ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಧೈರ್ಯವಿದ್ರೆ ನನ್ ಜೊತೆ ಚರ್ಚೆಗೆ ಬನ್ನಿ'; ಬಿಜೆಪಿಯನ್ನು ಟೀಕಿಸುವ ನಟ ಪ್ರಕಾಶ್‌ ರಾಜ್‌ಗೆ ಟಾಲಿವುಡ್‌ ನಿರ್ಮಾಪಕನ ಓಪನ್‌ ಚಾಲೆಂಜ್!‌

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಬಿಜೆಪಿ ವಿರೋಧಿ ನಿಲುವಿನ ವಿರುದ್ಧ ಟಾಲಿವುಡ್ ನಿರ್ಮಾಪಕ ಮಧುರ ಶ್ರೀಧರ್ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ. ಪ್ರಕಾಶ್ ರಾಜ್ ಅವರನ್ನು ಸಂಕುಚಿತ ಮನಸ್ಸಿನ "ಹುಸಿ ಜಾತ್ಯತೀತವಾದಿ" ಎಂದು ಕರೆದಿರುವ ರೆಡ್ಡಿ, ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.

ನಟ ಪ್ರಕಾಶ್ ರಾಜ್‌ಗೆ ಟಾಲಿವುಡ್ ನಿರ್ಮಾಪಕ ಓಪನ್ ಚಾಲೆಂಜ್ ಹಾಕಿದ್ದೇಕೆ?

-

Avinash GR
Avinash GR May 8, 2026 1:39 PM

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಳ್ಳುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ #JustAsking ಹ್ಯಾಶ್‌ಟ್ಯಾಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಾ ಸುದ್ದಿಯಲ್ಲಿರುತ್ತಾರೆ. ತಮಗನ್ನಿಸಿದ್ದನ್ನು ಹೇಳುವುದರಲ್ಲಿ ಪ್ರಕಾಶ್‌ ಹಿಂದೆಮುಂದೆ ನೋಡುವವರಲ್ಲ. ಸದ್ಯ ಪ್ರಕಾಶ್ ರಾಜ್ ವಿರುದ್ಧ ಈಗ ಟಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಮಧುರ ಶ್ರೀಧರ್ ರೆಡ್ಡಿ ಕೆಂಡಕಾರಿದ್ದಾರೆ.

ತಮ್ಮ ಟ್ವಿಟರ್‌ನಲ್ಲಿ ದೀರ್ಘ ಟ್ವೀಟ್‌ಗಳನ್ನು ಮಾಡಿರುವ ಮಧುರ ಶ್ರೀಧರ್‌ ರೆಡ್ಡಿ, ಬಹಿರಂಗ ಚರ್ಚೆಗೆ ಬರುವಂತೆ ಪ್ರಕಾಶ್‌ ರಾಜ್‌ಗೆ ಸವಾಲು ಹಾಕಿದ್ದಾರೆ.

ಮಧುರ ಶ್ರೀಧರ್‌ ಹೇಳಿದ್ದೇನು?

"ನಿಮ್ಮನ್ನು ನೀವು ವಿಶಾಲ ಮನಸ್ಸಿನವರು, ಉದಾರವಾದಿಗಳು, ಬುದ್ಧಿಜೀವಿಗಳು, ಮಹಾನ್ ಮೇಧಾವಿ ಎಂದು ಭಾವಿಸುತ್ತೀರಿ. ಆದರೆ, ವಾಸ್ತವದಲ್ಲಿ ನೀವು ತುಂಬಾ ಸಂಕುಚಿತ ಮನಸ್ಸಿನವರು, ಹುಸಿ ಜಾತ್ಯತೀತವಾದಿ. ಇತರರನ್ನು 'ದ್ವೇಷ ಬಿತ್ತುವವರು' (Hate mongers) ಎಂದು ಕರೆಯುವ ನೀವು, ಸ್ವತಃ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ತೀವ್ರವಾಗಿ ದ್ವೇಷಿಸುತ್ತೀರಿ. ನೀವು ಮೋದಿ ಮತ್ತು ಬಿಜೆಪಿಯನ್ನು ದ್ವೇಷಿಸುವಷ್ಟು, ಯಾರೂ ಯಾರನ್ನೂ ದ್ವೇಷಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ ಮಧುರ ಶ್ರೀಧರ್‌ ರೆಡ್ಡಿ.

ದಿಢೀರ್‌ ಅಂತ ʻದಳಪತಿʼ ವಿಜಯ್‌ ಪರ ಬ್ಯಾಟ್‌ ಬೀಸಿದ ಕಮಲ್‌ ಹಾಸನ್‌‌ - ಪ್ರಕಾಶ್‌ ರಾಜ್;‌ ತಮಿಳುನಾಡು ರಾಜ್ಯಪಾಲರ ಧೋರಣೆಗೆ ಸಿಡಿಸಿಡಿ!

ಇದೇನಾ ನಿಮ್ಮ ಉದಾರವಾದ?

"ನೀವು ಒಂದು ಗುಂಪಿನ ಬಗ್ಗೆ ಮಾಡಿದ ದ್ವೇಷ ಭಾಷಣಗಳನ್ನು, ನೀವು ಇನ್ನೊಂದು ಗುಂಪನ್ನು ಗುರಿಯಾಗಿಸಿಕೊಂಡು ಹೇಗೆ ಪ್ರಚೋದಿಸಿದ್ದೀರಿ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಅದಕ್ಕಾಗಿಯೇ ಈಗ ಜನರು ನಿಮ್ಮ ಬೂಟಾಟಿಕೆಯನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದ್ದಾರೆ. ಜನರ ತೀರ್ಪು ನಿಮಗೆ ಇಷ್ಟವಾದರೆ ಅದನ್ನು ಪ್ರಜಾಪ್ರಭುತ್ವ ಎನ್ನುತ್ತೀರಿ, ಇಷ್ಟವಾಗದಿದ್ದರೆ ಅದನ್ನು ದ್ವೇಷದ ರಾಜಕಾರಣ ಎನ್ನುತ್ತೀರಿ. ನೀವು ಪ್ರಧಾನಿಯನ್ನು ಪ್ರತಿದಿನ ಪ್ರಶ್ನಿಸಬಹುದು, ಆದರೆ ನಿಮ್ಮನ್ನು ಯಾರಾದರೂ ಪ್ರಶ್ನಿಸಿದರೆ ತಕ್ಷಣ ಬ್ಲಾಕ್ ಮಾಡುತ್ತೀರಿ. ಇದೇನಾ ನಿಮ್ಮ ಉದಾರವಾದ? ನಿಮಗೆ ನಿಜವಾಗಿಯೂ ಧೈರ್ಯವಿದ್ದರೆ ನನ್ನನ್ನು ಅನ್‌ಬ್ಲಾಕ್ ಮಾಡಿ. ಬಹಿರಂಗ ಚರ್ಚೆ ಮಾಡೋಣ" ಎಂದು ಶ್ರೀಧರ್‌ ರೆಡ್ಡಿ ಹೇಳಿದ್ದಾರೆ.

ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕಾಶ್‌ ರಾಜ್‌ ವಿರುದ್ಧ ಚಿರು ಸಹೋದರ ನಾಗ ಬಾಬು ವಾಗ್ದಾಳಿ!

ಮಧುರ ಶ್ರೀಧರ್‌ ರೆಡ್ಡಿ ಅವರ ಟ್ವೀಟ್‌



ಚುನಾವಣೆಯಲ್ಲಿ ನಿಮಗೆ ಠೇವಣಿ ಕೂಡ ಸಿಕ್ಕಿಲ್ಲ

"ಪ್ರಕಾಶ್‌ ರಾಜ್‌, ನೀವು ಚಿತ್ರರಂಗದಿಂದ ಬಂದಿದ್ದೀರಿ. ನೀವು ಅವಮಾನಿಸಿದ ಪವನ್ ಕಲ್ಯಾಣ್ ಅವರು ಉಪಮುಖ್ಯಮಂತ್ರಿ ಆಗಿದ್ದಾರೆ. ನಟ ವಿಜಯ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಆದರೆ ನೀವು ಮಾತ್ರ ಒಂದು ಸಣ್ಣ 'ಮಾ' (MAA) ಚುನಾವಣೆಯಲ್ಲಿಯೂ ಸೋತಿದ್ದೀರಿ. ಕರ್ನಾಟಕದ ಚುನಾವಣೆಯಲ್ಲೂ ನಿಮಗೆ ಠೇವಣಿ ಸಿಗಲಿಲ್ಲ. ಮಾತನಾಡುವ ಮೊದಲು ಜನರ ತೀರ್ಪನ್ನು ಗೌರವಿಸುವುದನ್ನು ಕಲಿಯಿರಿ" ಎಂದು ಮಧುರ ಶ್ರೀಧರ್‌ ರೆಡ್ಡಿ ಕುಟುಕಿದ್ದಾರೆ.

ಪ್ರಕಾಶ್‌ ರಾಜ್‌ ಕುರಿತ ಮತ್ತೊಂದು ಟ್ವೀಟ್‌



ಯಾರು ಈ ಮಧುರ ಶ್ರೀಧರ್‌ ರೆಡ್ಡಿ?

ಮಧುರ ಶ್ರೀಧರ್ ರೆಡ್ಡಿ ಅವರು ಈ ಹಿಂದೆ 'ಸ್ನೇಹಗೀತೆ', 'ಇಟ್ಸ್ ಮೈ ಲವ್ ಸ್ಟೋರಿ' ಅಂತಹ ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು 'ದೊರಸಾನಿ', 'ಒಕ ಮನಸು' ಮುಂತಾದ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಪ್ರಕಾಶ್ ರಾಜ್ ಮತ್ತು ಶ್ರೀಧರ್ ರೆಡ್ಡಿ ನಡುವಿನ ಈ ಜಗಳ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಪ್ರಕಾಶ್ ರಾಜ್ ಅವರ ಪ್ರಶ್ನಿಸುವ ಗುಣವನ್ನು ಬೆಂಬಲಿಸಿದರೆ, ಇನ್ನು ಮಧುರ ಶ್ರೀಧರ್ ರೆಡ್ಡಿ ಅವರ ಮಾತುಗಳನ್ನು ಸಮರ್ಥಿಸುತ್ತಿದ್ದಾರೆ. ಅಂದಹಾಗೆ, ಈ ಹಿಂದೆಯೂ ಕೂಡ ಪ್ರಕಾಶ್‌ ರಾಜ್‌ ಅವರನ್ನು ಮಧುರ ಶ್ರೀಧರ್ ರೆಡ್ಡಿ ಟೀಕಿಸಿದ್ದರು.