ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Year Ender 2025: ಎಸ್‌.ಎಸ್‌. ಭೈರಪ್ಪ, ಪೋಪ್ ಫ್ರಾನ್ಸಿಸ್‌, ಗೋಪಿಚಂದ್ ಹಿಂದೂಜಾ; 2025ರಲ್ಲಿ ನಿಧನರಾದ ಪ್ರಭಾವಿ ವ್ಯಕ್ತಿಗಳಿವರು

2025ರಲ್ಲಿ ವಿಶ್ವದ ವಿವಿಧ ಕ್ಷೇತ್ರಗಳ ಹಲವು ಪ್ರಮುಖ ವ್ಯಕ್ತಿಗಳು ನಿಧನ ಹೊಂದಿದರು. ರಾಜಕೀಯ, ಆಧ್ಯಾತ್ಮಿಕ, ಕ್ರೀಡೆ, ವ್ಯಾಪಾರ ಮತ್ತು ಕಲಾ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಗಣ್ಯರು ಈ ವರ್ಷ ವಿಧಿವಶರಾದರು. ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ.

2025ರಲ್ಲಿ ನಿಧನರಾದ ಪ್ರಭಾವಿ ವ್ಯಕ್ತಿಗಳಿವರು

ಸಂಗ್ರಹ ಚಿತ್ರ -

Priyanka P
Priyanka P Dec 23, 2025 7:15 PM

ದೆಹಲಿ, ಡಿ. 23: 2025ರಲ್ಲಿ ರಾಜಕೀಯ, ಆಧ್ಯಾತ್ಮಿಕ, ವಿಜ್ಞಾನ, ವ್ಯಾಪಾರ ಹಾಗೂ ಕ್ರೀಡಾ ಕ್ಷೇತ್ರಗಳಿಗೆ ಸಂಬಂಧಿಸಿದ ವಿಶ್ವದ ಕನಿಷ್ಠ 12ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳು ನಿಧನ ಹೊಂದಿದರು. ತಮ್ಮ ಕ್ಷೇತ್ರದಲ್ಲಿ ಛಾಪು ಮೂಡಿಸಿದ ರಾಜಕೀಯ ನಾಯಕರು, ಆಧ್ಯಾತ್ಮಿಕ ಗುರುಗಳು, ವಿಜ್ಞಾನಿಗಳು, ಉದ್ಯಮ ದಿಗ್ಗಜರು ಹಾಗೂ ಕ್ರೀಡಾ ತಾರೆಯರು ಮರೆಯಾಗಿದ್ದಾರೆ. ಈ ವರ್ಷ ನಿಧನರಾದ ವಿಶ್ವದ ಕೆಲವು ಪ್ರಭಾವಿ ನಾಯಕರ ಸಂಕ್ಷಿಪ್ತ ವಿವರ ಇಲ್ಲಿದೆ (Year Ender 2025).

ಎಸ್‌.ಎಸ್‌. ಭೈರಪ್ಪ (1931-2025)

ಕನ್ನಡ ಸಾಹಿತ್ಯ ಲೋಕಕ್ಕೆ, ಕಾದಂಬರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ಸಾಹಿತಿ ಎಸ್‌.ಎಸ್‌. ಭೈರಪ್ಪ ಸೆಪ್ಟೆಂಬರ್‌ 24ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ತಮ್ಮ ವಿಶಿಷ್ಟ ಕೃತಿಗಳ ಮೂಲಕ ಸಾಹಿತ್ಯ ಪ್ರೇಮಿಗಳ ಗಮನ ಸೆಳೆದ ಅವರ ಹಲವು ಕಾದಂಬರಿಗಳು ಭಾರತದ ವಿವಿಧ ಭಾಷೆಗಳು ಮಾತ್ರವಲ್ಲ ಇಂಗ್ಲಿಷ್‌ಗೂ ಅನುವಾದಗೊಂಡಿವೆ.

ಧರ್ಮೇಂದ್ರ (1935–2025)

ಬಾಲಿವುಡ್‌ನ ಜನಪ್ರಿಯ ನಟ ಧರ್ಮೇಂದ್ರ ಅಲ್ಪಕಾಲದ ಅನಾರೋಗ್ಯದ ನಂತರ ನವೆಂಬರ್‌ 24ರಂದು ಮುಂಬೈನಲ್ಲಿನ ತಮ್ಮ ನಿವಾಸದಲ್ಲಿ 89ನೇ ವಯಸ್ಸಿನಲ್ಲಿ ನಿಧನರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಅಕ್ಟೋಬರ್‌ 31ರಂದು ಮುಂಬೈಯ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 1935ರಲ್ಲಿ ಪಂಜಾಬ್‌ನಲ್ಲಿ ಜನಿಸಿದ ಧರ್ಮೇಂದ್ರ 1960ರಲ್ಲಿ ಬಿಡುಗಡೆಯಾದ ʼದಿಲ್ ಭೀ ತೇರಾ ಹಮ್ ಭೀ ತೇರೆʼ ಚಿತ್ರದ ಮೂಲಕ ಸಿನಿಮಾ ಜೀವನವನ್ನು ಆರಂಭಿಸಿದರು. ಶ್ರೀರಾಮ್ ರಾಘವನ್ ನಿರ್ದೇಶನದ ʼಇಕ್ಕೀಸ್ʼ ಚಿತ್ರವು 2026ರ ಜನವರಿ 1ರಂದು ಬಿಡುಗಡೆಯಾಗಲಿದ್ದು, ಇದು ಧರ್ಮೇಂದ್ರ ಅವರ ಬೆಳ್ಳಿತೆರೆಯ ಮೇಲಿನ ಕೊನೆಯ ಚಿತ್ರವಾಗಿರಲಿದೆ.

ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು ಇವು

ಪೋಪ್ ಫ್ರಾನ್ಸಿಸ್ (1936–2025)

ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಏಪ್ರಿಲ್‌ 21ರಂದು ನಿಧನರಾದರು. ಅವರಿಗೆ 88 ವರ್ಷವಾಗಿತ್ತು. ಮೆದುಳಿನ ಸ್ಟ್ರೋಕ್‌ನಿಂದಾಗಿ ವಾಟಿಕನ್‌ನಲ್ಲಿನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು. ಫ್ರಾನ್ಸಿಸ್ ಲ್ಯಾಟಿನ್ ಅಮೆರಿಕದ ಮೊದಲ ಪೋಪ್ ಆಗಿದ್ದು, ಜೆಸ್ಯೂಯಿಟ್ ಸಮುದಾಯಕ್ಕೆ ಸೇರಿದವರು. ಬಡವರ ಪರವಾದ ನಿಲುವು ಹಾಗೂ ಚರ್ಚ್ ಸುಧಾರಣೆಗೆ ಕೈಗೊಂಡ ಪ್ರಯತ್ನಗಳಿಗಾಗಿ ಅವರು ಸಾಕಷ್ಟು ಜನಪ್ರಿಯರಾಗಿದ್ದರು. ಅವರ ನಿಧನದ ನಂತರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಪಾಪಲ್ ಕಾನ್‌ಕ್ಲೇವ್ ಸಭೆ ನಡೆಯಿತು. ಮೂರು ದಿನಗಳ ಬಳಿಕ ಲಿಯೋ XIV ಅವರನ್ನು ಹೊಸ ಪೋಪ್ ಆಗಿ ಆಯ್ಕೆ ಮಾಡಲಾಯಿತು.

ಚಾರ್ಲಿ ಕರ್ಕ್ (1993–2025)

ಅಮೆರಿಕದ ರಾಜಕೀಯ ಕಾರ್ಯಕರ್ತ ಚಾರ್ಲಿ ಕರ್ಕ್ ಸೆಪ್ಟೆಂಬರ್ 10ರಂದು ಯುಟಾ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವಾಗ ಗುಂಡಿನ ದಾಳಿಗೆ ಬಲಿಯಾದರು. ಅವರಿಗೆ 32 ವರ್ಷ ವಯಸ್ಸಾಗಿತ್ತು. ಕರ್ಕ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಗಂಭೀರ ಗಾಯಗಳಿಂದ ಅವರು ಕೊನೆಯುಸಿರೆಳೆದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಬಂಧು ಮತ್ತು ಗೆಳೆಯರಾಗಿದ್ದ ಕರ್ಕ್ ಅವರನ್ನು ಹುತಾತ್ಮ ಎಂದು ಕರೆದರು.

ಶಿವರಾಜ್ ಪಾಟೀಲ್ (1935–2025)

ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಗೃಹ ಸಚಿವ ಮತ್ತು ಲೋಕಸಭಾ ಸ್ಪೀಕರ್ ಶಿವರಾಜ್ ಪಾಟೀಲ್ ಡಿಸೆಂಬರ್ 12ರಂದು ಮಹಾರಾಷ್ಟ್ರದ ಲತೂರಿನಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 90 ವರ್ಷದ ವಯಸ್ಸಾಗಿತ್ತು. ಶಿವರಾಜ್ ಪಾಟೀಲ್ 2004ರಿಂದ 2008ರವರೆಗೆ ಕೇಂದ್ರ ಗೃಹ ಸಚಿವರಾಗಿದ್ದರು. 1991 \ರಿಂದ 1996ರವರೆಗೆ ಲೋಕಸಭಾ ಸ್ಪೀಕರ್ ಆಗಿದ್ದರು. ಜತೆಗೆ ಅವರು ಪಂಜಾಬ್‌ನ ಗವರ್ನರ್ ಮತ್ತು ಚಂಡೀಗಢ ಆಡಳಿತಾಧಿಕಾರಿಯಾಗಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು.

ಜೆನ್ ಗುಡಾಲ್ (1934–2025)

ಪ್ರಸಿದ್ಧ ಬ್ರಿಟಿಷ್ ಪ್ರೈಮಟೋಲಜಿಸ್ಟ್, ಸಂರಕ್ಷಣಾ ಕಾರ್ಯಕರ್ತ ಮತ್ತು ಮಾನವತಾವಾದಿ ಜೇನ್ ಗುಡಾಲ್ ಅಕ್ಟೋಬರ್ 1ರಂದು ಕ್ಯಾಲಿಫೋರ್ನಿಯಾದಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು. ಅವರು ತಾಂಜಾನಿಯಾದಲ್ಲಿ ಚಿಂಪಾಂಜಿಗಳ ಅಧ್ಯಯನದ ಮೂಲಕ ಜನಪ್ರಿಯರಾಗಿದ್ದರು.

ಸತ್ಯಪಾಲ್ ಮಲಿಕ್ (1946–2025)

ಮೇಘಾಲಯ, ಜಮ್ಮು ಮತ್ತು ಕಾಶ್ಮೀರ, ಗೋವಾ, ಬಿಹಾರ ಮತ್ತು ಒಡಿಶಾ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಆಗಸ್ಟ್ 5ರಂದು ದೆಹಲಿಯಲ್ಲಿ ತಮ್ಮ 79ನೇ ವಯಸ್ಸಿನಲ್ಲಿ ನಿಧನರಾದರು. ಕೇಂದ್ರ ಸರ್ಕಾರವು ಆರ್ಟಿಕಲ್ 370 ಅನ್ನು ರದ್ದುಗೊಳಿಸಿದಾಗ ಅವರು ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿದ್ದರು. ಅವರು 2020ರಿಂದ 2022ರವರೆಗೆ ಮೇಘಾಲಯದ ಗವರ್ನರ್ ಆಗಿದ್ದರು.

ಗೋಪಿಚಂದ್ ಹಿಂದೂಜಾ (1940-2025)

ಭಾರತೀಯ ಬ್ರಿಟಿಷ್ ಬಿಲಿಯನೇರ್ ಮತ್ತು ಹಿಂದೂಜಾ ಗ್ರೂಪ್‌ನ ದೀರ್ಘಕಾಲೀನ ಅಧ್ಯಕ್ಷರಾಗಿದ್ದ ಗೋಪಿಚಂದ್ ಹಿಂದೂಜಾ ನವೆಂಬರ್ 4ರಂದು ಲಂಡನ್‌ನಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾದರು. ಅವರು ತಮ್ಮ ಕುಟುಂಬದ ಸಾಧಾರಣ ವ್ಯಾಪಾರ ಸಂಸ್ಥೆಯನ್ನು ವಿಶ್ವದ ಅತಿದೊಡ್ಡ ಜಾಗತಿಕ ಸಂಘಟಿತ ಸಂಸ್ಥೆಗಳಲ್ಲಿ ಒಂದನ್ನಾಗಿ ಬೆಳೆಸಿದ್ದರು. ಅಂದಾಜು 35 ಬಿಲಿಯನ್ ಯುಕೆ ಪೌಂಡ್‌ಗಳ ಸಂಪತ್ತಿನೊಂದಿಗೆ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ತಲುಪಿದ್ದರು. ಪತ್ನಿ ಸುನೀತಾ ಮತ್ತು ಮಕ್ಕಳಾದ ಸಂಜಯ್, ಧೀರಜ್ ಮತ್ತು ರೀಟಾ ಅವರನ್ನು ಹಿಂದೂಜಾ ಅಗಲಿದ್ದಾರೆ.

ಶಿಬು ಸೊರೆನ್ (1944-2025)

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸ್ಥಾಪಕ ಮತ್ತು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್, ದೀರ್ಘಕಾಲದ ಮೂತ್ರಪಿಂಡ ಸಂಬಂಧಿತ ಕಾಯಿಲೆಯ ನಂತರ ಆಗಸ್ಟ್ 4ರಂದು ದೆಹಲಿಯಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಬುಡಕಟ್ಟು ನಾಯಕರಾಗಿದ್ದ ಅವರು ಪ್ರತ್ಯೇಕ ಜಾರ್ಖಂಡ್ ರಾಜ್ಯಕ್ಕಾಗಿ ಚಳುವಳಿಯನ್ನು ಮುನ್ನಡೆಸಿದ ಮತ್ತು ಮೂರು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ವಿಜಯ ರೂಪಾಣಿ (1956–2025)

ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾಣಿ ಜೂನ್ 12ರಂದು ಅಹಮದಾಬಾದ್ ಏರ್‌ಪೋರ್ಟ್ ಬಳಿಯ ವಿಮಾನ ದುರಂತದಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಲಂಡನ್‌ಗೆ ಹೊರಡುವ ವಿಮಾನವು ಹಾರಾಟದ ಕೆಲವು ಕ್ಷಣಗಳ ನಂತರ ಪತನಗೊಂಡಿದ್ದು, ವಿಮಾನದಲ್ಲಿದ್ದವರ ಪೈಕಿ ಓರ್ವ ಪ್ರಯಾಣಿಕನನ್ನು ಹೊರತುಪಡಿಸಿ ಎಲ್ಲರೂ ಮೃತಪಟ್ಟಿದ್ದರು. ಗುಜರಾತ್ ವಿಜಯ ರೂಪಾಣಿ ಅವರ ಅಂತಿಮ ವಿಧಿ ವಿಧಾನವನ್ನು ರಾಜ್ಯ ಸಮ್ಮಾನದಿಂದ ನೆರವೇರಿಸಿತು.

ವೆಸ್ ಪೇಸ್ (1945-2025)

ಮಾಜಿ ಭಾರತೀಯ ಒಲಿಂಪಿಕ್ ಫೀಲ್ಡ್ ಹಾಕಿ ಮಿಡ್‌ಫೀಲ್ಡರ್ ಮತ್ತು ಕ್ರೀಡಾ ವೈದ್ಯಕೀಯ ತಜ್ಞ ವೆಸ್ ಪೇಸ್, ​​ಆಗಸ್ಟ್ 14ರಂದು ಕೋಲ್ಕತ್ತಾದಲ್ಲಿ 80ನೇ ವಯಸ್ಸಿನಲ್ಲಿ ನಿಧನರಾದರು. ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಅವರು, ನಂತರ ಕ್ರೀಡಾ ವೈದ್ಯರಾದರು. ಅವರು ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ಅವರ ತಂದೆ.

ಈ ವರ್ಷ ದೇಶದ ವಿವಿಧೆಡೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದು ಎಷ್ಟು ಮಂದಿ?

ಲಾರ್ಡ್ ಸ್ವರಾಜ್ ಪಾಲ್ (1931–2025)

ಭಾರತದಲ್ಲಿ ಜನಿಸಿದ ಬ್ರಿಟಿಷ್ ಕೈಗಾರಿರೋದ್ಯಮಿ ಮತ್ತು ಹೌಸ್ ಆಫ್ ಲಾರ್ಡ್ಸ್ ಸದಸ್ಯ ಲಾರ್ಡ್ ಸ್ವರಾಜ್ ಪಾಲ್ ಆಗಸ್ಟ್ 21ರಂದು ಲಂಡನ್‌ನಲ್ಲಿ 94ನೇ ವಯಸ್ಸಿನಲ್ಲಿ ನಿಧನರಾದರು. ಕ್ಯಾಪಾರೋ ಗ್ರೂಪ್‌ನ ಸ್ಥಾಪಕರಾದ ಅವರು, ಜಾಗತಿಕ ಸ್ಟೀಲ್ ಮತ್ತು ಎಂಜಿನಿಯರಿಂಗ್ ಕಾಂಗ್ಲೊಮರೇಟ್‌ನ ಪ್ರಮುಖ ಮುಖಂಡರಾಗಿದ್ದರು. ದಾನದ ಮೂಲಕ ಜನಪ್ರಿಯತೆ ಗಳಿಸಿದ ಮತ್ತು ಭಾರತೀಯ-ಬ್ರಿಟಿಷ್ ಸಂಬಂಧಗಳನ್ನು ಬೆಳೆಸಿದ್ದ ಅವರು ಯುಕೆ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಲೈಫ್ ಪಿಯರ್ ಆಗಿದ್ದರು. ಕೈಗಾರಿಕೆ ಮತ್ತು ಸಾರ್ವಜನಿಕ ಸೇವೆಗೆ ನೀಡಿದ ಕೊಡುಗೆಗಾಗಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು.

ವಿ.ಎಸ್. ಅಚ್ಯುತಾನಂದನ್ (1923-2025)

ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಮ್ಯುನಿಸ್ಟ್ ನಾಯಕ ವಿ.ಎಸ್. ಅಚ್ಯುತಾನಂದನ್ ಜುಲೈ 21ರಂದು ತಮ್ಮ 101ನೇ ವಯಸ್ಸಿನಲ್ಲಿ ನಿಧನರಾದರು. ಹೃದಯಾಘಾತಕ್ಕೆ ಒಳಗಾಗಿದ್ದ ಅವರು ತಿರುವನಂತಪುರದ ಪಟ್ಟೋಮ್ ಎಸ್‌ಯುಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸ್ಥಾಪಕ ಸದಸ್ಯರಾಗಿದ್ದ ಅಚ್ಯುತಾನಂದನ್ ಅವರ ಸುದೀರ್ಘ ವೃತ್ತಿಜೀವನದಲ್ಲಿ 2006ರಿಂದ 2011ರವರೆಗೆ ಮುಖ್ಯಮಂತ್ರಿಯಾಗಿ ಮತ್ತು ಹಲವು ಬಾರಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದರು.

ಫೌಜಾ ಸಿಂಗ್ (1911-2025)

ಟರ್ಬನ್ಡ್ ಟೊರ್ನಾಡೊ ಎಂದು ಕರೆಯಲ್ಪಡುವ ಬ್ರಿಟಿಷ್-ಭಾರತೀಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್, ಜುಲೈ 14ರಂದು ಪಂಜಾಬ್‌ನ ತಮ್ಮ ಹಳ್ಳಿಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದು 114ನೇ ವಯಸ್ಸಿನಲ್ಲಿ ನಿಧನರಾದರು. 100 ವರ್ಷ ದಾಟಿದ ನಂತರ ಮ್ಯಾರಥಾನ್‌ಗಳನ್ನು ಪೂರ್ಣಗೊಳಿಸುವ ಮೂಲಕ ಸಿಂಗ್ ಜಾಗತಿಕ ಐಕಾನ್ ಎಂದೇ ಗುರುತಿಸಿಕೊಂಡಿದ್ದರು.