Firozabad Horror: ತುಂಬು ಗರ್ಭಿಣಿಯ ಹೊಟ್ಟೆಗೆ ಒದ್ದ ಪೊಲೀಸಪ್ಪ; ಗಂಡು ಮಗುವಿಗೆ ಜನ್ಮ ನೀಡಿ ಅಸುನೀಗಿದ ಮಹಿಳೆ
ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಕಳವು ಪ್ರಕರಣದಲ್ಲಿ ಪತಿಯನ್ನು ಬಂಧಿಸಲು ಮನೆಗೆ ಬಂದಿದ್ದ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 28 ವರ್ಷದ ಗರ್ಭಿಣಿ ಅಂಜಲಿ ಅವರ ಹೊಟ್ಟೆಗೆ ಪೊಲೀಸ್ ಸಿಬ್ಬಂದಿಯೋರ್ವ ಒದ್ದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದು, ಬಳಿಕ ಅವರು ಗಂಡು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳು ಸೇರಿ ಆರು ಪೊಲೀಸ್ ಸಿಬ್ಬಂದಿಯನ್ನು ನಿರ್ಲಕ್ಷ್ಯದ ಆರೋಪದಡಿ ಅಮಾನತುಗೊಳಿಸಲಾಗಿದೆ.
ಮೃತ ಮಹಿಳೆ ಅಂಜಲಿ (ಸಂಗ್ರಹ ಚಿತ್ರ) -
ಲಖನೌ, ಸೆ. 15: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಕಳವು ಪ್ರಕರಣಕ್ಕೆ (Theft Case) ಸಂಬಂಧಿಸಿದಂತೆ ಪತಿಯನ್ನು ಬಂಧಿಸಲು ಮನೆಗೆ ಬಂದಿದ್ದ ಪೊಲೀಸ್ ಸಿಬ್ಬಂದಿ ಗರ್ಭಿಣಿಯ ಹೊಟ್ಟೆಗೆ ಒದ್ದಿದ್ದಾರೆ ಎಂಬ ಆರೋಪ (Firozabad Horror) ಕೇಳಿ ಬಂದಿದ್ದು, 28 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳು ಸೇರಿ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಶಿಕೋಹಾಬಾದ್ ವ್ಯಾಪ್ತಿಯ ಲಭೌವಾ ಗ್ರಾಮದಲ್ಲಿ ಭಾನುವಾರ (ಸೆಪ್ಟೆಂಬರ್ 13) ರಾತ್ರಿ ಸುಮಾರು 11.45ಕ್ಕೆ ಸಬ್‌ಇನ್‌ಸ್ಪೆಕ್ಟರ್ ಧರ್ಮಪಾಲ್ ಸಿಂಗ್ ನೇತೃತ್ವದ ಪೊಲೀಸ್ ತಂಡ ಗರವ್ ಅವರ ಮನೆಗೆ ತೆರಳಿತ್ತು. ಕಳ್ಳತನ ಪ್ರಕರಣದಲ್ಲಿ ಗರವ್ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಬಂದಿದ್ದರು ಎಂದು ತಿಳಿದುಬಂದಿದೆ.
ಕುಟುಂಬದ ಆರೋಪದ ಪ್ರಕಾರ, ಪತಿಯನ್ನು ಕರೆದೊಯ್ಯದಂತೆ ಗರವ್ ಅವರ ಪತ್ನಿ ಅಂಜಲಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದರು. ಈ ವೇಳೆ ಸಬ್‌ಇನ್‌ಸ್ಪೆಕ್ಟರ್ ಧರ್ಮಪಾಲ್ ಸಿಂಗ್ ಅಂಜಲಿ ಅವರ ಹೊಟ್ಟೆಗೆ ಒದ್ದಿದ್ದು, ಅವರು ಕೆಳಗೆ ಬಿದ್ದಿದ್ದಾರೆ. ಬಳಿಕ ಪೊಲೀಸರು 32 ವರ್ಷದ ಗರವ್ ಅವರನ್ನು ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಘಟನೆ ನಂತರ ಅಂಜಲಿ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದಿದ್ದು, ಶಿಕೋಹಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಯಿತು. ಸೋಮವಾರ ಬೆಳಗ್ಗೆ ಅವರು ಗಂಡು ಮಗುವಿಗೆ ಜನ್ಮ ನೀಡಿದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಹೆರಿಗೆಯ ಬಳಿಕ ಅಂಜಲಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಫಿರೋಜಾಬಾದ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ವೈದ್ಯರು ಅಂಜಲಿ ಮೃತಪಟ್ಟಿರುವುದಾಗಿ ಘೋಷಿಸಿದರು.
Gudibande News: ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಆಂದೋಲನ: ತಹಶೀಲ್ದಾರ್ ಸಿಗ್ಬತ್ ಉಲ್ಲಾಹಾಡಹಗಲೇ ವ್ಯಕ್ತಿಯ ಕತ್ತು ಕೊಯ್ದು ಕೊಲೆ: ಬಾಗೇಪಲ್ಲಿಯಲ್ಲಿ ಬೆಚ್ಚಿಬೀಳಿಸಿದ ಘಟನೆ
ನವಜಾತ ಶಿಶುವಿನ ಸ್ಥಿತಿಯೂ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಜಲಿ ಸಾವಿನ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಪೊಲೀಸರ ಕ್ರಮದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಕುಟುಂಬದವರು, ಪತ್ನಿಯ ಸಾವಿನ ಮಾಹಿತಿ ಪೊಲೀಸರಿಗೆ ತಿಳಿದ ಬಳಿಕ ಗರವ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಘಟನೆ ಕುರಿತು ಫಿರೋಜಾಬಾದ್ ನಗರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿ ಶಂಕರ್ ಪ್ರಸಾದ್ ಮಾಹಿತಿ ನೀಡಿದ್ದು, ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಲಾಂಘೆ ತಕ್ಷಣದಿಂದ ಜಾರಿಗೆ ಬರುವಂತೆ ಆರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಸಬ್‌ಇನ್‌ಸ್ಪೆಕ್ಟರ್‌ಗಳಾದ ಧರ್ಮಪಾಲ್ ಸಿಂಗ್ ಮತ್ತು ಸತ್ಯಪಾಲ್ ಸಿಂಗ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಮೋಹನ್ ಸಿಂಗ್ ಮತ್ತು ಅರವಿಂದ್ ಕುಮಾರ್ ಹಾಗೂ ಕಾನ್‌ಸ್ಟೆಬಲ್‌ಗಳಾದ ಭವತೋಷ್ ಕುಮಾರ್ ಮತ್ತು ಕುಲದೀಪ್ ಕುಮಾರ್ ಅವರನ್ನು ನಿರ್ಲಕ್ಷ್ಯದ ಆರೋಪದಡಿ ಅಮಾನತುಗೊಳಿಸಲಾಗಿದೆ.
ಅಂಜಲಿ ಅವರ ಮರಣೋತ್ತರ ಪರೀಕ್ಷೆಯನ್ನು ಸೋಮವಾರ ತಡರಾತ್ರಿ ನಡೆಸಲಾಗಿದ್ದು, ಅದೇ ರಾತ್ರಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಘಟನೆ ತಿಳಿದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ರಾಮ್‌ಜಿಲಾಲ್ ಸುಮನ್ ಮಂಗಳವಾರ ಫಿರೋಜಾಬಾದ್‌ಗೆ ತೆರಳಿ ಮೃತೆಯ ಕುಟುಂಬವನ್ನು ಭೇಟಿಯಾದರು. ಬಳಿಕ ಆಗ್ರಾ ವಲಯದ ಎಡಿಜಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಂತರ ಶಿಕೋಹಾಬಾದ್ ಪೊಲೀಸ್ ಠಾಣೆಗೆ ಪಕ್ಷದ ಕಾರ್ಯಕರ್ತರೊಂದಿಗೆ ತೆರಳಿದ ರಾಮ್‌ಜಿಲಾಲ್ ಸುಮನ್ ಧರಣಿ ನಡೆಸಿದರು. ಕಳವಿನ ಶಂಕೆಯಲ್ಲಿ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರಲ್ಲಿ ಅಂಜಲಿ ಅವರ ಪತಿ ಗರವ್ ಕೂಡ ಒಬ್ಬರಾಗಿದ್ದರು ಎಂದು ಅವರು ಆರೋಪಿಸಿದರು. ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕೂಡ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳನ್ನು ಎತ್ತಿದ್ದು, ಪ್ರಕರಣದ ನ್ಯಾಯಯುತ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.