ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರಿ ಭದ್ರತಾ ಲೋಪ: ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಅಪರಾಧಿ ಚೆನ್ನೈ ಕೇಂದ್ರ ಕಾರಾಗೃಹದಿಂದ ಪರಾರಿ

ನೇಪಾಳಿ ಪ್ರಜೆ ಸೇರಿದಂತೆ ಇಬ್ಬರು ಕೈದಿಗಳು ಚೆನ್ನೈ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದಾರೆ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ನೇಪಾಳಿ ಪ್ರಜೆ ಸುದೀಪ್ ಬೋಗತಿ ಮಂಗಳವಾರ ಸಂಜೆ ವೇಳೆ ನಾಪತ್ತೆಯಾಗಿದ್ದು, ಪೋಕ್ಸೋ ಕಾಯ್ದೆಯಡಿ ಶಿಕ್ಷೆಗೊಳಗಾದ ಸುರೇಶ್ ಬುಧವಾರ ಬೆಳಗ್ಗೆ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೈದಿಗಳಿಬ್ಬರು ಚೆನ್ನೈ ಜೈಲಿನಿಂದ ಪರಾರಿ

ಸಂಗ್ರಹ ಚಿತ್ರ -

ಚೆನ್ನೈ: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕೈದಿಗಳು (Convict) ಚೆನ್ನೈ ಕಾರಾಗೃಹದಿಂದ (Chennai Central Prison) ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ತಪ್ಪಿಸಿಕೊಂಡ ಇಬ್ಬರು ಕೈದಿಗಳಲ್ಲಿ ನೇಪಾಳಿ ಪ್ರಜೆಯೊಬ್ಬ (Nepali Citizen) ಸೇರಿದ್ದಾನೆ. ಚೆನ್ನೈನ ಪಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ ನೇಪಾಳಿ ಪ್ರಜೆಯನ್ನು ಸುದೀಪ್ ಬೋಗತಿ (21) ಎಂದು ಗುರುತಿಸಲಾಗಿದೆ. ಕಳ್ಳತನ ಪ್ರಕರಣದಲ್ಲಿ ಆತನನ್ನು ಕಳೆದ ಆಗಸ್ಟ್ 16ರಂದು ಬಂಧಿಸಲಾಗಿತ್ತು. ಇನ್ನೋರ್ವ ಪೋಕ್ಸೋ (POCSO Act) ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದ ತಿರುಮಂಗಲಂ ನಿವಾಸಿ ಸುರೇಶ್ (41) ಎಂದು ಗುರುತಿಸಲಾಗಿದೆ. ಈತನನ್ನು 2021ರಲ್ಲಿ ಬಂಧಿಸಲಾಗಿತ್ತು.

ಬಿಗಿ ಭದ್ರತೆಗೆ ಹೆಸರುವಾಸಿಯಾಗಿದ್ದ ಚೆನ್ನೈನ ಪುಝಲ್ ಕೇಂದ್ರ ಕಾರಾಗೃಹದಿಂದ ಇಬ್ಬರು ಕೈದಿಗಳು ತಪ್ಪಿಸಿಕೊಂಡಿದ್ದಾರೆ. ಜೈಲಿನಿಂದ ಕೈದಿಗಳು ಪರಾರಿಯಾಗಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉನ್ನತ ಜೈಲು ಅಧಿಕಾರಿಗಳು, ಭದ್ರತಾ ಲೋಪಗಳ ಬಗ್ಗೆ ತನಿಖೆ ನಡೆಸಲು ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ.

ಸಿಜೆಪಿ ನಾಯಕರಾದ ಸೌರವ್ ದಾಸ್, ಅಶುತೋಷ್ ರಂಕಾಗೆ ಮತ್ತೊಂದು ಸಂಕಷ್ಟ: ದೆಹಲಿ ಕ್ರೈಮ್ ಬ್ರಾಂಚ್‌ನಿಂದ ಸಮನ್ಸ್ ಜಾರಿ

ಕಾರಾಗೃಹದ ವಿದೇಶಿ ಪ್ರಜೆಗಳ ವಿಭಾಗದಲ್ಲಿ ಇದ್ದ ಸುದೀಪ್ ಮಂಗಳವಾರ ಸಂಜೆ ಕೈದಿಗಳ ಹಾಜರಾತಿ ಪರಿಶೀಲನೆ ವೇಳೆ ನಾಪತ್ತೆಯಾಗಿರುವುದು ಅಧಿಕಾರಿಗಳಿಗೆ ತಿಳಿದು ಬಂದಿದೆ. ಬುಧವಾರ ಬೆಳಗಿನ ಜಾವದವರೆಗೂ ಕಾರಾಗೃಹದ ಆವರಣದೊಳಗೆ ಆತನಿಗಾಗಿ ತೀವ್ರ ಶೋಧ ನಡೆಸಲಾಯಿತು. ಆತನ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪುಝಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ ಸುರೇಶ್ ಎಂಬಾತ ಬುಧವಾರ ಮುಂಜಾನೆ ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಕಳೆದ ಕೆಲವು ವರ್ಷಗಳಿಂದ ಆತನ ನಡವಳಿಕೆ ಉತ್ತಮವಾಗಿದ್ದ ಕಾರಣ ಮುಖ್ಯ ಜೈಲು ಆವರಣದ ಹೊರಗಿರುವ 'ಜೈಲು ಬಜಾರ್'ನಲ್ಲಿ ಆತನಿಗೆ ದೈನಂದಿನ ಕೆಲಸಗಳನ್ನು ವಹಿಸಲಾಗಿತ್ತು. ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಸಿಬ್ಬಂದಿಯ ಗಮನ ಬೇರೆಡೆ ಇದ್ದಾಗ ಆತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನನ್ನು ವಿಚಾರಣೆ ನಡೆಸಲು ಮುಂಬೈ ಪೊಲೀಸರಿಗೆ ಕೇಂದ್ರದ ಆ ಒಂದು ಆದೇಶವೇ ಅಡ್ಡಿ!

ಜೈಲು ಆಡಳಿತ ಮಂಡಳಿಯ ದೂರಿನ ಮೇರೆಗೆ ಪುಝಲ್ ಪೊಲೀಸರು ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಪರಾರಿಯಾದ ಕೈದಿಗಳನ್ನು ಪತ್ತೆಹಚ್ಚಿ ಬಂಧಿಸಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.