ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Crime News: ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು; ಸಹೋದರನ ಸಣ್ಣ ಅನುಮಾನದಿಂದ ಬೆಳಕಿಗೆ ಬಂತು ಭಯಾನಕ ಸಂಚು

Rajasthan News: ಕೆಲವು ದಿನಗಳ ಹಿಂದೆ ಪಾಪಿ ಪುತ್ರನೊಬ್ಬ ಸರ್ಕಾರಿ ಕೆಲಸಕ್ಕಾಗಿ ತನ್ನ ತಂದೆಯನ್ನೇ ಕೊಲೆ ಮಾಡಿದ ಘಟನೆ ನಡೆದಿತ್ತು. ಇದೀಗ ಅಂತಹದ್ದೇ ಮತ್ತೊಂದು ಮನಕಲುಕುವ ಘಟನೆ ಬೆಳಕಿಗೆ ಬಂದಿದೆ. ರಾಜಸ್ಥಾನದ ಜೈಪುರದಲ್ಲಿ 23 ವರ್ಷದ ಯುವತಿ ಅನುಕಂಪದ ಸರ್ಕಾರಿ ಕೆಲಸ ಹೊಂದಲು ತಾಯಿಯನ್ನೇ ಕೊಲೆ ಮಾಡಿಸಿ ಅಪಘಾತವೆಂಬಂತೆ ಬಿಂಬಿಸಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾಳೆ.

ಸರ್ಕಾರಿ ಕೆಲಸಕ್ಕಾಗಿ ತಾಯಿಯನ್ನೇ ಕೊಂದ ಮಗಳು

ಮೆಟಾ ಎಐ ರಚಿತ ಚಿತ್ರ -

Ramesh Ballamoole
Ramesh Ballamoole Jul 7, 2026 9:53 PM

ಜೈಪುರ, ಜು. 7: ʼತಾಯಿಯೇ ದೇವರುʼ ಎನ್ನುವ ಸಂಸ್ಕೃತಿ ನಮ್ಮದು. ಆದರೆ ಈ ಸಂಸ್ಕೃತಿಯನ್ನು ಮರೆತು ಅದೆಷ್ಟೋ ಕಾಲವಾಗಿದೆ. ಅದರಲ್ಲೂ ಬಹುತೇಕ ಯುವ ಜನತೆ ಸ್ವಾರ್ಥಿಗಳಾಗುತ್ತಿದ್ದು, ರಕ್ತ ಸಂಬಂಧವನ್ನೇ ಮರೆತು ಯಾವ ಕೆಲಸ ಮಾಡಲು ಹೇಸದ ಮಟ್ಟಕ್ಕೆ ಬಂದಿದ್ದಾರೆ. ಇಷ್ಟೆಲ್ಲ ಪೀಠಿಕೆ ಯಾಕೆ ಹಾಕುತ್ತಿದ್ದೇವೆ ಎಂದರೆ ಇಂತಹ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ಸರ್ಕಾರಿ ಕೆಲಸ, ಆಸ್ತಿ ಗಿಟ್ಟಿಸಿಕೊಳ್ಳಲು ಸ್ವಂತ ಮಗಳೇ ಹೆತ್ತ ತಾಯಿಯನ್ನು ಕೊಲೆ ಮಾಡಿಸಿ ಅಪಘಾತವೆಂದು ಬಿಂಬಿಸಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾಳೆ (Crime News). ಆಕೆಯ ಕೃತ್ಯ ಬೆಳಕಿಗೆ ಬಂದ ಬಳಿಕ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ʼʼಅನುಕಂಪದ ಸರ್ಕಾರಿ ಉದ್ಯೋಗ ಪಡೆಯಲು 23 ವರ್ಷದ ಆಯುಷಿ ತಾಯಿಯನ್ನೇ ಕೊಲೆ ಮಾಡಿಸಿ, ರಸ್ತೆ ಅಪಘಾತವೆಂದು ನಂಬಿಸಲು ನಾಟವಾಡಿದ್ದಾಳೆʼʼ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಪೊಲೀಸರು ಆಯುಷಿ ಮತ್ತು ಆಕೆಗೆ ನೆರವಾದ 6 ಮಂದಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರಲ್ಲಿ ಆಕೆಯ ಮಾವ ಸೇರಿ ಸಂಬಂಧಿಕರೂ ಇದ್ದು, ಇನ್ನೂ ಹಲವರು ತಲೆ ಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ವಿವರ

ಜುಲೈ 3ರಂದು ಜೈಪುರದ ಪ್ರತಾಪ್‌ ನಗರದ ರವೀಂದ್ರ ನಗರ ನಿವಾಸಿ, 45 ವರ್ಷದ ನೀರಜಾ ಶರ್ಮಾ ವೇಗವಾಗಿ ಬಂದ ಸ್ಕಾರ್ಪಿಯೊ ವಾಹನ ಗುದ್ದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇದು ಸಾಮಾನ್ಯ ಅಪಘಾತವೆಂದೇ ಎಲ್ಲರೂ ನಂಬಿದ್ದರು. ಆಯುಷಿ ಕೂಡ ರಸ್ತೆ ಅಪಘಾತದಲ್ಲಿ ತಾಯಿ ಮೃತಪಟ್ಟಿದ್ದಾರೆ ಎಂದು ಮೊಸಳೆ ಕಣ್ಣೀರಿಟ್ಟಿದ್ದಳು. ಆದರೆ ನೀರಜಾ ಶರ್ಮಾ ಅವರ ಸಹೋದರ ರಾಕೇಶ್‌ ಅವರಿಗೆ ಈ ಸಾವಿನ ಬಗ್ಗೆ ಅನುಮಾನ ಮೂಡಿತ್ತು.

ಹೀಗಾಗಿ ಅವರು ಪೊಲೀಸರಿಗೆ ದೂರು ಕೊಟ್ಟು ಅನುಮಾನವಿರುವ ತಮ್ಮ ಸಂಬಂಧಿಕರ ಹೆಸರನ್ನು ಉಲ್ಲೇಖಿಸಿದ್ದರು. ʼʼತನಿಖೆ ವೇಳೆ ನೀರಜಾ ಅವರ ಸಾವು ಅಪಘಾತವಲ್ಲ, ಅದೊಂದು ಪೂರ್ವ ಯೋಜಿತ ಕೊಲೆ ಎನ್ನುವುದು ಬೆಳಕಿಗೆ ಬಂತು. ಬಾಡಿಗೆ ಕೊಲೆಗಾರರನ್ನು ನೇಮಿಸಿದ ಅಪರಾಧಿಗಳು ಕೊಲೆಯನ್ನು ಅಪಘಾತವೆಂಬಂತೆ ಬಿಂಬಿಸಲು ಮುಂದಾಗಿದ್ದರುʼʼ ಎಂದು ಡೆಪ್ಯುಟಿ ಕಮಿಷನರ್‌ ಆಫ್‌ ಪೊಲಿಸ್‌ ರಂಜಿತಾ ಶರ್ಮಾ ತಿಳಿಸಿದ್ದಾರೆ.

ಅನುಕಂಪದ ಸರ್ಕಾರಿ ಉದ್ಯೋಗ ಪಡೆಯಲು ನೀಚ ಕೆಲಸ; ಸುಪಾರಿ ಕೊಟ್ಟು ಅಪ್ಪನನ್ನೇ ಕೊಲ್ಲಿಸಿದ ಪಾಪಿ ಪುತ್ರ

ಕೆಲವು ವರ್ಷಗಳ ಹಿಂದೆ ಪತಿ ವಿಜಯ್‌ ಕುಮಾರ್‌ ಶರ್ಮಾ ಮೃತಪಟ್ಟ ಬಳಿಕ ನೀರಜಾ ಅವರಿಗೆ ಅನುಕಂಪದ ಆಧಾರದಲ್ಲಿ ಕೋರ್ಟ್‌ನ ಕ್ಲರ್ಕ್‌ ಕೆಲಸ ಸಿಕ್ಕಿತ್ತು. ಈ ಕೆಲಸ ತನಗೆ ಸಿಗಬೇಕೆಂದು ಆಯುಷಿ ತನ್ನ ತಾಯಿಯನ್ನೇ ಕೊಲೆ ಮಾಡಿರುವುದು ಇದೀಗ ಸಾಬೀತಾಗಿದೆ.

ʼʼತಂದೆ ಮೃತಪಟ್ಟಾಗ ಆಯುಷಿ ತಾನು ಆ ಕೆಲಸ ಮಾಡುವುದಾಗಿ ಹೇಳಿದ್ದಳು. ಆದರೆ ಮಗಳ ಆಸೆಗೆ ತಣ್ಣೀರೆರಚಿ ನೀರಜಾ ಉದ್ಯೋಗಕ್ಕೆ ಸೇರಿದ್ದರು. ಇದರಿಂತ ಕುಪಿತಗೊಂಡ ಆಯುಷಿ ತನ್ನ ತಾಯಿ ಎನ್ನುವುದನ್ನೂ ನೋಡದೆ ಕೊಲೆ ಮಾಡಿಸಿದ್ದಾಳೆʼʼ ಎಂದು ಪೊಲೀಸರು ವಿವರಿಸಿದ್ದಾರೆ. ʼʼಸರ್ಕಾರಿ ಉದ್ಯೋಗ ಪಡೆಯಲು ಮತ್ತು ನೀರಜಾ ಹೆಸರಿನಲ್ಲಿರುವ ಆಸ್ತಿ ಕಬಳಿಸಲು ಮಾವಂದಿರ ಜತೆ ಸೇರಿ ಆಯುಷಿ ಸಂಚು ರೂಪಿಸಿದ್ದಳುʼʼ ಎಂದು ಮಾಹಿತಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.