ಯಾದಗಿರಿ ಬಳಿ ನಿರ್ಮಾಣ ಹಂತದ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ; ರಸ್ತೆ ತಡೆಗೋಡೆಗೆ ಕಾರು ಡಿಕ್ಕಿಯಾಗಿ ನಾಲ್ವರು ಯುವಕರ ದುರ್ಮರಣ!
ನಿರ್ಮಾಣ ಹಂತದ ಚೆನ್ನೈ-ಸೂರತ್ ಎಕ್ಸ್ ಪ್ರೆಸ್ ಹೈವೇಯಲ್ಲಿ ಅಪಘಾತ ನಡೆದಿದೆ. ಜೇವರ್ಗಿಯಿಂದ ಯಾದಗಿರಿ ಕಡೆಗೆ ಕಾರು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
-
ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂ ಡಿಬಿಎಲ್ ಕ್ಯಾಂಪ್ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ (Yadgir Car Accident) ನಾಲ್ವರು ಯವಕರು ದುರ್ಮರಣ ಹೊಂದಿದ್ದಾರೆ. ಯಾದಗಿರಿಯ ನಿವಾಸಿಗಳಾದ ಗುರುರಾಜ್ (29), ರೆಡ್ಡಿ ರಾಥೋಡ್ (33), ಗೋವಿಂದ ಚವ್ಹಾಣ್ (28) ಮತ್ತು ಕುಮಾರ್ ರಾಥೋಡ್ (26) ಮೃತರು.
ಶುಕ್ರವಾರ ರಾತ್ರಿ ನಿರ್ಮಾಣ ಹಂತದ ಚೆನ್ನೈ-ಸೂರತ್ ಎಕ್ಸ್ ಪ್ರೆಸ್ ಹೈವೇಯಲ್ಲಿ ಅಪಘಾತ ನಡೆದಿದೆ. ಕಾರು ಜೇವರ್ಗಿಯಿಂದ ಯಾದಗಿರಿ ಕಡೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ಶಹಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಅಪಘಾತಕ್ಕೆ ಅತೀ ವೇಗವೇ ಕಾರಣ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಗದ್ದೆಗೆ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ತುಳಿದು ಕಾಡಾನೆ ಸಾವು
ಶಿವಮೊಗ್ಗ: ಕಾಡುಪ್ರಾಣಿಗಳ ಕಾಟ ತಪ್ಪಿಸಿಕೊಳ್ಳಲು ಗದ್ದೆಗೆ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ತುಳಿದು 13 ವರ್ಷದ ಕಾಡಾನೆ ಸಾವನ್ನಪ್ಪಿದ ಘಟನೆ ಗಾಜನೂರು ಸಮೀಪದ ಈಚಲವಾಡಿ ಗ್ರಾಮದಲ್ಲಿ ನಡೆದಿದೆ. ಶಂಕರ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.
ಕಾಡಿನಿಂದ ಆಹಾರ ಅರಸಿ ಗ್ರಾಮಕ್ಕೆ ಕಾಡಾನೆ ಬಂದಿತ್ತು. ಈ ವೇಳೆ ಫಸಲಿಗೆ ಬಂದಿದ್ದ ಗದ್ದೆಯನ್ನು ರಕ್ಷಿಸಲು ಅಕ್ರಮವಾಗಿ ಎಳೆದಿದ್ದ ವಿದ್ಯುತ್ ತಂತಿ ತುಳಿದು ಆನೆ ಸಾವನ್ನಪ್ಪಿದೆ. ಕಾಡಾನೆ ಮೃತಪಟ್ಟಿರುವ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಜಮೀನಿನ ಮಾಲೀಕ ಸಯ್ಯದ್ ಆಲಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಬಗ್ಗೆ ಜಮೀನು ಮಾಲೀಕ ಅಧಿಕಾರಿಗಳ ಮುಂದೆ ತಾನೇ ವಿದ್ಯುತ್ ತಂತಿ ಎಳೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.