ಮಧ್ಯಾಹ್ನದ ಬಿಸಿಯೂಟದಲ್ಲಿ ಪತ್ತೆಯಾಯ್ತು ಸತ್ತ ಹಾವು; ಊಟ ಮಾಡಿದ ನೂರಾರು ಮಕ್ಕಳು ಅಸ್ವಸ್ಥ
Snake found in midday meal: ಮಧ್ಯಾಹ್ನದ ಬಿಸಿಯೂಟದಲ್ಲಿ ಹಾವಿನ ಮರಿ ಪತ್ತೆಯಾಗಿದ್ದು, ಊಟ ಮಾಡಿದ ನೂರಾರು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ನಡೆದಿದೆ. ಆಹಾರವನ್ನು ಬಡಿಸಿ ಮಕ್ಕಳು ತಿನ್ನಲು ಪ್ರಾರಂಭಿಸುತ್ತಿದ್ದಂತೆ, ಒಬ್ಬ ವಿದ್ಯಾರ್ಥಿಗೆ ಮರಿ ಹಾವು ಕಂಡುಬಂದಿದೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಪತ್ತೆಯಾಯ್ತು ಹಾವು -
ಪಟನಾ, ಮೇ 8: ಮಧ್ಯಾಹ್ನದ ಬಿಸಿಯೂಟ (midday meal) ಸೇವಿಸಿ ನೂರಾರು ಮಕ್ಕಳು ಅಸ್ವಸ್ಥರಾದ ಘಟನೆ ಬಿಹಾರದ (Bihar) ಸಹರ್ಸಾ ಜಿಲ್ಲೆಯಲ್ಲಿ ನಡೆದಿದೆ. ಊಟದಲ್ಲಿ ಹಾವಿನ ಮರಿ ಪತ್ತೆಯಾಗಿದ್ದು, ಮಕ್ಕಳು ಹೊಟ್ಟೆ ನೋವಿನಿಂದ ಬಳಲಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹರ್ಸಾದ ಮಹಿಷಿ ಬ್ಲಾಕ್‌ನಲ್ಲಿರುವ ಮಿಡಲ್ ಸ್ಕೂಲ್ ಬಲುಹಾದಲ್ಲಿ ಈ ಘಟನೆ ನಡೆದಿದೆ.
ದಿನನಿತ್ಯದಂತೆ ಗುರುವಾರವೂ (ಮೇ 7) ಎನ್‌ಜಿಒವೊಂದು ಪೂರೈಸಿದ ಮಧ್ಯಾಹ್ನದ ಊಟವನ್ನು ಶಾಲಾ ಮಕ್ಕಳಿಗೆ ನೀಡಲಾಗಿತ್ತು. ಆಹಾರವನ್ನು ಬಡಿಸಿ ಮಕ್ಕಳು ತಿನ್ನಲು ಪ್ರಾರಂಭಿಸುತ್ತಿದ್ದಂತೆ, ಒಬ್ಬ ವಿದ್ಯಾರ್ಥಿಗೆ ಮರಿ ಹಾವು ಕಂಡುಬಂದಿದೆ. ಶೀಘ್ರದಲ್ಲೇ, ಬಹುತೇಕ ಎಲ್ಲಾ ಮಕ್ಕಳು ಒಬ್ಬರ ನಂತರ ಒಬ್ಬರು ಹೊಟ್ಟೆ ನೋವಿನ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು.
ಸ್ವಲ್ಪ ಹೊತ್ತಿನಲ್ಲೇ, ನೂರಾರು ಮಕ್ಕಳು ನೋವಿನಿಂದ ನರಳಾಡುತ್ತಿದ್ದರು. ಶಾಲಾ ಆಡಳಿತ ಮಂಡಳಿಯು ತಕ್ಷಣವೇ ಪೊಲೀಸರಿಗೆ ಮತ್ತು ಆಸ್ಪತ್ರೆಗೆ ಮಾಹಿತಿ ನೀಡಿತು. ಪೊಲೀಸರು ಸ್ವಲ್ಪ ಹೊತ್ತಿನಲ್ಲೇ ಆಗಮಿಸಿ ಕೆಲವು ಮಕ್ಕಳನ್ನು ಅವರ ಸ್ವಂತ ವಾಹನಗಳಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರು. ನಂತರ, ಆಸ್ಪತ್ರೆಯಿಂದ ಕಳುಹಿಸಲಾದ ಆಂಬ್ಯುಲೆನ್ಸ್‌ಗಳು ಉಳಿದ ಮಕ್ಕಳನ್ನು ದಾಖಲಿಸಲಾಯಿತು. ಕೆಲವರ ಸ್ಥಿತಿ ಗಂಭೀರವಾಯಿತು.
Karnataka Budget 2026: ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿಗಳಲ್ಲಿ ರೇಷನ್ ಬದಲಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ
ಅಸ್ವಸ್ಥಗೊಂಡ ಹಲವಾರು ಮಕ್ಕಳನ್ನು ನಂತರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ, ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ತನಿಖೆಗೆ ಆದೇಶಿಸಿದೆ. ಸ್ಥಳೀಯ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಯಾರಿಸುವ ಎನ್ಜಿಒ ಕ್ಲಸ್ಟರ್‌ಗೆ ತನಿಖಾ ತಂಡವನ್ನು ಕಳುಹಿಸಲಾಗಿದೆ.
ಔರಾದ್‌ನ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ 50 ವಿದ್ಯಾರ್ಥಿಗಳು
ಮಧ್ಹಾಹ್ನದ ಬಿಸಿಯೂಟ ಸೇವಿಸಿದ ಸುಮಾರು 50 ಮಕ್ಕಳು ಅಸ್ವಸ್ಥಗೊಂಡ ಘಟನೆ ಕರ್ನಾಟಕದ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜಮಲಾಪುರ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಸಂಭವಿಸಿತ್ತು. ಬಿಸಿಯೂಟ ಸೇವಿಸಿದ ಬಳಿಕ ಮಕ್ಕಳಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ಔರಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಾಲೆಯಲ್ಲಿ ಮಕ್ಕಳು ಮಧ್ಯಾಹ್ನ ಬಿಸಿಯೂಟ ಸೇವಿಸಿದ ಕೆಲವು ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ನಂತರ ವಾಂತಿ ಮಕ್ಕಳಿಗೆ ವಾಂತಿ ಶುರುವಾಗಿತ್ತು. ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಪಾಸಣೆ ನಡೆಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಆಸ್ಪತ್ರೆಗೆ ಬಂದ ವಿದ್ಯಾರ್ಥಿಗಳ ಪೈಕಿ ಇಪ್ಪತ್ತು ಮಕ್ಕಳು ಹೊಟ್ಟೆ ನೋವಿನಿಂದ ಬಳಲಿದ್ದರು. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಯಿತು. ಬಿಸಿಯೂಟ ಸೇವನೆಯಲ್ಲಿ ಸಮಸ್ಯೆ ಆಗಿರಬಹುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಗಾಯತ್ರಿ ತಿಳಿಸಿದ್ದರು. ಆಸ್ಪತ್ರೆಗೆ ತಹಸೀಲ್ದಾರ್ ಮಹೇಶ್ ಪಾಟೀಲ, ಬಿಸಿಯೂಟ ಅಧಿಕಾರಿ ಧೂಳಪ್ಪ ಮಾಳೆನೂರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.