ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆಪ್ತ ಚಂದ್ರನಾಥ್ ರಾತ್ ಹತ್ಯೆ ಪ್ರಕರಣ: ಮೂವರ ಬಂಧನ
Chandranath Rath murder case: ಪಶ್ಚಿಮ ಬಂಗಾಳದಲ್ಲಿ ಆಘಾತಕಾರಿ ಅಲೆಗಳನ್ನು ಎಬ್ಬಿಸಿದ ಚಂದ್ರನಾಥ್ ರಾತ್ ಕೊಲೆ ಪ್ರಕರಣ ಸಂಬಂಧ ಮೂವರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. ಹಂತಕರು ನಕಲಿ ನಂಬರ್ ಪ್ಲೇಟ್ ಮತ್ತು ಚಾಸಿಸ್ ಸಂಖ್ಯೆಗಳನ್ನು ಹೊಂದಿರುವ ಹಲವು ವಾಹನಗಳನ್ನು ಬಳಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಂದ್ರನಾಥ್ ರಾತ್ ಹತ್ಯೆ ಪ್ರಕರಣ: ಮೂವರ ಬಂಧನ -
ಕೋಲ್ಕತ್ತಾ, ಮೇ 8: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕ ಚಂದ್ರನಾಥ್ ರಾತ್ (Chandranath Rath) ಅವರ ಹತ್ಯೆ ಪೂರ್ವಯೋಜಿತ ಎಂದು ತನಿಖಾಧಿಕಾರಿಗಳು ಈಗಾಗಲೇ ಹೇಳಿದ್ದಾರೆ. ಪ್ರಕ್ಷುಬ್ಧದಿಂದ ಕೂಡಿರುವ ಪಶ್ಚಿಮ ಬಂಗಾಳದಲ್ಲಿ (West Bengal) ಆಘಾತಕಾರಿ ಅಲೆಗಳನ್ನು ಎಬ್ಬಿಸಿದ ಕೊಲೆ ಪ್ರಕರಣ ಸಂಬಂಧ ಮೂವರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ (crime news).
ಹಂತಕರು ನಕಲಿ ನಂಬರ್ ಪ್ಲೇಟ್ ಮತ್ತು ಚಾಸಿಸ್ ಸಂಖ್ಯೆಗಳನ್ನು ಹೊಂದಿರುವ ಹಲವು ವಾಹನಗಳನ್ನು ಬಳಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಗಾಗಿ ಪಶ್ಚಿಮ ಬಂಗಾಳ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, ಇದು ರಾಜ್ಯದಲ್ಲಿ ಈಗಾಗಲೇ ಹೊತ್ತಿ ಉರಿಯುತ್ತಿರುವ ರಾಜಕೀಯ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ.
ರಾತ್ (41) ಅವರು ತನ್ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರಿಂದ ಅವರನ್ನು ಕೊಲೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ದೇಶಾದ್ಯಂತದ ಬಿಜೆಪಿ ನಾಯಕರು ಈ ಕೊಲೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅನ್ನು ದೂಷಿಸಿದ್ದಾರೆ. ಚುನಾವಣೆಯಲ್ಲಿ ಸೋತಿರುವುದರಿಂದ ಟಿಎಂಸಿಯು ಘರ್ಷಣೆ ಮತ್ತು ದ್ವೇಷದ ಹತ್ಯೆಗಳನ್ನು ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ರಾಜೀನಾಮೆಗೆ ನಿರಾಕರಿಸಿದ ಮಮತಾ ಬ್ಯಾನರ್ಜಿಗೆ ರಾಜ್ಯಪಾಲರಿಂದ ಚೆಕ್‌ಮೆಟ್; ಪಶ್ಚಿಮ ಬಂಗಾಳದ ವಿಧಾನಸಭೆ ವಿಸರ್ಜನೆ
ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ಆರಂಭಿಸಬೇಕೆಂದು ತೃಣಮೂಲ ಕಾಂಗ್ರೆಸ್ ಒತ್ತಾಯಿಸಿತು. ಸುಪ್ರೀಂ ಕೋರ್ಟ್ ಅದನ್ನು ಮೇಲ್ವಿಚಾರಣೆ ಮಾಡಬೇಕೆಂದು ಒತ್ತಾಯಿಸಿದೆ. ಚುನಾವಣೆಯ ಎಣಿಕೆ ಪೂರ್ಣಗೊಂಡ ಸೋಮವಾರದಿಂದ (ಮೇ 4) ಪೂರ್ವ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದಿದೆ. ಆ ಬಳಿಕ ವ್ಯಾಪಕ ಘರ್ಷಣೆ ಭುಗಿಲೆದ್ದಿದೆ.
2011ರಿಂದ ರಾಜ್ಯದಲ್ಲಿ ಸಿಎಂ ಆಗಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹೀನಾಯ ಸೋಲನ್ನು ಕಂಡಿತು. ಕೇವಲ 80 ಸ್ಥಾನಗಳಿಗೆ ತೃಪ್ತಿಪಟ್ಟಿತು. ಕಳೆದ ನಾಲ್ಕು ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಘರ್ಷಣೆಯಲ್ಲಿ ರಾತ್ ಸೇರಿದಂತೆ ಐದು ಜನರು ಮೃತಪಟ್ಟಿದ್ದು, 1,500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉತ್ತರಕ್ಕೆ ಸುಮಾರು 7 ಕಿ.ಮೀ ದೂರದಲ್ಲಿರುವ ಮಧ್ಯಮಗ್ರಾಮದಲ್ಲಿ ಗುಂಡಿನ ದಾಳಿಯನ್ನು ಸುಮಾರು 50 ಸೆಕೆಂಡುಗಳಲ್ಲಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇಡೀ ಕಾರ್ಯಾಚರಣೆ ರಾತ್ರಿ 10.08 ರಿಂದ 10.9 ರ ನಡುವೆ ನಡೆದಿವೆ ಎಂದು ಹೇಳಲಾಗಿದೆ.
ಈ ಕೃತ್ಯಕ್ಕೆ ಎರಡು ಬೈಕ್‍ಗಳು ಮತ್ತು ಒಂದು ಹ್ಯಾಚ್‌ಬ್ಯಾಕ್ ಕಾರನ್ನು ಬಳಸಲಾಗಿತ್ತು. ರಾತ್ರಿ 9.30ರ ಸುಮಾರಿಗೆ ಮಂದಬೆಳಕಿನ ಲೇನ್‍ನಲ್ಲಿ, ಹೆಲ್ಮೆಟ್ ಧರಿಸಿದ್ದ ಮೂವರು ಬೈಕ್ ಮೇಲೆ ಕಾಯುತ್ತಿರುವುದು ಕಂಡುಬಂದಿತ್ತು ಎಂದು ಸ್ಥಳೀಯ ನಿವಾಸಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾತ್, ಅವರ ಚಾಲಕ ಬುದ್ಧದೇವ್ ಬೆರಾ ಮತ್ತು ಮಿಂಟು (ಬಿಜೆಪಿ ಕಾರ್ಯಕರ್ತ) ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋದಲ್ಲಿ ಪೂರ್ಬಾ ಮೇದಿನಿಪುರದಿಂದ ಮಧ್ಯಮಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಬಂದ ಸಿಲ್ವರ್ ಬಣ್ಣದ ನಿಸ್ಸಾನ್ ಮೈಕ್ರಾ ಕಾರು ಹಠಾತ್ತನೆ ಅವರ ಮುಂದೆ ಬಂದು ಅಡ್ಡಗಟ್ಟಿತು. ರಾತ್ ಅವರು ವಾಹನದ ಮುಂಭಾಗದ ಪ್ಯಾಸೆಂಜರ್ ಸೀಟಿನಲ್ಲಿ ಕುಳಿತಿದ್ದರು.
ಗುಂಡಿನ ದಾಳಿ ನಡೆದಾಗ ಕಾರಿನಲ್ಲಿ ಎಷ್ಟು ಜನ ಇದ್ದರು ಎಂಬುದು ಸ್ಪಷ್ಟವಾಗಿಲ್ಲ. ನಂತರ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಎಸ್‌ಯುವಿ ಕಡೆಗೆ ವೇಗವಾಗಿ ನುಗ್ಗಿ 10 ಗುಂಡುಗಳನ್ನು ಹಾರಿಸಿದರು. ನಂತರ ವಿರುದ್ಧ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಮೂವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಬರಾಸತ್ ಪೊಲೀಸ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.