಮಣಿಪುರ: ತಂಗ್ಖುಲ್ ನಾಗಾ ಸಮುದಾಯದ ( Tangkhul Naga community ) ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಬಳಿಕ ಮಣಿಪುರದಲ್ಲಿ (Manipur) ಮತ್ತೆ ಗುಂಪು ಘರ್ಷಣೆ ಭುಗಿಲೆದ್ದಿದೆ. ಉಖ್ರುಲ್ ಜಿಲ್ಲೆಯ ಲಿಟನ್ ಸರೈಖಾಂಗ್‌ನಲ್ಲಿ ಭಾನುವಾರ ಸಂಜೆ ಕುಕಿ ಸಮುದಾಯದ (Kuki community) ಗುಂಪೊಂದು ತಂಗ್ಖುಲ್ ನಾಗಾ ಸಮುದಾಯದ ಸದಸ್ಯರ ಮೇಲೆ ದಾಳಿ ನಡೆಸಿ ಹಲವಾರು ಮನೆಗಳಿಗೆ ಬೆಂಕಿ ಹೆಚ್ಚಿದೆ. ಇದರಿಂದ ಈ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ. ಲಿಟನ್ ಗ್ರಾಮದಲ್ಲಿ ಎರಡು ಬುಡಕಟ್ಟು ಗುಂಪುಗಳ ಮಧ್ಯೆ ತೀವ್ರವಾದ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳೀಯ ಆಡಳಿತವು ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತು.
ಕುಕಿ ಸಮುದಾಯದ ಹಲವು ದುಷ್ಕರ್ಮಿಗಳು ಸೋಮವಾರ ಮಧ್ಯರಾತ್ರಿ ವೇಳೆಗೆ ಮಣಿಪುರದ ಅತಿದೊಡ್ಡ ನಾಗಾ ಬುಡಕಟ್ಟು ಎಂದು ಗುರುತಿಸಲ್ಪಟ್ಟಿರುವ ತಂಗ್ಖುಲ್ ನಾಗಾ ಸಮುದಾಯದ ಸದಸ್ಯರ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದ್ದರು. ಹತ್ತಿರದ ಪ್ರದೇಶದಲ್ಲಿ ಕುಕಿ ಸಮುದಾಯಕ್ಕೆ ಸೇರಿದವರ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಅಧಿಕಾರಿಯೊಬ್ಬರು, ಈ ದಾಳಿಯಿಂದ ಎಷ್ಟು ಹಾನಿಯಾಗಿದೆ ಎಂಬುದು ತಿಳಿದು ಬಂದಿಲ್ಲ. ಹಾನಿಯನ್ನು ಖಚಿತಪಡಿಸಲಾಗುತ್ತಿದೆ ಮತ್ತು ಪರಿಸ್ಥಿತಿ ಉದ್ವಿಗ್ನವಾಗಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ವಿಡಿಯೊ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಕೆಲವು ದೃಶ್ಯಗಳಲ್ಲಿ ಶಸ್ತ್ರಸಜ್ಜಿತ ಗುಂಪೊಂದು ಗ್ರಾಮದಲ್ಲಿ ಮನೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚುವುದನ್ನು ಕಾಣಬಹುದು ಎಂದು ತಿಳಿಸಿದರು.
ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇರಿಸಲು ಮಹಾದೇವ್, ಲಂಬುಯಿ, ಶಾಂಗ್‌ಕೈ ಮತ್ತು ಇತರ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಲಿಟನ್ ಸರೈಖಾಂಗ್ ಗ್ರಾಮದಲ್ಲಿ ಘರ್ಷಣೆ ನಡೆಸಿದ ಎರಡು ಬುಡಕಟ್ಟು ಗುಂಪುಗಳನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಹಾರಿಸಿವೆ ಎಂದು ಅವರು ತಿಳಿಸಿದರು.
ತಂಗ್‌ಖುಲ್ ನಾಗಾ ಮತ್ತು ಕುಕಿ ಸಮುದಾಯಗಳ ಗುಂಪಿನ ನಡುವೆ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಗ್ರಾಮದಲ್ಲಿ ಮತ್ತೆ ಶಾಂತಿ ಸುವ್ಯವಸ್ಥೆಗೆ ಭಂಗವಾಗುವ ಆತಂಕವಿದೆ. ಭಾನುವಾರ ಸಂಜೆ 7 ಗಂಟೆಯಿಂದ ಮುಂದಿನ ಆದೇಶದವರೆಗೆ ಯಾರೂ ಕೂಡ ನಿವಾಸದ ಹೊರಗೆ ಓಡಾಡುವುದನ್ನು ನಿಷೇಧಿಸಲಾಗಿದೆ. ಈ ಆದೇಶವು ಸರ್ಕಾರಿ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಅನ್ವಯಿಸುವುದಿಲ್ಲ ಎಂದು ಉಖ್ರುಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ದಾಸ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
Tejasvi Surya: ನಮ್ಮ ಮೆಟ್ರೋ ದರ ಏರಿಕೆಗೆ ಸಂಸದ ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ಹಿಡಿದು ಪ್ರತಿಭಟನೆ, ಬಂಧನ
ತಂಗ್ಖುಲ್ ನಾಗಾ ಸಮುದಾಯದ ಸದಸ್ಯರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಇತ್ಯರ್ಥ ಪಡಿಸಲು ಲಿಟನ್ ಸರೈಖಾಂಗ್ ಮುಖ್ಯಸ್ಥರು ಭಾನುವಾರ ಸಭೆ ಸೇರಿದ್ದು, ಸಾಂಪ್ರದಾಯಿಕ ವಿಧಾನಗಳ ಮೂಲಕ ಸಮಸ್ಯೆಯನ್ನು ಪರಿಹರಿಸಲು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎನ್ನಲಾಗಿದೆ.