ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dog Saved Life: ಮಾಲೀಕನನ್ನು ರಕ್ಷಿಸಲು ನಾಗರಹಾವಿನೊಂದಿಗೆ ಹೋರಾಡಿದ ಶ್ವಾನ; ಇದು ಕೇರಳದ ʼರಾಕಿ ಭಾಯ್‌ʼ ಸಾಹಸಗಾಥೆ

ಸ್ವಾಮಿಗೆ ನಿಷ್ಠರಾಗಿರುವ ಸಾಕಷ್ಟು ನಾಯಿಗಳ ಕಥೆಯನ್ನು ಕೇಳಿದ್ದೇವೆ. ಇದೀಗ ಕೇರಳದ ನಾಯಿಯೊಂದು ಮಾಲೀಕನಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಟನೆ ನಡೆದಿದೆ. ಮಾಲೀಕನನ್ನು ರಕ್ಷಿಸಲು ಅದು ವಿಷಪೂರಿತ ನಾಗರಹಾವಿನೊಂದಿಗೆ ಹೋರಾಡಿ ಸಾವನ್ನು ಗೆದ್ದು ಬಂದಿದೆ. ಹಾವು ಕಡಿತಕ್ಕೆ ಒಳಗಾದ ಅದನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಿಂದ ಬದುಕುಳಿದಿದೆ.

ಮಾಲೀಕನನ್ನು ಅಪಾಯದಿಂದ ರಕ್ಷಿಸಿದ  ಶ್ವಾನ

ರಾಕಿ -

ತಿರುವನಂತಪುರಂ: ಮಾಲೀಕನ ರಕ್ಷಣೆಗಾಗಿ (Dog saved life) ನಾಯಿಯೊಂದು ತನ್ನ ಪ್ರಾಣವನ್ನೇ ಪಣಕಿಟ್ಟ ಘಟನೆ ಕೇರಳದ (Kerala) ಆಲಪ್ಪುಳದಲ್ಲಿ (Alappuzha) ನಡೆದಿದೆ. ಮನೆಯ ಅಂಗಳಕ್ಕೆ ಬಂದಿದ್ದ ಹಾವೊಂದು (snake) ಮಾಲೀಕ ತುಷಾರಾಗೆ ಕಚ್ಚುವುದರಲ್ಲಿತ್ತು. ಆದರೆ ಕೂಡಲೇ ಮನೆಯ ಸಾಕು ನಾಯಿ ಮುಂದೆ ಬಂದು ವಿಷಪೂರಿತ ನಾಗರಹಾವಿನೊಂದಿಗೆ ಸೆಣಸಾಡಿತು. ಈ ವೇಳೆ ಹಾವಿನ ಕಡಿತದಿಂದ ಗಾಯಗೊಂಡರೂ ಅದು ಹೋರಾಟವನ್ನು ಮುಂದುವರಿಸಿ ಕೊನೆಗೆ ಹಾವನ್ನು ಕೊಂದು ಹಾಕಿತು. ಬಳಿಕ ಕೂಡಲೇ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದು ಈಗ ಪ್ರಾಣಾಪಾಯದಿಂದ ಪಾರಾಗಿದೆ.

ಮಾಲೀಕ ತುಷಾರಾನನ್ನು ರಕ್ಷಿಸಿದ ರಾಕಿ ಎಂಬ ಸಾಕು ನಾಯಿ ಸದ್ಯ ಕೇರಳದ ಮನೆ ಮಾತಾಗಿದೆ. ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಮಾಲೀಕ ತುಷಾರನ ಮನೆಯ ಅಂಗಳದಲ್ಲಿ ಈ ಘಟನೆ ನಡೆದಿದೆ.

ನಾಗರಹಾವು ಮನೆಯ ಆವರಣಕ್ಕೆ ನುಗ್ಗಿದಾಗ ತುಷಾರಾ ಮನೆಯಲ್ಲಿದ್ದರು. ಆಗ ರಾಕಿ ಹಾವಿನ ಮೇಲೆ ದಾಳಿ ಮಾಡಿ ಅದು ಮನೆಗೆ ಪ್ರವೇಶಿಸದಂತೆ ತಡೆಯಿತು. ಈ ಮಧ್ಯೆ ಅವುಗಳ ನಡುವೆ ತೀವ್ರ ಹೋರಾಟ ನಡೆದಿದ್ದು, ನಾಯಿ ನಾಗರಹಾವನ್ನು ಕೊಲ್ಲುವಲ್ಲಿ ಮತ್ತು ಮಾಲೀಕನನ್ನು ಅಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಯಿತು.

ಗಾಯಗೊಂಡ ನಾಯಿಯನ್ನು ತುಷಾರಾ ಬಳಿಕ ಹತ್ತಿರದ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ತುರ್ತು ಆರೈಕೆ ನೀಡಲಾಯಿತು. ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ ಡಾ. ಬಿಬಿನ್ ಪ್ರಕಾಶ್ ಮತ್ತು ಅವರ ತಂಡದ ಮೇಲ್ವಿಚಾರಣೆಯಲ್ಲಿ ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಇದೀಗ ರಾಕಿ ಚೇತರಿಸಿಕೊಂಡಿದೆ.

ಘಟನೆಯ ಬಗ್ಗೆ ಕೇಳಿ ವಿದೇಶದಲ್ಲಿ ಕೆಲಸ ಮಾಡುತ್ತಿರುವ ತುಷಾರಾ ಅವರ ಪತಿ ಸುಭಾಷ್ ಕೃಷ್ಣ ಮನೆಗೆ ಮರಳಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿ ರಾಕಿಯನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದರು. ರಾಕಿಯ ಧೈರ್ಯವು ಎಲ್ಲರ ಮನಸ್ಸು ಗೆದ್ದಿದೆ.

ಇದನ್ನೂ ಓದಿ: Viral Video: ಕ್ರೂರಿಗಳ ಚಿತ್ರಹಿಂಸೆಗೆ ನರಳಿ ನರಳಿ ಪ್ರಾಣ ಬಿಟ್ಟ ಹೋರಿ- ಆಘಾತಕಾರಿ ವಿಡಿಯೊ ಇಲ್ಲಿದೆ

ಭೂಕುಸಿತ: ಜನರ ಜೀವ ಉಳಿಸಿದ ಶ್ವಾನ!

ಕೆಲವು ದಿನಗಳ ಹಿಂದೆ ನಡೆದ ಘಟನೆ ಇದು. ಹಿಮಾಚಲ ಪ್ರದೇಶದಾದ್ಯಂತ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ನಡುವೆ ಮಂಡಿ ಜಿಲ್ಲೆಯ ಸಿಯಾಥಿ ಗ್ರಾಮದಲ್ಲಿ ಸಾಕು ನಾಯಿಯೊಂದು ಬೊಗಳಿದ್ದರಿಂದ 67 ಜನರ ಜೀವ ಉಳಿದಿತ್ತು.

ಧರಂಪುರ ಪ್ರದೇಶದ ಸಿಯಾಥಿ ಗ್ರಾಮದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಗ್ರಾಮದ ನರೇಂದ್ರ ಎಂಬುವವರ ಮನೆಯ ಎರಡನೇ ಮಹಡಿಯಲ್ಲಿ ಮಲಗಿದ್ದ ಸಾಕು ನಾಯಿ ಇದ್ದಕ್ಕಿದ್ದಂತೆ ಜೋರಾಗಿ ಬೊಗಳಲು ಆರಂಭಿಸಿತು. ರಾತ್ರಿ ಇಷ್ಟು ತೀವ್ರವಾಗಿ ಬೊಗಳುತ್ತಿರುವುದನ್ನು ಗಮನಿಸಿದ ನರೇಂದ್ರ, ಆಶ್ಚರ್ಯದಿಂದ ಎಚ್ಚರಗೊಂಡು ನಾಯಿ ಇರುವ ಜಾಗಕ್ಕೆ ತೆರಳಿದರು. ಆಗ ಮನೆಯ ಗೋಡೆಯಲ್ಲಿ ದೊಡ್ಡ ಬಿರುಕು ಕಾಣಿಸಿತು.

ಕೆಲವೇ ಕ್ಷಣಗಳಲ್ಲಿ ಆ ಬಿರುಕಿನ ಮೂಲಕ ನೀರು ಮನೆಯೊಳಗೆ ಹರಿಯಲು ಆರಂಭಿಸಿದ್ದು, ನೀರು ನುಗ್ಗುತ್ತಿರುವುದನ್ನು ಗಮನಿಸಿದರು. ಪ್ರವಾಹದ ಮುನ್ಸೂಚ್ಚನೆ ಅರಿತು ಎಚ್ಚೆತ್ತುಕೊಂಡ ನರೇಂದ್ರ ಕೂಡಲೇ ಕೆಳಗಿನ ಮಹಡಿಯಲ್ಲಿ ಮಲಗಿದ್ದ ಕುಟುಂಬದವರನ್ನು ಎಬ್ಬಿಸಿ ಹೊರಬರಲು ಸೂಚಿಸಿದರು. ಜತೆಗೆ ಸಮೀಪದಲ್ಲೆ ಇದ್ದ ಅಕ್ಕಪಕ್ಕದ ಮನೆಯವರನ್ನೂ ಎಬ್ಬಿಸಿ ಎಚ್ಚರಿಕೆ ನೀಡಿದರು. ಕೂಡಲೇ ಎಲ್ಲರೂ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿಸಿದರು. ಈ ವೇಳೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಗ್ರಾಮಸ್ಥರು ಎಲ್ಲವನ್ನೂ ಬಿಟ್ಟು ಸುರಕ್ಷಿತ ಪ್ರದೇಶಕ್ಕೆ ಓಡಿ ಪ್ರಾಣಾಪಾಯದಿಂದ ಪಾರಾದರು.