ಹೃದಯ ವಿದ್ರಾವಕ ಘಟನೆ; 6 ವರ್ಷದ ಮಗನೊಂದಿಗೆ 18ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ
ಮಹಾರಾಷ್ಟ್ರದ ಪುಣೆಯ ಪಿಂಪ್ರಿ-ಚಿಂಚ್ವಾಡ್ನ ವಾಕಡ್ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 33 ವರ್ಷದ ಮಹಿಳೆಯೊಬ್ಬರು ತಮ್ಮ ಆರು ವರ್ಷದ ಮಗನೊಂದಿಗೆ ವಸತಿ ಕಟ್ಟಡವೊಂದರ 18ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಹಿಳೆ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
-
ಮುಂಬೈ: ಮಹಾರಾಷ್ಟ್ರದ ಪುಣೆಯ (Pune) ಪಿಂಪ್ರಿ-ಚಿಂಚ್ವಾಡ್ನ ವಾಕಡ್ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 33 ವರ್ಷದ ಮಹಿಳೆಯೊಬ್ಬರು ತಮ್ಮ ಆರು ವರ್ಷದ ಮಗನೊಂದಿಗೆ ವಸತಿ ಕಟ್ಟಡವೊಂದರ 18ನೇ ಮಹಡಿಯಿಂದ (Self Harming) ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಹಿಳೆಯನ್ನು ಏಕ್ತಾ ಬಂಗಡ್ ಎಂದು ಗುರುತಿಸಲಾಗಿದ್ದು, ಅವರು ಕಳೆದ ಕೆಲವು ವರ್ಷಗಳಿಂದ ಬೆನ್ನುಮೂಳೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ಮಹಿಳೆ ಬರೆದಿಟ್ಟಿರುವ 8 ಪುಟಗಳ ಡೆತ್ನೋಟ್ ಲಭ್ಯವಾಗಿದ್ದು, ಅದರಲ್ಲಿ ತನ್ನ ಸಾವಿನ ನಂತರ ಪತಿ ಮರುಮದುವೆಯಾಗುವಂತೆ ಅವರು ಭಾವನಾತ್ಮಕವಾಗಿ ಒತ್ತಾಯಿಸಿದ್ದಾರೆ. ಮೂಲತಃ ರಾಜಸ್ಥಾನದವರಾದ ಬಂಗಡ್ ಕುಟುಂಬವು ಪುಣೆಯ ದಾಂಗೆ ಚೌಕ್ ಬಳಿಯ 'ಸಿಗ್ನೇಚರ್ ಪಾರ್ಕ್' ವಸತಿ ಸಂಕೀರ್ಣದ 7 ನೇ ಮಹಡಿಯಲ್ಲಿ ವಾಸಿಸುತ್ತಿತ್ತು. ಏಕ್ತಾ ಅವರ ಪತಿ ಮನೋಜ್ ಬಂಗಡ್ ಪುಣೆಯ ಪ್ರಮುಖ ಐಟಿ ಕಂಪನಿಯೊಂದರಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.
ಶುಕ್ರವಾರ ಸಂಜೆ ಸುಮಾರು 6.30 ರ ಸುಮಾರಿಗೆ ಏಕ್ತಾ ಅವರು ಮಗನನ್ನು ಲಿಫ್ಟ್ ಮೂಲಕ ಅದೇ ಕಟ್ಟಡದ ೧೮ನೇ ಮಹಡಿಗೆ ಕರೆದೊಯ್ದಿದ್ದಾರೆ. ಕಾರಿಡಾರ್ನಲ್ಲಿ ತಮ್ಮ ಚಪ್ಪಲಿಗಳನ್ನು ಬಿಟ್ಟು, ಮಗನನ್ನು ಎತ್ತಿಕೊಂಡು 18ನೇ ಮಹಡಿಯ ಮುಕ್ತ ಜಾಗದಿಂದ ಕೆಳಗೆ ಜಿಗಿದಿದ್ದಾರೆ. ಕಟ್ಟಡದ ನಿವಾಸಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಡಕ್ಟ್ ಪ್ರದೇಶದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಈ ಇಡೀ ಘಟನೆಯು ಅಪಾರ್ಟ್ಮೆಂಟ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಶೇಷ ಚೇತನ ಬಾಲಕಿ ಮೇಲೆ 3ನೇ ತರಗತಿ ವಿದ್ಯಾರ್ಥಿಯಿಂದ ಮಾರಣಾಂತಿಕ ಹಲ್ಲೆ; ಹೂ ಕುಂಡದಿಂದ ಥಳಿಸಿದ ವಿಡಿಯೊ ವೈರಲ್
ಘಟನಾ ಸ್ಥಳವನ್ನು ಪರಿಶೀಲಿಸಿದ ವಾಕಡ್ ಪೊಲೀಸರಿಗೆ ಏಕ್ತಾ ಅವರು ಬರೆದಿಟ್ಟಿದ್ದ ಡೆತ್ನೋಟ್ ದೊರಕಿದ್ದು, ನನ್ನ ಸಾವಿನ ನಂತರ ನೀನು ಒಬ್ಬಂಟಿಯಾಗಬೇಡ, ಮತ್ತೊಂದು ಮದುವೆಯಾಗಿ ಹೊಸ ಜೀವನವನ್ನು ಆರಂಭಿಸು ಎಂದು ತನ್ನ ಪತಿಗೆ ಒತ್ತಾಯಿಸಿದ್ದು ತಿಳಿದು ಬಂದಿದೆ. ಈ ಘಟನೆಗೆ ತನ್ನ ಅನಾರೋಗ್ಯವೇ ಕಾರಣವೇ ಹೊರತು ಕುಟುಂಬದವರಾಗಲಿ ಅಥವಾ ಮತ್ಯಾರೂ ಕಾರಣವಲ್ಲ ಎಂಬುದನ್ನು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.