ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಹೈಮಾಸ್ಟ್ ಕಂಬ; ಸಮಾಜವಾದಿ ಪಕ್ಷದ ನಾಯಕ ಸಾವು
ಉತ್ತರಪ್ರದೇಶದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಹೈಮಾಸ್ಟ್ ಕಂಬ ಬಿದ್ದು ಸಮಾಜವಾದಿ ಪಕ್ಷದ ನಾಯಕ ಲಾಲ್ ಬಹದ್ದೂರ್ ಯಾದವ್ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಭಾನುವಾರ ನಡೆದಿದೆ. ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದರ ಸಂಪೂರ್ಣ ದೃಶ್ಯವಾಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಂಗ್ರಹ ಚಿತ್ರ -
ಉತ್ತರ ಪ್ರದೇಶ: ಚಲಿಸುತ್ತಿರುವ ಕಾರಿನ ಮೇಲೆ ಹೈಮಾಸ್ಟ್ ಕಂಬ (high mast pole) ಬಿದ್ದು ಸಮಾಜವಾದಿ ಪಕ್ಷದ ನಾಯಕ (Samajwadi Party leader) ಸಾವನ್ನಪ್ಪಿರುವ ಘಟನೆ ಭಾನುವಾರ ಉತ್ತರ ಪ್ರದೇಶದ (Uttar Pradesh) ಪ್ರತಾಪ್‌ಗಢದಲ್ಲಿ ನಡೆದಿದೆ. ಸಮಾಜವಾದಿ ಪಕ್ಷದ ನಾಯಕ ಲಾಲ್ ಬಹದ್ದೂರ್ ಯಾದವ್ (48) ಮೃತರು. ಅವರ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಪೆಟ್ರೋಲ್ ಪಂಪ್ ಬಳಿ ಅಳವಡಿಸಲಾಗಿದ್ದ ಹೈಮಾಸ್ಟ್ ವಿದ್ಯುತ್ ಕಂಬ ಚಲಿಸುತ್ತಿರುವ ಕಾರಿನ ಮೇಲೆ ಕುಸಿದು ಬಿದ್ದಿದೆ.
ಕೆಲಸದ ನಿಮಿತ್ತ ಬಾಬುಗಂಜ್‌ನಿಂದ ಪ್ರತಾಪ್‌ಗಢ ನಗರದ ಕಡೆಗೆ ಕ್ರೆಟಾದಲ್ಲಿ ಪ್ರಯಾಣಿಸುತ್ತಿದ್ದ ಲಾಲ್ ಬಹದ್ದೂರ್ ಯಾದವ್ ಅವರ ಕಾರಿನ ಮೇಲೆ ಹೈಮಾಸ್ಟ್ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಇದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Chorla Ghat Robbery case: 400 ಕೋಟಿ ರೂ. ಲೂಟಿ ಕಥೆಗೆ ಟ್ವಿಸ್ಟ್, ಚೋರ್ಲಾ ಘಾಟಿಯಲ್ಲಿ ದರೋಡೆಯೇ ನಡೆದಿಲ್ಲ!
ಭಾರತ್ ಪೆಟ್ರೋಲಿಯಂನ ಸುಮಾರು 65 ಅಡಿ ಎತ್ತರದ ಹೈಮಾಸ್ಟ್ ಕಂಬವನ್ನು ಪೆಟ್ರೋಲ್ ಪಂಪ್ ಮುಂದೆ ಕ್ರೇನ್ ಸಹಾಯದಿಂದ ನಿರ್ಮಿಸಲಾಗುತ್ತಿತ್ತು. ಕಂಬ ಸುಮಾರು 40 ಕ್ವಿಂಟಾಲ್ ಭಾರವಿತ್ತು. ಅಳವಡಿಕೆಯ ಸಮಯದಲ್ಲಿ ಕ್ರೇನ್‌ನ ಪಟ್ಟಿ ಮುರಿದು ಅದು ನೇರವಾಗಿ ಯಾದವ್ ಅವರ ಕಾರಿನ ಮೇಲೆ ಬಿದ್ದಿದೆ.
ಅಪಘಾತ ನಡೆದ ತಕ್ಷಣವೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಕಾರಿನ ಬಾಗಿಲು ಒಡೆದು ಅವರನ್ನು ಹೊರಗೆಳೆದರು. ಬಳಿಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿದ್ದ ಯಾದವ್, ಅಂತು ನಗರ ಪಂಚಾಯತ್ ಚುನಾವಣೆಗೆ ಎರಡು ಬಾರಿ ಸ್ಪರ್ಧಿಸಿ ಸೋತಿದ್ದರು. ಯಾದವ್ ಅವರ ಸಾವಿನ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಸುರಕ್ಷತಾ ವ್ಯವಸ್ಥೆಗಳು ಮತ್ತು ನಿರ್ಲಕ್ಷ್ಯದ ಬಗ್ಗೆ ಪರಿಶೀಲನೆ ನಡೆಸಲು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯುವ ಜೋಡಿಗಳ ಶವ ಪತ್ತೆ
ರಸ್ತೆ ಬದಿ ಪಾರ್ಕ್ ಮಾಡಿದ ಕಾರೊಳಗೆ ಯುವ ಪ್ರೇಮಿಗಳ ಮೃತದೇಹ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಇತ್ತೀಚೆಗೆ ನಡೆದಿದೆ. ಬಂದೂಕಿನಿಂದ ಗುಂಡೇಟು ತಗಲಿ ಇಬ್ಬರು ಸಾವನ್ನಪ್ಪಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಪ್ರೇಮಿಗಳ ದಿನದಂದೇ ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ. ಮೃತರನ್ನು ಸುಮಿತ್ ಮತ್ತು ರೇಖಾ ಎಂದು ಗುರುತಿಸಲಾಗಿದೆ.
ಪ್ರೀತಿಯಲ್ಲಿನ ಕಲಹ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ. ಸುಮಿತ್‌ನ ಕೈಯಲ್ಲಿ ಪಿಸ್ತೂಲ್ ಕಂಡು ಬಂದಿದೆ. ಡ್ರೈವರ್ ಸೀಟ್‌ನಲ್ಲಿ ಕುಳಿತು ಆತ ಮೊದಲು ರೇಖಾಗೆ ಗುಂಡು ಹಾರಿಸಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ನಿಲ್ಲದ ವ್ಯಾಘ್ರಗಳ ಸಾವು; ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿ ಮೃತದೇಹ ಪತ್ತೆ
ರೇಖಾ ನೋಯ್ಡಾ ಸೆಕ್ಟರ್ 58ರ ನಿವಾಸಿಯಾಗಿದ್ದು, ಸುಮಿತ್ ದೆಹಲಿಯ ತ್ರಿಲೋಕಪುರಿಯಲ್ಲಿ ವಾಸಿಸುತ್ತಿದ್ದನು. ಇಬ್ಬರೂ ಫೆಬ್ರವರಿ 13ರಂದು ಮನೆಯಿಂದ ಹೊರಹೋಗಿದ್ದರು. ಈ ಕುರಿತು ಅವರ ಮನೆಯವರು ನಾಪತ್ತೆ ದೂರನ್ನೂ ದಾಖಲಿಸಿದ್ದರು.
ಇವರಿಬ್ಬರು ಕಳೆದ 15 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ರೇಖಾ ಬೇರೆ ಮದುವೆಯಾಗಲು ಮುಂದಾಗಿದ್ದರಿಂದ ಇಬ್ಬರ ನಡುವೆ ಜಗಳ ಉಂಟಾಗಿದೆ ಎಂಬುದನ್ನು ಸುಮಿತ್ ಡೆತ್ ನೋಟ್ ನಲ್ಲಿ ತಿಳಿಸಿದ್ದಾನೆ.