ಮಲಗಿದ್ದಾಗ ಆಕಸ್ಮಿಕವಾಗಿ ಮಲ ವಿಸರ್ಜನೆ ಮಾಡಿದ 3 ವರ್ಷದ ಬಾಲಕನ ಹತ್ಯೆ; ತಾಯಿಯ ಗೆಳೆಯನಿಂದಲೇ ಕೃತ್ಯ!
Crime News: ಮಲಗಿದ ವೇಳೆ ಆಕಸ್ಮಿಕವಾಗಿ ಮಲ ವಿಸರ್ಜನೆ ಮಾಡಿದ ಕಾರಣಕ್ಕೆ 3 ವರ್ಷದ ಬಾಲಕನನ್ನು ಹತ್ಯೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಅಮಾನುಷ ಕೃತ್ಯವನ್ನು ಬಾಲಕನ ತಾಯಿಯ ಗೆಳೆಯನೇ ನಡೆಸಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ -
ಮುಂಬೈ, ಡಿ. 23: ಮೂರು ವರ್ಷದ ಬಾಲಕನೊಬ್ಬ ಮಲಗಿದ್ದಾಗ ಆಕಸ್ಮಿಕವಾಗಿ ಬಟ್ಟೆಯ ಮೇಲೆ ಮಲ ವಿಸರ್ಜನೆ ಮಾಡಿದ್ದಕ್ಕೆ ತಾಯಿಯ ಲಿವ್-ಇನ್ ಸಂಗಾತಿಯೇ ಆತನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಸೋಲಾಪುರದಲ್ಲಿ ನಡೆದಿದೆ (Crime News). 44 ವರ್ಷದ ಮೌಲಾಲಿ ಅಲಿಯಾಸ್ ಅಕ್ಬರ್ ರಜಾಕ್ ಕೊಲೆ ಮಾಡಿದಾತ. ಡಿಸೆಂಬರ್ 11ರ ರಾತ್ರಿ ಮದ್ಯ ಸೇವಿಸಿದ್ದ ಮೌಲಾಲಿ ಅಲಿಯಾಸ್ ಅಕ್ಬರ್ ರಜಾಕ್ ತನ್ನ ಬಳಿ ಮಲಗಿದ್ದ ಬಾಲಕ ಫರ್ಹಾನ್‌ನನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕ ಆಕಸ್ಮಿಕವಾಗಿ ಮಲ ವಿಸರ್ಜನೆ ಮಾಡಿದಾಗ ಕೋಪಗೊಂಡ ಮೌಲಾಲಿ ಅವನಿಗೆ ಹೊಡೆದು ಕತ್ತು ಹಿಸುಕಿ ಕೊಂದಿದ್ದಾನೆ ಎನ್ನಲಾಗಿದೆ. ಮನೆಕೆಲಸದಾಕೆಯಾಗಿ ಕೆಲಸ ಮಾಡುವ ಬಾಲಕನ 28 ವರ್ಷದ ತಾಯಿ ಶಹನಾಜ್ ಶೇಖ್ ಮನೆಗೆ ಹಿಂದಿರುಗಿದಾಗ ಫರ್ಹಾನ್ ಬಿದ್ದು ಗಾಯಗೊಂಡಿದ್ದಾನೆ ಎಂದು ಅಕ್ಬರ್ ರಜಾಕ್ ಹೇಳಿದ್ದ. ನಂತರ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಗೆಳೆಯನ ಜೊತೆ ಲವ್ವಿಡವ್ವಿ; ಗಂಡನನ್ನು ಕೊಂದು ದೇಹ ಕತ್ತರಿಸಿ ನದಿಗೆಸೆದ ಪತ್ನಿ!
ಖಾಸಗಿ ಆಸ್ಪತ್ರೆಯ ವೈದ್ಯರು ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದರು. ಈ ವೇಳೆ ಆರೋಪಿಯು ತಾಯಿ ಮತ್ತು ಮಗುವನ್ನು ಕರ್ನಾಟಕದ ವಿಜಯಪುರಕ್ಕೆ ಕರೆದೊಯ್ದಿದ್ದ. ಅಲ್ಲಿನ ಬಸ್ ನಿಲ್ದಾಣ ತಲುಪಿದ ನಂತರ ಪರಾರಿಯಾಗಿದ್ದ. ಶಹನಾಜ್ ಕೊನೆಗೆ ತನ್ನ ಮೊದಲ ಪತಿಯ ಸಹಾಯದಿಂದ ಫರ್ಹಾನ್‍ನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಳು.
ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ಘೋಷಿಸಿದರು. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕನನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂಬುದು ದೃಢಪಟ್ಟಿದೆ. ಪ್ರಕರಣ ಸಂಬಂಧ ಆರೋಪಿ ಅಕ್ಬರ್ ರಜಾಕ್ನನ್ನು ಬಂಧಿಸಲಾಗಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಪ್ರಮೋದ್ ವಾಘ್ಮೋರೆ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮೊದಲ ಮದುವೆಯಿಂದ ಇಬ್ಬರು ಮಕ್ಕಳಿರುವ ಶಹನಾಜ್ ಮತ್ತು ಮೌಲಾಲಿ ವಿಜಯಪುರದವರಾದರೂ ಕಳೆದ ಒಂದು ತಿಂಗಳಿನಿಂದ ಮಹಾರಾಷ್ಟ್ರದ ಸೋಲಾಪುರದಲ್ಲಿ ವಾಸಿಸುತ್ತಿದ್ದಾರೆ.
ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ
ಮೀರತ್ ಮೂಲದ ಮುಸ್ಕಾನ್ ಪ್ರಕರಣವನ್ನು ಹೋಲುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ. ಇಬ್ಬರು ಸೇರಿ ಮೃತದೇಹವನ್ನು ಗ್ರೈಂಡರ್ ಬಳಸಿ ತುಂಡು ಮಾಡಿ ನಂತರ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಪತಿಯ ನಾಪತ್ತೆ ಬಗ್ಗೆ ಮಹಿಳೆಯೇ ದೂರು ದಾಖಲಿಸಿದ್ದಳು. ಕೊಲೆಗೆ ಬಳಸಿದ್ದ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ರೂಬಿ ಮತ್ತು ಆಕೆಯ ಪ್ರಿಯಕರ ಗೌರವ್ ಎಂದು ಗುರುತಿಸಲಾಗಿದೆ. ಚಂದೌಸಿ ಪ್ರದೇಶದ ಮೊಹಲ್ಲಾ ಚುನ್ನಿ ನಿವಾಸಿ ರೂಬಿ ನವೆಂಬರ್ 18ರಂದು ತನ್ನ ಪತಿ ರಾಹುಲ್ (38) ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಳು. ಬಳಿಕ ಈದ್ಗಾ ಪ್ರದೇಶದ ಬಳಿಯ ಚರಂಡಿಯಿಂದ ಪೊಲೀಸರು ಕೊಳೆತ ಶವವನ್ನು ವಶಪಡಿಸಿಕೊಂಡರು.
ಶವದಲ್ಲಿ ತಲೆ, ಕೈಗಳು ಮತ್ತು ಕಾಲುಗಳು ನಾಪತ್ತೆಯಾಗಿದ್ದವು. ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವಿಧಿವಿಜ್ಞಾನ ತಂಡವು ವಿವರವಾದ ಪರೀಕ್ಷೆಯನ್ನು ನಡೆಸಿತು ಮತ್ತು ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಯಿತು ಎಂದು ಅಧಿಕಾರಿ ಹೇಳಿದರು.
ತನಿಖೆಯ ಸಮಯದಲ್ಲಿ ಪೊಲೀಸರು ದೇಹದ ಮೇಲೆ ರಾಹುಲ್ ಎಂಬ ಹೆಸರನ್ನು ಬರೆದಿರುವುದನ್ನು ಕಂಡುಕೊಂಡರು. ಹತ್ತಿರದ ಪೊಲೀಸ್ ಠಾಣೆಗಳಿಂದ ನಾಒತ್ತೆಯಾದ ವ್ಯಕ್ತಿಯ ವರದಿಗಳ ಪರಿಶೀಲನೆ ಮತ್ತು ತಾಂತ್ರಿಕ ವಿಶ್ಲೇಷಣೆಯು ಇದು ರಾಹುಲ್ ಮೃತದೇಹ ಎನ್ನುವುದನ್ನು ದೃಢಪಡಿಸಿತು. ತನಿಖೆಯ ಸಮಯದಲ್ಲಿ ಪೊಲೀಸರು ರೂಬಿಯ ಕೈವಾಡ ಶಂಕಿಸಿದರು. ವಿಚಾರಣೆಯ ಸಮಯದಲ್ಲಿ ರೂಬಿ, ಗೌರವ್ ಜತೆ ಅಕ್ರಮ ಸಂಬಂಧ ಹೊಂದಿದ್ದನ್ನು ರಾಹುಲ್ ಕಂಡುಹಿಡಿದಿದ್ದಾಗಿ ಒಪ್ಪಿಕೊಂಡಿದ್ದಾಳೆ. ನಂತರ ತನ್ನ ಪ್ರಿಯಕರನ ಸಹಾಯದಿಂದ ತನ್ನ ಪತಿಯನ್ನು ಕೊಂದಿದ್ದಾಗಿ ಹೇಳಿದ್ದಾಳೆ.