Crime News: ಭ್ರೂಣ ಲಿಂಗ ಪತ್ತೆ ನಡೆಸುತ್ತಿದ್ದ ನಕಲಿ ವೈದ್ಯನಿಗೆ ಖೆಡ್ಡ ತೋಡಿದ ಮಹಿಳಾ ಪೊಲೀಸ್
ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಕಲಿ ವೈದ್ಯನನ್ನು ಬಂಧಿಸಲಾಗಿದೆ. ಸಂಜು ಶರ್ಮಾ ಬಂಧಿತ ಆರೋಪಿಯಾಗಿದ್ದು, ಮಧ್ಯ ಪ್ರದೇಶದ ಬಿಲ್ಗಾಂ ಮಿಡಲ್ ಶಾಲೆಯಲ್ಲಿ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದ. ಸಂಜು ಶರ್ಮಾ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದ ಬಳಿಕ 2024ರ ನವೆಂಬರ್‌ನಲ್ಲಿ ಅಮಾನತುಗೊಂಡಿದ್ದ.

ಸಾಂದರ್ಭಿಕ ಚಿತ್ರ -

ಭೋಪಾಲ್: ಮಧ್ಯ ಪ್ರದೇಶ (Madhya Pradesh)ದ ಲಿಂಗಾನುಪಾತ ಕಡಿಮೆಯಿರುವ ಜಿಲ್ಲೆಗಳಲ್ಲೊಂದಾದ ಮೊರೇನಾ(Morena)ದಲ್ಲಿ ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಪರೀಕ್ಷೆ ನಡೆಸುತ್ತಿದ್ದ ನಕಲಿ ವೈದ್ಯನನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಗದೋರಾ ಪುರಾ ಬಳಿ ಗ್ವಾಲಿಯರ್ ಹಾಗೂ ಮೋರೇನಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತೆ ಮೀನಾ ಶರ್ಮಾ ಅವರೊಂದಿಗೆ ಜಂಟಿ ದಾಳಿ ನಡೆಸಿ ಆರೋಪಿ ಸಂಜು ಶರ್ಮಾ(Sanju Sharma)ನನ್ನು ಬಂಧಿಸಿದ್ದಾರೆ.
ಆರೋಪಿ ಸೆರೆಗೆ ಖೆಡ್ಡಾ ತೋಡಿದ ಮಹಿಳಾ ಪೊಲೀಸ್
"ಆರೋಪಿ ಸಂಜು ಶರ್ಮಾ ಬಳಿ ಓರ್ವ ಮಹಿಳೆ ಹಾಗೂ ಅವರೊಂದಿಗೆ ಸಿವಿಲ್ ಡ್ರೆಸ್‌ನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯೋರ್ವರನ್ನು ಕಳುಹಿಸಲಾಗಿತ್ತು. ಪೋರ್ಟ್‌ಬಲ್ ಅಲ್ಟ್ರಾಸೌಂಡ್ ಯಂತ್ರ ಬಳಸಿ ಪರೀಕ್ಷೆಗೆ ಮುಂದಾದ ತಕ್ಷಣ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ" ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಪದ್ಮೇಶ್ ಉಪಾಧ್ಯಾಯ(Padmesh Upadhyay) ತಿಳಿಸಿದ್ದಾರೆ. ಈ ಸಂಬಂಧ ಸಿವಿಲ್ ಲೈನ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಮೋರೇನಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಈ ಸುದ್ದಿಯನ್ನು ಓದಿ: Chen-Ning Yang: ನೊಬೆಲ್ ಪ್ರಶಸ್ತಿ ಪುರಸ್ಕೃತ ಚೀನಿ ಭೌತಶಾಸ್ತ್ರಜ್ಞ ಚೆನ್-ನಿಂಗ್ ಯಾಂಗ್ ವಿಧಿವಶ
ಪಿಯೋನ್ ಆಗಿದ್ದ ಸಂಜು ಶರ್ಮಾ ನಕಲಿ ವೈದ್ಯನಾಗಿದ್ದು ಹೇಗೆ?
ಬಿಲ್ಗಾಂ ಮಿಡಲ್ ಶಾಲೆಯಲ್ಲಿ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದ ಸಂಜು ಶರ್ಮಾ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದ ಬಳಿಕ 2024ರ ನವೆಂಬರ್‌ನಲ್ಲಿ ಅಮಾನತುಗೊಂಡಿದ್ದ.
ʼʼಸುಮಾರು ಆರು ತಿಂಗಳ ಹಿಂದೆ ಜಯಪುರದಲ್ಲಿ ಪೋರ್ಟ್‌ಬಲ್ ಅಲ್ಟ್ರಾಸೌಂಡ್ ಯಂತ್ರ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಸೆರೆ ಹಿಡಿಯಲಾಗಿತ್ತು. ಆತ ಸಂಜು ಶರ್ಮಾನ ಫೋಟೊ ತೋರಿಸಿ, ಅವನೂ ಲಿಂಗ ಪರೀಕ್ಷೆ ನಡೆಸುತ್ತಿದ್ದ ಎಂದು ಹೇಳಿದ್ದ. ಅದಾದ ಬಳಿಕ ಹಲವು ತಿಂಗಳಿಂದ ಸಂಜು ಶರ್ಮಾ ಮೇಲೆ ನಿಗಾ ಇರಿಸಲಾಗಿತ್ತು" ಎಂದು ಗ್ವಾಲಿಯರ್ ಆರೋಗ್ಯ ಇಲಾಖೆ ಅಧಿಕಾರಿ ಡಾ. ಪ್ರವಲ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ʼʼಸಂಜು ಶರ್ಮಾ ಹಾಗೂ ಮತ್ತೊಬ್ಬ ವ್ಯಕ್ತಿ ಮನೆ ಮನೆಗೆ ತೆರಳಿ ಪೋರ್ಟ್‌ಬಲ್ ಯಂತ್ರಗಳ ಮೂಲಕ ಲಿಂಗ ಪರೀಕ್ಷೆ ನಡೆಸುತ್ತಿದ್ದ ಮತ್ತು ಈ ಕೃತ್ಯಕ್ಕೆ 2,000–4,000 ರೂ. ಪಡೆಯುತ್ತಿದ್ದ. ಅಷ್ಟೆ ಅಲ್ಲದೇ ಹೆಣ್ಣು ಭ್ರೂಣ ಪತ್ತೆಯಾದರೆ, ಗರ್ಭಪಾತ ಮಾಡಲು ಇನ್ನೂ ಹೆಚ್ಚಿನ ಹಣ ಪಡೆಯುತ್ತಿದ್ದ. ಉತ್ತರ ಪ್ರದೇಶ, ಹರಿಯಾಣ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ದೆಹಲಿವರೆಗೂ ಅವರ ಈ ಜಾಲವು ವಿಸ್ತರಿಸಿದೆ” ಎಂದು ಸಾಮಾಜಿಕ ಕಾರ್ಯಕರ್ತೆ ಮೀನಾ ಶರ್ಮಾ ತಿಳಿಸಿದ್ದಾರೆ.
“ಮಧ್ಯ ಪ್ರದೇಶದಲ್ಲಿ ಅತ್ಯಂತ ಕಡಿಮೆ ಲಿಂಗಾನುಪಾತ ಹಿಂದಿರುವ ಜಿಲ್ಲೆ ಮೋರೇನಾ. 2011ರ ಜನಗಣತಿಯ ಪ್ರಕಾರ ಪ್ರತಿ 1,000 ಪುರುಷರಿಗೆ ಕೇವಲ 840 ಮಹಿಳೆಯರು ಇದ್ದಾರೆ. (2001ರಲ್ಲಿ ಇದು 822 ಮಾತ್ರ ಇತ್ತು). ಕೆಲವು ಹಳ್ಳಿಗಳಲ್ಲಿ ಕೇವಲ 541 ಮಾತ್ರ ಇದೆ" ಎಂದು ವೈದ್ಯಾಧಿಕಾರಿ ಡಾ. ಉಪಾಧ್ಯಾಯ ಹೇಳಿದರು.