Shootout at Vijayapura: ಹಾಡಹಗಲೇ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಸಮೀರ್ ಮುಲ್ಲಾ ಕಾಲಿಗೆ ಗುಂಡು ಹಾರಿಸಿದ ಪೊಲೀಸರು
ಶನಿವಾರ ಬೆಳಗಿನ ಜಾವ ವಿಜಯಪುರ ಜಿಲ್ಲೆಯ ಅತಾಲಟ್ಟಿ ಗ್ರಾಮದ ಬಳಿ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಸಮೀರ್ ದಾಳಿ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಸಮೀರ್‌ನನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
-
ವಿಜಯಪುರ: ನಗರದ ಮುಂಡೇವಾಡಿ ಆಸ್ಪತ್ರೆ ಬಳಿ ನ.5ರಂದು ಹಾಡಹಗಲೇ ನಡೆದಿದ್ದ ಯಾಸೀನ್ ಜುಬೇರ್ ಹತ್ಯೆ ಪ್ರಕರಣ(Yaseen Zubair Murder Case)ಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಮೀರ್ ಮುಲ್ಲಾ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಶನಿವಾರ ಬೆಳಗಿನ ಜಾವ ವಿಜಯಪುರ ಜಿಲ್ಲೆಯ ಅತಾಲಟ್ಟಿ ಗ್ರಾಮದ ಬಳಿ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಸಮೀರ್ ದಾಳಿ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಸಮೀರ್‌ನನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಡಿಜೆ ವಿಚಾರಕ್ಕೆ ಶುರುವಾದ ಜಗಳ, ಕೊಲೆಯಲ್ಲಿ ಅಂತ್ಯ
ನ.5ರಂದು ವಿಜಯಪುರ ನಗರದ ಮುಂಡೇವಾಡಿ ಆಸ್ಪತ್ರೆ ಎದುರು ಯಾಸೀನ್ ಜುಬೇರ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಗುಂಡಿನ ದಾಳಿಯಲ್ಲಿ ಯಾಸೀನ್ ಸ್ಥಳದಲ್ಲೇ ಮೃತಪಟ್ಟಿದ್ದ.
ಡಿಜೆ ಹಚ್ಚುವ ವಿಚಾರವಾಗಿ ಯಾಸೀನ್ ಹಾಗೂ ಸಮೀರ್ ಮುಲ್ಲಾ ನಡುವೆ ಈ ಹಿಂದೆ ಗಲಾಟೆ ನಡೆದಿತ್ತು. ಈ ವೇಳೆ ಯಾಸೀನ್, ಸಮೀರ್ ಹಾಗೂ ಆತನ ಆಪ್ತರ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಇದರಿಂದ ಯಾಸೀನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಮೀರ್ ಕಾಯುತ್ತಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: Udupi shootout case: ಉಡುಪಿಯಲ್ಲಿ ಮತ್ತೊಂದು ಶೂಟೌಟ್; ಗುಂಡಿಕ್ಕಿ ಕಾಂಗ್ರೆಸ್ ಮುಖಂಡ, ಗ್ರಾಪಂ ಮಾಜಿ ಅಧ್ಯಕ್ಷನ ಕೊಲೆ!
ನ.5ರಂದು ಯಾಸೀನ್ ತನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆತಂದಿದ್ದ ಸಂದರ್ಭದಲ್ಲಿ ಮುಂಡೇವಾಡಿ ಆಸ್ಪತ್ರೆ ಬಳಿ ಸಮೀರ್ ಗುಂಡು ಹಾರಿಸಿದ್ದ. ಪತ್ನಿಯ ಕಣ್ಣೆದುರೇ ಯಾಸೀನ್ ಪ್ರಾಣಬಿಟ್ಟಿದ್ದ. ಕೃತ್ಯದ ಬಳಿಕ ಸಮೀರ್ ಪರಾರಿಯಾಗಿದ್ದ.
ನಾಲ್ಕು ತಂಡಗಳಿಂದ ಆರೋಪಿಗಾಗಿ ಶೋಧ
ಹತ್ಯೆ ಪ್ರಕರಣದ ಬಳಿಕ ಪರಾರಿಯಾಗಿದ್ದ ಸಮೀರ್ ಮುಲ್ಲಾ ಹಾಗೂ ಆತನ ಸಹಚರರ ಪತ್ತೆಗಾಗಿ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು.
ಆರೋಪಿ ಸಮೀರ್ ಅತಾಲಟ್ಟಿ ಗ್ರಾಮದ ಬಳಿ ಇರುವ ಖಚಿತ ಮಾಹಿತಿ ಪಡೆದ ಪೊಲೀಸರು ಆತನ ಬಂಧನಕ್ಕೆ ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ದಾಳಿ ನಡೆಸಲು ಯತ್ನಿಸಿದ ಸಮೀರ್‌ನನ್ನು ತಡೆಯಲು ಪೊಲೀಸರು ಗುಂಡು ಹಾರಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಸಮೀರ್ ಮುಲ್ಲಾ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.