Duleep Trophy:ಉತ್ತರ ವಲಯ ತಂಡದಲ್ಲಿ ಸ್ಥಾನ ಕಳೆದುಕೊಂಡ ಅಭಿಷೇಕ್ ಶರ್ಮಾ!
ದುಲೀಪ್ ಟ್ರೋಫಿ ಟೂರ್ನಿಗಾಗಿ ಉತ್ತರ ವಲಯ ತಂಡವನ್ನು ಪ್ರಕಟಿಸಲಾಗಿದ್ದು, ಭಾರತದ ಟಿ20 ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾಗೆ ಸ್ಥಾನ ಸಿಕ್ಕಿಲ್ಲ. ಜಮ್ಮು ಮತ್ತು ಕಾಶ್ಮೀರದ ಕನ್ಹಯ್ಯ ವಾಧವನ್ 15 ಸದಸ್ಯರ ತಂಡವನ್ನು ಮುನ್ನಡೆಸಲಿದ್ದಾರೆ. ಟೀಮ್ ಇಂಡಿಯಾದ ಅರ್ಷದೀಪ್ ಸಿಂಗ್‌ಗೂ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ.
ಉತ್ತರ ವಲಯ ತಂಡದಲ್ಲಿ ಸ್ಥಾನ ಕಳೆದುಕೊಂಡ ಅಭಿಷೇಕ್ ಶರ್ಮಾ. -
ನವದೆಹಲಿ: ಮುಂಬರುವ 2026ರ ದುಲೀಪ್ ಟ್ರೋಫಿ (Duleep Trophy 2026) ಟೂರ್ನಿಗೆ ಪ್ರಕಟಿಸಲಾದ ಉತ್ತರ ವಲಯದ (North Zone) 15 ಸದಸ್ಯರ ತಂಡದಲ್ಲಿ ಟೀಮ್ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾ (Abhishek Sharma) ಹಾಗೂ ಪ್ರಭ್‌ಸಿಮ್ರನ್ ಸಿಂಗ್‌ಗೆ ಸ್ಥಾನ ಸಿಕ್ಕಿಲ್ಲ.ಅಭಿಷೇಕ್ ಶರ್ಮಾ 2024ರ ಬಳಿಕ ಯಾವುದೇ ರೆಡ್‌ಬಾಲ್ ಪಂದ್ಯ ಆಡದಿದ್ದರೂ, ಭಾರತದ ಟಿ20 ತಂಡಕ್ಕೆ ಒಂದು ತಿಂಗಳ ವಿರಾಮ ಇರುವ ಕಾರಣ ಅವರಿಗೆ ದುಲೀಪ್ ಟ್ರೋಫಿ ತಂಡದಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು.
ಭಾರತ ತಂಡದ ಕರ್ತವ್ಯಗಳ ಕಾರಣದಿಂದ 2024ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಬಳಿಕ ಅವರು ದೇಶಿ ರೆಡ್‌ಬಾಲ್ ಕ್ರಿಕೆಟ್‌ನಲ್ಲಿ ಹೆಚ್ಚು ಆಡಲು ಸಾಧ್ಯವಾಗಿರಲಿಲ್ಲ. ಇದುವರೆಗೆ 24 ಪ್ರಥಮ ದರ್ಜೆ ಪಂದ್ಯಗಳಲ್ಲಿ 30.60ರ ಸರಾಸರಿಯಲ್ಲಿ 1,071 ರನ್ ಗಳಿಸಿರುವ ಅವರು, ಒಂದು ಶತಕ ಹಾಗೂ ಐದು ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ʻಛತ್ತೀಸ್‌ಗಢ ತಂಡದಲ್ಲಿ ನನ್ನನ್ನು ತುಳಿಯಲಾಗುತ್ತಿದೆʼ: ಶಶಾಂಕ್ ಸಿಂಗ್ ಗಂಭೀರ ಆರೋಪ!
ಇತ್ತ ಪ್ರಭ್‌ಸಿಮ್ರನ್ ಸಿಂಗ್ ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ಐದು ಪಂದ್ಯಗಳನ್ನು ಆಡಿದ್ದು, 166 ರನ್ ಗಳಿಸಿದ್ದರು. ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡಕ್ಕೆ ಮರಳಿದ್ದರೂ, ಅವರಿಗೆ ಪದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ. 2023ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ಪ್ರಭ್‌ಸಿಮ್ರನ್ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪದಾರ್ಪಣೆ ಮಾಡಿಲ್ಲ.
ʻಮಗ ಡಾಕ್ಟರ್ ಆಗಬೇಕೆಂದು ಅಪ್ಪ ಕನಸು ಕಂಡಿದ್ದರುʼ: ಜಸ್‌ಪ್ರೀತ್ ಬುಮ್ರಾ ಸ್ಥಾನಕ್ಕೆ ಆಯ್ಕೆಯಾದ ಆಕಿಬ್ ನಬಿ ಯಾರು?
ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪ್ರಕಟಿಸಲಾದ ಉತ್ತರ ವಲಯ ತಂಡದಲ್ಲಿ ಭಾರತದ ವೇಗಿ ಅರ್ಷದೀಪ್ ಸಿಂಗ್ ಹಾಗೂ ಅನ್ಶುಲ್ ಕಾಂಬೋಜ್ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡದ ಸದಸ್ಯರಾಗಿದ್ದ ಅರ್ಷದೀಪ್ ಸಿಂಗ್‌ಗೆ ಅಲ್ಲಿಯೂ ಟೆಸ್ಟ್ ಪದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ. ಆದರೆ ಅವರು ಭಾರತ ಟಿ20 ತಂಡದ ಖಾಯಂ ಸದಸ್ಯರಾಗಿದ್ದಾರೆ. ಇತ್ತ ಅನ್ಶುಲ್ ಕಾಂಬೋಜ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಒಂದು ಪಂದ್ಯ ಆಡಿದ್ದರು. ಇತ್ತೀಚೆಗಷ್ಟೇ ಅವರು ಭಾರತ 'ಎ' ತಂಡದೊಂದಿಗೆ ಶ್ರೀಲಂಕಾ ಪ್ರವಾಸದಲ್ಲೂ ಭಾಗವಹಿಸಿದ್ದರು.
ಉತ್ತರ ವಲಯ ತಂಡಕ್ಕೆ ವಾಧವನ್ ನಾಯಕ
ಜಮ್ಮು ಮತ್ತು ಕಾಶ್ಮೀರದ ಕನ್ಹಯ್ಯ ವಾಧವನ್ ಅವರನ್ನು ದುಲೀಪ್ ಟ್ರೋಫಿಗೆ ಉತ್ತರ ವಲಯ ತಂಡದ ನಾಯಕರಾಗಿ ನೇಮಕ ಮಾಡಲಾಗಿದೆ. ಭಾರತ 'ಎ' ತಂಡದ ಖಾಯಂ ಸದಸ್ಯರಾಗಿರುವ ಆಯುಷ್ ಬದೋನಿ ಉಪನಾಯಕರಾಗಿ ತಂಡವನ್ನು ಬೆಂಬಲಿಸಲಿದ್ದಾರೆ. ಬದೋನಿ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿಯೂ ಸ್ಥಾನ ಪಡೆದಿದ್ದರು.
ಎಂಎಸ್ ಧೋನಿ ಅಲ್ಲವೇ ಅಲ್ಲ; ಭಾರತೀಯ ಕ್ರಿಕೆಟ್ ಸ್ಮಾರ್ಟೆಸ್ಟ್ ಮೈಂಡ್ ಯಾರೆಂದು ಹೆಸರಿಸಿದ ಮೊಯೀನ್ ಅಲಿ!
ಜಮ್ಮು ಮತ್ತು ಕಾಶ್ಮೀರ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದ ಅನುಭವಿ ಆಟಗಾರ ಪರಾಸ್ ಡೋಗ್ರಾಗೆ ಈ ಬಾರಿ ಅವಕಾಶ ನೀಡಲಾಗಿಲ್ಲ. ದುಲೀಪ್ ಟ್ರೋಫಿಯನ್ನು ಯುವ ಆಟಗಾರರು ತಮ್ಮ ಪ್ರತಿಭೆ ಪ್ರದರ್ಶಿಸಿ ರಾಷ್ಟ್ರೀಯ ತಂಡದ ಆಯ್ಕೆಗೆ ಹತ್ತಿರವಾಗಲು ವೇದಿಕೆಯಾಗಿ ಪರಿಗಣಿಸಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 41 ವರ್ಷದ ಪರಾಸ್ ಡೋಗ್ರಾ 153 ಪ್ರಥಮ ದರ್ಜೆ ಪಂದ್ಯಗಳಲ್ಲಿ 10,603 ರನ್ ಗಳಿಸಿರುವ ಅನುಭವಿ ಬ್ಯಾಟರ್ ಆಗಿದ್ದಾರೆ. ಉತ್ತರ ವಲಯ ತಂಡವು ಆಗಸ್ಟ್ 23ರಿಂದ 26ರವರೆಗೆ ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಪಶ್ಚಿಮ ವಲಯ ತಂಡವನ್ನು ಎದುರಿಸಲಿದೆ.
ಉತ್ತರ ವಲಯ: ಕನ್ಹಯ್ಯ ವಾಧವನ್ (ನಾಯಕ), ಆಯುಷ್ ಬದೋನಿ (ಉಪನಾಯಕ), ಸನತ್ ಸಂಗ್ವಾನ್, ಕಮ್ರಾನ್ ಇಕ್ಬಾಲ್ಯ, ಯಶ್ ಧುಲ್, ಆಯುಷ್ ದೋಸೇಜಾ, ಅಬ್ದುಲ್ ಸಮದ್, ನಿಶಾಂತ್ ಸಿಂಧು, ಅರ್ಜುನ್ ಶರ್ಮಾ, ಅಬಿದ್ ಮುಷ್ಟಾಕ್, ಅರ್ಶ್‌ದೀಪ್ ಸಿಂಗ್, ಸುನೀಲ್ ಕುಮಾರ್, ಅನ್ಶುಲ್ ಕಾಂಬೋಜ್, ಯುದ್ಧವೀರ್ ಸಿಂಗ್, ನಿಖಿಲ್ ಕಶ್ಯಪ್