ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪೊಲೀಸ್‌ ಠಾಣೆ ಒಳಗೇ ಮಹಿಳೆ ಮೇಲೇ ಅತ್ಯಾಚಾರ! ಕಾನ್ಸ್‌ಟೇಬಲ್‌ನಿಂದಲೇ ಅಮಾನುಷ ಕೃತ್ಯ

Jharkhand Horror: ದೂರು ನೀಡಲು ತೆರಳಿದ ಮಹಿಳೆಯೊಬ್ಬರ ಮೇಲೆ ಠಾಣೆ ಒಳಗೇ ಕಾನ್ಸ್‌ಟೇಬಲ್‌ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನಲ್ಲಿ ಬೆಳಕಿಗೆ ಬಂದಿದೆ. ಅಕ್ಟೋಬರ್‌ 29ರಂದು ನಡೆದ ಈ ಘಟನೆಯ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಕಾರಣಕ್ಕೆ 5 ಮಂದಿ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜತೆಗೆ ಆರೋಪಿಯನ್ನು ಬಂಧಿಸಲಾಗಿದೆ.

ಪೊಲೀಸ್‌ ಠಾಣೆ ಒಳಗೇ ಮಹಿಳೆ ಮೇಲೇ ಅತ್ಯಾಚಾರ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 1, 2026 3:17 PM

ರಾಂಚಿ, ನ. 1: ಕಾನೂನು ವ್ಯವಸ್ಥೆ ಕಾಪಾಡಬೇಕಾದವರೇ ಅದನ್ನು ಉಲ್ಲಂಘಿಸಿದರೆ, ರಕ್ಷಕರೇ ಭಕ್ಷಕರಾದರೆ ಈ ಸಮಾಜದ ಸ್ಥಿತಿಯನ್ನೊಮ್ಮೆ ಊಹಿಸಿ. ಹೌದು, ಇಂತಹದ್ದೇ ಒಂದು ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ದೂರು ನೀಡಲು ತೆರಳಿದ ಮಹಿಳೆಯೊಬ್ಬರ ಮೇಲೆ ಠಾಣೆ ಒಳಗೇ ಕಾನ್ಸ್‌ಟೇಬಲ್‌ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ (Jharkhand Horror). ಸದ್ಯ ಆರೋಪಿ ಕಾನ್ಸ್‌ಟೇಬಲ್‌ನನ್ನು ಬಂಧಿಸಲಾಗಿದೆ (Crime News). ʼʼಜಾರ್ಖಂಡ್‌ನ ಸೆರೈಕೆಲಾ-ಖರ್ಸ್ವಾನ್ ಜಿಲ್ಲೆಯಲ್ಲಿ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದೆʼʼ ಎಂದು ಪೊಲೀಸರುತಿಳಿಸಿದ್ದಾರೆ.

ಅಕ್ಟೋಬರ್‌ 29ರಂದು ನಡೆದ ಈ ಘಟನೆಯ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಕಾರಣಕ್ಕೆ 5 ಮಂದಿ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡ ಅಧಿಕಾರಿಗಳಲ್ಲಿ ಗಮಹರಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯೂ ಸೇರಿದ್ದಾರೆ.

ಘಟನೆ ವಿವರ

ಮಹಿಳೆ ದೂರಿನಲ್ಲಿ ಘಟನೆ ವಿವರಿಸಿದ್ದಾರೆ. ಅಕ್ಟೋಬರ್‌ 29ರ ಸಂಜೆ ಪತಿಯೊಂದಿಗೆ ಜಗಳವಾದಾಗ ಆತ ತನ್ನನ್ನು ಹೊಡೆಯಬಹುದೆಂಬ ಭಯದಿಂದ ಮನೆಯಿಂದ ಹೊರಬಂದಿದ್ದಾಗಿ ತಿಳಿಸಿದ್ದಾರೆ. ನೆರೆ ಮನೆಗೆ ಹೋಗಿ ಆಕೆ ಮೊಬೈಲ್ ಫೋನ್ ಮೂಲಕ ಪೊಲೀಸರನ್ನು ಸಂಪರ್ಕಿಸಿದ್ದರು. ಕೂಡಲೇ ಪಿ.ಸಿ.ಆರ್. ವಾಹನದ ಮೂಲಕ ಅವರನ್ನು ಪೊಲೀಸ್ ಠಾಣೆಗೆ ಕರೆ ತರಲಾಯಿತು.

ಮೂವರು ಅಪ್ರಾಪ್ತರು ಸೇರಿ ಏಳು ಮಂದಿಯಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಪೊಲೀಸ್‌ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ವಿಶ್ರಾಂತಿಗಾಗಿ ರೂಮ್‌ ಒಂದನ್ನು ಆಕೆಗೆ ನೀಡಿದ್ದರು. ಅವರು ರೂಮ್‌ನಲ್ಲಿದ್ದಾಗ ಒಳ ನುಗ್ಗಿದ್ದ ಠಾಣೆಯ ವೈರ್‌ಲೆಸ್‌ ಆಪರೇಟರ್‌ ಅತ್ಯಾಚಾರ ಎಸಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸ್ ಅಧೀಕ್ಷಕ ಮನೋಜ್ ಸ್ವರ್ಗಿಯಾರಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುವಂತೆ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಅನುಭವ್ ಭಾರದ್ವಾಜ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ವರದಿಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕರ್ತವ್ಯಲೋಪ ಮತ್ತು ಬೇಜವಾಬ್ದಾರಿ ನಡವಳಿಕೆ ಆರೋಪದ ಮೇಲೆ ಗಮಹರಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಹಾಗೂ ಇತರ ನಾಲ್ವರು ಸಿಬ್ಬಂದಿಯನ್ನು ಎಸ್‌ಪಿ ಅಮಾನತುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆ ನಡೆದಾಗ ಆರೋಪಿ ಧರಿಸಿದ್ದ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅವುಗಳನ್ನು ಪರೀಕ್ಷೆಗಾಗಿ ರಾಂಚಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (Forensic Science Laboratory) ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.

ವಿದೇಶಿ ಯುವತಿ ಮೇಲೆ ಅತ್ಯಾಚಾರ-ಕೊಲೆ; ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಬಿಜೆಪಿ ವಾಗ್ದಾಳಿ

ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಪೊಲೀಸರಿಗೆ ಯಾರ ಭಯವೂ ಇಲ್ಲದಿರುವುದರಿಂದ ರಾಜ್ಯದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗುತ್ತಿವೆ ಎಂದು ಹೇಳಿದೆ. ʼʼಪೊಲೀಸ್ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳಿಗೆ ಹಣ ನೀಡುವ ಮೂಲಕ ಪ್ರಮೋಷನ್‌ ಪಡೆದುಕೊಳ್ಳುತ್ತಾರೆʼʼ ಎಂದು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಆದಿತ್ಯ ಸಾಹು ಆರೋಪಿಸಿದ್ದಾರೆ.

ಈ ಪೊಲೀಸ್ ಅಧಿಕಾರಿಗಳು ಮರಳು, ಅದಿರು ಮತ್ತು ಕಲ್ಲಿದ್ದಲು ಕಳ್ಳಸಾಗಣೆಗೆ ಸಹಕರಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಒಳಗೊಂಡಿರುವ ಆಡಳಿತ ಮೈತ್ರಿಕೂಟದ ಮೇಲೆ ಜನರಿಗೆ ನಂಬಿಕೆ ಕಳೆದುಹೋಗಲು ಇದೇ ಕಾರಣ ಎಂದು ಟೀಕಿಸಿದೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.