ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತುಮಕೂರು ಪಾಲಿಕೆಯ 9 ನಿವೇಶನಗಳ ಅಕ್ರಮ ಖಾತೆ ಪ್ರಕರಣ: ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

Tumkur News: ತುಮಕೂರು ಮಹಾನಗರ ಪಾಲಿಕೆಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ 9 ನಿವೇಶನಗಳನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಪಿ.ಐ.ಡಿ ಸಂಖ್ಯೆ ಹಾಗೂ ಖಾತೆ ಮಾಡಿಕೊಟ್ಟು, ಸರ್ಕಾರಿ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದ ಅಧಿಕಾರಿಗಳ ನಿವಾಸಗಳು ಹಾಗೂ ಮಹಾನಗರ ಪಾಲಿಕೆಯ ಕಂದಾಯ ಉಪ ಆಯುಕ್ತರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ದಾಳಿ ಮಾಡಿದ್ದಾರೆ.

ನಿವೇಶನ ಅಕ್ರಮ ಖಾತೆ; ತುಮಕೂರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

-

Profile
Siddalinga Swamy Oct 15, 2026 5:58 PM

ತುಮಕೂರು, ಅ.15: ತುಮಕೂರು ಮಹಾನಗರ ಪಾಲಿಕೆಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ 9 ನಿವೇಶನಗಳನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಪಿ.ಐ.ಡಿ ಸಂಖ್ಯೆ ಹಾಗೂ ಖಾತೆ ಮಾಡಿಕೊಟ್ಟು, ಸರ್ಕಾರಿ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದ ಅಧಿಕಾರಿಗಳ ನಿವಾಸಗಳು ಹಾಗೂ ಮಹಾನಗರ ಪಾಲಿಕೆಯ ಕಂದಾಯ ಉಪ ಆಯುಕ್ತರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ (Lokayukta Raid) ನಡೆಸಿ, ಪರಿಶೀಲಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಮತ್ತು ಆರೋಪ

ತುಮಕೂರಿನ ಶಾಂತಿನಗರದ ನಿವಾಸಿ ಮಂಜುನಾಥ್ ಜಿ. ಎಂಬುವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, 1988ರಲ್ಲಿ ಭೂ ಸ್ವಾಧೀನವಾಗಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ಶಿರಾ ಗೇಟ್‌ ಬಳಿ 'ಐ.ಡಿ.ಎಸ್.ಎಂ.ಟಿ' ಲೇಔಟ್ ನಿರ್ಮಾಣಗೊಂಡಿತ್ತು. ಈ ಪೈಕಿ ವಾರ್ಡ್ ನಂಬರ್-2 ಮತ್ತು 3ರ ನಿವೇಶನ ಸಂಖ್ಯೆ 589 ರಿಂದ 597 ರವರೆಗಿನ ಒಟ್ಟು 09 ನಿವೇಶನಗಳು ತುಮಕೂರು ಮಹಾನಗರ ಪಾಲಿಕೆಗೆ ಸೇರಿದ ಸ್ವತ್ತುಗಳಾಗಿದ್ದವು.

2017ನೇ ಸಾಲಿನಲ್ಲಿ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಈ ಸ್ವತ್ತುಗಳ ಪಿ.ಐ.ಡಿ ಸಂಖ್ಯೆಗಳನ್ನು ಬ್ಲಾಕ್ ಮಾಡಿ, ಯಾವುದೇ ದಾಖಲಾತಿಗಳಿಲ್ಲದಿದ್ದರೂ ನಿಯಮಬಾಹಿರವಾಗಿ ಹೊಸದಾಗಿ ಪಿ.ಐ.ಡಿ ಸಂಖ್ಯೆಗಳನ್ನು ಸೃಷ್ಟಿಸಿದ್ದರು. ಈ ಮೂಲಕ ಖಾಸಗಿ ವ್ಯಕ್ತಿಗಳಾದ ಬಿ. ದಾದಯ್ಯ ಹಾಗೂ ಅವರ ಮಕ್ಕಳಾದ ಬಿ.ಡಿ.ಶುಭಾ ಮತ್ತು ಬಿ.ಡಿ.ಸುಮಾ ಎಂಬುವರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದೂರಿನ ಅನ್ವಯ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ (ಮೊ.ಸಂ: 11/2026) ಐ.ಪಿ.ಸಿ ಕಲಂ 409, 420 ರ ಜತೆಗೆ 120(ಬಿ) ಹಾಗೂ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿತ ಅಧಿಕಾರಿಗಳ ವಿವರ

ಮಹಾನಗರ ಪಾಲಿಕೆ ನಿವೃತ್ತ ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸಮೂರ್ತಿ ಜಿ.ಎನ್., ಪ್ರಭಾರ ಕಂದಾಯ ನಿರೀಕ್ಷಕ ಶಂಕರಪ್ಪ, ಕಂದಾಯ ಅಧಿಕಾರಿ ರತ್ನಮ್ಮ ಎಲ್.ಎನ್., ಪ್ರಭಾರ ಕಂದಾಯ ಉಪ ಆಯುಕ್ತ ತುಕಾರಾಂ ಬಿ. ನಾಯಕ್, ಆಯುಕ್ತ ಮಂಜುನಾಥ್.

ಸುರಪುರದಲ್ಲಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಜೆಇಗಳು

6 ತಂಡಗಳಿಂದ ದಿಢೀರ್ ದಾಳಿ

ಲೋಕಾಯುಕ್ತ ಎಸ್‌ಪಿ ಬಿ. ಮಲ್ಲೇಶ್‌ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಮಂಜುನಾಥ್ ಎಂ. ಮತ್ತು ಸಂತೋಷ್ ಕೆ.ಎಂ. ಹಾಗೂ ಇನ್‌ಸ್ಪೆಕ್ಟರ್‌ಗಳಾದ ನಿರ್ಮಲ ವಿ., ರಾಜು ಟಿ., ರಾಘವೇಂದ್ರ ಜಿ.ಕೆ. ಮತ್ತು ಸುನಿಲ್‌ಕುಮಾರ್ ಎಚ್.ಎಸ್. ಅವರ ನೇತೃತ್ವದಲ್ಲಿ 6 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಗುರುವಾರ ಆರೋಪಿಗಳ ವಾಸದ ಮನೆಗಳು ಹಾಗೂ ತುಮಕೂರು ಮಹಾನಗರ ಪಾಲಿಕೆಯ ಕಂದಾಯ ಉಪ ಆಯುಕ್ತರ (ವಲಯ-1) ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.