BBK 13: ಪದವಿ ಓದಲಿಲ್ಲ, ಬರವಣಿಗೆ ಮೇಲಿನ ಪ್ರೀತಿ ಕಮ್ಮಿ ಆಗಲಿಲ್ಲ; ಹೂ ಕಟ್ಟಿ ಸಾಕಿದ ಅಮ್ಮನ ಬಗ್ಗೆ ʻಮಹಾಕವಿ ಮಂಜʼ ಹೇಳಿದ್ದೇನು?
Mahakavi Manju: ಹೂ ಕಟ್ಟಿ ಸಾಕಿ ಸಲಹಿದ ತಾಯಿಯ ತ್ಯಾಗ, ಮಧ್ಯದಲ್ಲೇ ನಿಂತುಹೋದ ಪದವಿ ಶಿಕ್ಷಣ ಹಾಗೂ ಹೊಟ್ಟೆಪಾಡಿಗಾಗಿ ಮಾಡಿದ 25 ಕೆಲಸಗಳು.. ಬಿಗ್ ಬಾಸ್ ಮನೆಯಿಂದ ಹೊರಬಂದ ಮಹಾಕವಿ ಮಂಜುನಾಥ್ ತಮ್ಮ ಬದುಕಿನ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
-
ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮನೆಯಿಂದ ರೆಡ್ ಕಾರ್ಡ್ ಪಡೆದು ಅನಿರೀಕ್ಷಿತವಾಗಿ ಹೊರಬಿದ್ದ ಸ್ಪರ್ಧಿ ಮಹಾಕವಿ ಮಂಜ ಅಲಿಯಾಸ್ ಮಂಜುನಾಥ್, ಈ ಬಾರಿಯ ಸೀಸನ್ನಲ್ಲಿ ಅತಿ ಹೆಚ್ಚು ಸದ್ದು ಮಾಡಿದವರಲ್ಲಿ ಪ್ರಮುಖರು. ಸಿಕ್ಕ ಬಹುದೊಡ್ಡ ಅವಕಾಶವನ್ನು ನಿಯಮ ಉಲ್ಲಂಘಿಸಿ ಕೈಯಾರೆ ಕಳೆದುಕೊಂಡರೂ, ಅವರ ಮಾತುಗಾರಿಕೆ ಮತ್ತು ವ್ಯಕ್ತಿತ್ವ ಜನರ ಗಮನ ಸೆಳೆದಿತ್ತು. ಸದ್ಯ ದೊಡ್ಮನೆಯಿಂದ ಆಚೆ ಬಂದಿರುವ ಮಂಜ, ವಿವಿಧ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ತಮ್ಮ ಕಷ್ಟದ ಬಾಲ್ಯ, ಕುಟುಂಬದ ಹಿನ್ನೆಲೆ, ಶಿಕ್ಷಣ ಮತ್ತು ತಮ್ಮ ಕನಸುಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಬರವಣಿಗೆಯಲ್ಲಿ ಸಾಧನೆ ಮಾಡಲೇಬೇಕೆಂಬ ಹಠ
ಹೊಟ್ಟೆಪಾಡಿಗಾಗಿ ನಾನಾ ಕೆಲಸಗಳನ್ನು ಮಾಡಿದರೂ ಬರವಣಿಗೆಯ ಮೇಲಿದ್ದ ಅವರ ಪ್ರೀತಿ ಮತ್ತು ಸಿನಿಮಾ ರಂಗಕ್ಕೆ ಕಾಲಿಡಬೇಕೆಂಬ ಕನಸು ಎಂದಿಗೂ ಕಮರಿಹೋಗಲಿಲ್ಲ. "ಎಲ್ಲರೂ ಕಷ್ಟಪಟ್ಟು ಬರುತ್ತಾರೆ, ಆದರೆ ನಾನು ಆ ಕಷ್ಟವನ್ನೇ ಇಷ್ಟಪಟ್ಟು ಎದುರಿಸಿ ಬಂದಿದ್ದೇನೆ. ಬರವಣಿಗೆಯಲ್ಲಿ ಸಾಧನೆ ಮಾಡಲೇಬೇಕೆಂಬ ಹಠ ಮತ್ತು ಛಲ ನನ್ನಲ್ಲಿದ್ದ ಕಾರಣಕ್ಕೇ ಬಿಗ್ ಬಾಸ್ನಂತಹ ದೊಡ್ಡ ವೇದಿಕೆ ನನಗೆ ಸಿಕ್ಕಿತು" ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ.
‘ಪ್ರಾಸ ರಾಕ್ಷಸ’ ಮಂಜ
ತಮ್ಮನ್ನು ತಾವು ‘ಪ್ರಾಸ ರಾಕ್ಷಸ’ ಎಂದು ಕರೆದುಕೊಳ್ಳುವ ಮಂಜುನಾಥ್, ಕಳೆದ 10 ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಕೋಟ್ಸ್ ಹಾಗೂ 6 ಸಾವಿರಕ್ಕೂ ಅಧಿಕ ಸಂಭಾಷಣೆಗಳನ್ನು ಬರೆದು ಸಿದ್ಧಪಡಿಸಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಕಿಚ್ಚ ಸುದೀಪ್ ಅವರ ಜೊತೆ ಮಾತುಕತೆ ನಡೆಸಿರುವುದಾಗಿ ತಿಳಿಸಿರುವ ಅವರು, "ಸುದೀಪಣ್ಣ ನನ್ನನ್ನು ಕರೆಸಿ ಮಾತನಾಡಿಸಿದ್ದಾರೆ. ಎಲ್ಲವನ್ನೂ ಹಂಚಿಕೊಂಡಿದ್ದೇನೆ. ಅತೀ ಶೀಘ್ರದಲ್ಲೇ ಒಂದು ಭರ್ಜರಿ ಮತ್ತು ದೊಡ್ಡ ಅಪ್ಡೇಟ್ ಕೊಡಲಿದ್ದೇನೆ" ಎಂದು ತಿಳಿಸುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
ಜೆಪಿ ನಗರದ ಹುಡುಗ ಮಂಜ
ಅಂದಹಾಗೆ, ಮಂಜುನಾಥ್ ಮೂಲತಃ ಬೆಂಗಳೂರಿನ ಜೆಪಿ ನಗರದವರು. ಹುಟ್ಟಿ ಬೆಳೆದಿದ್ದೆಲ್ಲವೂ ಅಲ್ಲಿಯೇ. ತಮ್ಮ ಕೌಟುಂಬಿಕ ಹಿನ್ನೆಲೆಯ ಬಗ್ಗೆ ಭಾವುಕರಾಗಿ ಮಾತನಾಡಿದ ಅವರು, "ನಮ್ಮ ಅಮ್ಮ ಹೂ ಕಟ್ಟಿ ಕಷ್ಟಪಟ್ಟು ನನ್ನನ್ನು ಬೆಳೆಸಿದ್ದಾರೆ. ಅಕ್ಕ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಾ ಕುಟುಂಬಕ್ಕೆ ಆಸರೆಯಾಗಿದ್ದಾರೆ. ತಂದೆ ಮದ್ಯವ್ಯಸನಿಯಾಗಿದ್ದು, ಸದ್ಯ ಯಾವುದೇ ಕೆಲಸ ಮಾಡುತ್ತಿಲ್ಲ ಹಾಗೂ ನನ್ನ ಜೊತೆ ಹೆಚ್ಚು ಮಾತನಾಡಲ್ಲ" ಎಂದು ಮನೆಯ ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
25 ಕೆಲಸ ಮಾಡಿದ್ದ ಮಂಜ
ಬಾಲ್ಯದಿಂದಲೂ ಬಡತನದಲ್ಲೇ ಬೆಳೆದ ಮಂಜ, ಮನೆಯ ಆರ್ಥಿಕ ಹೊರೆಯನ್ನು ಹೊತ್ತುಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಕುಟುಂಬದ ಜವಾಬ್ದಾರಿ ನಿಭಾಯಿಸಲು ಸುಮಾರು 25ಕ್ಕೂ ಹೆಚ್ಚು ಬಗೆಬಗೆಯ ಉದ್ಯೋಗಗಳನ್ನು ಮಾಡಿದ್ದಾರೆ. "ತಿಂಗಳಿಗೆ ಹಣ ತಂದರೆ ಮಾತ್ರ ಮನೆಯಲ್ಲಿ ಒಲೆ ಉರಿಯುತ್ತಿತ್ತು. ಹಾಗಾಗಿ ಬಂದ ಸಂಬಳದಲ್ಲಿ ಮನೆಗೆ ದಿನಸಿ ತಂದುಕೊಟ್ಟು, ಉಳಿದ ಅಲ್ಪಸ್ವಲ್ಪ ಹಣವನ್ನು ವೈಯಕ್ತಿಕ ಖರ್ಚಿಗೆ ಇಟ್ಟುಕೊಳ್ಳುತ್ತಿದ್ದೆ. ಆದರೆ ಯಾವ ಕೆಲಸದಲ್ಲೂ ನಾನು ದೀರ್ಘಕಾಲ ಇರಲಿಲ್ಲ" ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.
ಶಿಕ್ಷಣದ ವಿಚಾರಕ್ಕೆ ಬಂದರೆ, ಕಾಮರ್ಸ್ ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ಗೆ ತೀವ್ರ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸುವುದು ಅನಿವಾರ್ಯವಾಯಿತು.