ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ: ದಂಪತಿ ಸಾವು, ಮಗುವಿಗೆ ತೀವ್ರ ಗಾಯ

Fresh violence in Manipur: ಮಣಿಪುರದಲ್ಲಿ ಅಪರಿಚಿತ ದುಷ್ಕರ್ಮಿಗಳ ದಾಳಿಯಲ್ಲಿ ಕುಕಿ ಬುಡಕಟ್ಟು ಸಮುದಾಯದ ನಾಲ್ವರು ಮೃತಪಟ್ಟಿದ್ದಾರೆ. ತಮೆಂಗ್ಲಾಂಗ್ ಜಿಲ್ಲೆಯ ಟೋಲೆನ್ ಗ್ರಾಮದಲ್ಲಿ ಮೊದಲ ದಾಳಿ ನಡೆದಿದೆ ಎಂದು ಕುಕಿ ನಾಗರಿಕ ಸಂಘಟನೆಯೊಂದು ತಿಳಿಸಿದೆ. ದಾಳಿಯಲ್ಲಿ ದಂಪತಿ ಮೃತಪಟ್ಟಿದ್ದು, ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮಣಿಪುರದಲ್ಲಿ ಗುಂಡಿನ ದಾಳಿ: ನಾಲ್ವರು ಸಾವು

ಸಾಂದರ್ಭಿಕ ಚಿತ್ರ -

Priyanka P
Priyanka P Sep 16, 2026 4:06 PM

ಇಂಫಾಲ, ಸೆ.16: 24 ಗಂಟೆಗಳಲ್ಲಿ ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ನಾಲ್ವರು ಅಪರಿಚಿತ ದುಷ್ಕರ್ಮಿಗಳ ದಾಳಿಯಲ್ಲಿ ಮೃತಪಟ್ಟಿದ್ದಾರೆ (Manipur Firing). ಎನ್ಎಸ್‌ಸಿಎನ್ (ಐಎಂ) ಮತ್ತು ಝೆಡ್‌ಯುಎಫ್(ಕೆ) ಎಂಬ ನಾಗಾ ಬಂಡುಕೋರ ಸಂಘಟನೆಗಳ ಸದಸ್ಯರು ದಾಳಿ ನಡೆಸಿದ್ದಾರೆ ಎಂದು ಕುಕಿ (Kuki) ಸಂಘಟನೆಗಳು ಆರೋಪಿಸಿವೆ (Fresh violence in Manipu). ತಮೆಂಗ್ಲಾಂಗ್ ಮತ್ತು ನೋನಿ ಜಿಲ್ಲೆಗಳಲ್ಲಿ ನಡೆದ ದಾಳಿಯ ನಂತರ ಓರ್ವ ಮಹಿಳೆ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ತಮೆಂಗ್ಲಾಂಗ್ ಜಿಲ್ಲೆಯ ಟೋಲೆನ್ ಗ್ರಾಮದಲ್ಲಿ ಮೊದಲ ದಾಳಿ ನಡೆದಿದೆ ಎಂದು ಕುಕಿ ನಾಗರಿಕ ಸಂಘಟನೆಯೊಂದು ತಿಳಿಸಿದೆ. ಸೀನೆಹ್ ಸಿಂಗ್ಸಿತ್ ಮತ್ತು ಅವರ ಪತ್ನಿ ಲಿಂಗ್ಜಾಂಗೈ ಎಂಬುವವರು ದಾಳಿಯಲ್ಲಿ ಮೃತಪಟ್ಟಿದ್ದು, ಅವರ ಆರು ವರ್ಷದ ಮಗ ಗಾಯಗೊಂಡಿದ್ದಾನೆ. ಲಿಂಗ್ಜಾಂಗೈ ಸ್ಥಳದಲ್ಲೇ ಮೃತಪಟ್ಟರೆ, ಅವರ ಪತಿ ಸೀನೆಹ್ ಸಿಂಗ್ಸಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಾಲಕನ ದೇಹದಿಂದ ಗುಂಡನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಯಲಿದೆ. ಇಬ್ಬರು ಮುಗ್ಧ ನಾಗರಿಕರ ಭೀಕರ ಕೊಲೆಯಾಗಿದೆ. ಅಪರಿಚಿತ ಸಶಸ್ತ್ರ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇನ್ನೂ ಇಬ್ಬರು ಮೃತಪಟ್ಟಿರುವುದು ತೀವ್ರ ದಿಗ್ಭ್ರಮೆ ಮತ್ತು ದುಃಖ ತಂದಿದೆ ಎಂದು ಮಣಿಪುರ ಮುಖ್ಯಮಂತ್ರಿ ಕಚೇರಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮುಗ್ಧ ನಾಗರಿಕರ ವಿರುದ್ಧದ ಇಂತಹ ಹೇಡಿತನದ ಹಿಂಸಾಚಾರದ ಕೃತ್ಯ ನಡೆಸಿರುವುದು ಖಂಡನೀಯ ಎಂದು ಮುಖ್ಯಮಂತ್ರಿ ವೈ. ಖೇಮ್‌ಚಂದ್ ಸಿಂಗ್ ಹೇಳಿದ್ದಾರೆ.

ಬಿಜೆಪಿ ಶಾಸಕರ ನಿವಾಸದ ಆವರಣದಲ್ಲಿ ಸ್ಫೋಟ! ಹೆಚ್ಚಿದ ಭೀತಿ

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಮಣಿಪುರದಲ್ಲಿ ಅಕ್ಕಿಯನ್ನು ಸಾಗಿಸುತ್ತಿದ್ದ ಜನರ ಗುಂಪಿನ ಮೇಲೆ ಅಪರಿಚಿತ ಬಂದೂಕುಧಾರಿಗಳು ದಾಳಿ ನಡೆಸಿದ್ದು, ಇಬ್ಬರನ್ನು ಸ್ಥಳದಲ್ಲೇ ಹೊಡೆದು ಕೊಂದಿದ್ದಾರೆ. ಮೃತರನ್ನು ಜೂಲಿ ಗ್ಯಾಂಗ್ಟೆ ಮತ್ತು ಥಾಂಗ್ರೋಯೆಲ್ ಗ್ಯಾಂಗ್ಟೆ ಎಂದು ಗುರುತಿಸಲಾಗಿದೆ.

1992ರಲ್ಲಿ ಪ್ರಾರಂಭವಾಗಿ ಆರು ವರ್ಷಗಳ ಕಾಲ ನಡೆದ ಕುಕಿ-ನಾಗಾ ಜನಾಂಗೀಯ ಸಂಘರ್ಷವು 1,000ಕ್ಕೂ ಹೆಚ್ಚು ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿತು. 2023ರ ಕುಕಿ-ಮೈತೈ ಹಿಂಸಾಚಾರಕ್ಕೆ 260ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ.

ಈ ವರ್ಷ ಮೇ 13ರಂದು ಕಾಂಗ್ಪೋಕ್ಪಿ ಜಿಲ್ಲೆಯ ಹಳ್ಳಿಯಿಂದ ನಾಗಾ ಬುಡಕಟ್ಟು ಜನಾಂಗದ ಆರು ಸದಸ್ಯರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಜೂನ್ 10ರಂದು ಕುಕಿ ವಸಾಹತು ಬಳಿ ಅವರ ಶವಗಳನ್ನು ವಶಪಡಿಸಿಕೊಳ್ಳಲಾಯಿತು.

ಇದಕ್ಕೂ ಮೊದಲು, ಫೆಬ್ರವರಿಯಲ್ಲಿ ನಾಗಾಗಳೊಂದಿಗಿನ ಘರ್ಷಣೆಯಲ್ಲಿ ತಮ್ಮ ಬುಡಕಟ್ಟು ಜನಾಂಗದ 14 ಸದಸ್ಯರು ಮೃತಪಟ್ಟಿದ್ದು, ಹಲವು ಮನೆಗಳು ಸುಟ್ಟುಹೋಗಿವೆ ಎಂದು ಕುಕಿ ಗುಂಪು ಹೇಳಿತ್ತು.