ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆದ ಕಾಂಗ್ರೆಸ್ ಸರ್ಕಾರ: ಬಿ.ವೈ.ವಿಜಯೇಂದ್ರ

BY Vijayendra: ಹಾಲಿನ ಬೆಲೆಯನ್ನು ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರ ನೈಜ ಹೊರೆ ಗ್ರಾಹಕರಿಗೆ ಇನ್ನಷ್ಟು ಹೆಚ್ಚಾಗಲಿದೆ. ಮೊಸರಿನ ದರವನ್ನೂ ಏರಿಕೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಬಸ್ ಪ್ರಯಾಣ ದರ ಹೆಚ್ಚಳಕ್ಕೂ ಸರ್ಕಾರ ಮುಂದಾಗಿದೆ. ಬರಗಾಲದ ಸಂಕಷ್ಟದಲ್ಲಿರುವ ಜನರ ಮೇಲೆ ಇಂತಹ ಹೊರೆ ಹಾಕುವ ಅಗತ್ಯವೇನಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆದ ರಾಜ್ಯ ಸರ್ಕಾರ: ಬಿವೈವಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (ಸಂಗ್ರಹ ಚಿತ್ರ) -

Profile
Siddalinga Swamy Oct 31, 2026 9:28 PM

ದಾವಣಗೆರೆ, ಅ.31: ರಾಜ್ಯದ ಜನತೆಗೆ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಉಡುಗೊರೆಯಾಗಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಲಿನ ಬೆಲೆಯನ್ನು ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರ ನೈಜ ಹೊರೆ ಗ್ರಾಹಕರಿಗೆ ಇನ್ನಷ್ಟು ಹೆಚ್ಚಾಗಲಿದೆ. ಮೊಸರಿನ ದರವನ್ನೂ ಏರಿಕೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಬಸ್ ಪ್ರಯಾಣ ದರ ಹೆಚ್ಚಳಕ್ಕೂ ಸರ್ಕಾರ ಮುಂದಾಗಿದೆ. ಬರಗಾಲದ ಸಂಕಷ್ಟದಲ್ಲಿರುವ ಜನರ ಮೇಲೆ ಇಂತಹ ಹೊರೆ ಹಾಕುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಹಾಲಿನ ದರ ಹೆಚ್ಚಳದಿಂದ ರೈತರಿಗೆ ಅನುಕೂಲವಾಗುತ್ತದೆ ಎಂಬುದನ್ನು ಒಪ್ಪುತ್ತೇವೆ. ಆದರೆ ರೈತರಿಗೆ ಅನುಕೂಲ ಕಲ್ಪಿಸುವ ಹೆಸರಿನಲ್ಲಿ ಗ್ರಾಹಕರ ಮೇಲೆ ಹೊರೆ ಹಾಕುವುದು ಸರಿಯಲ್ಲ. ಹಾಲಿನ ಮೇಲಿನ ಸಹಾಯಧನವನ್ನು ಹೆಚ್ಚಿಸುವ ಮೂಲಕ ಸರ್ಕಾರವೇ ಹೆಚ್ಚುವರಿ ಹೊರೆ ಭರಿಸಬೇಕಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಎರಡು ಬಾರಿ ತಲಾ ಎರಡು ಹಾಗೂ ನಾಲ್ಕು ರೂಪಾಯಿ ಸಹಾಯಧನ ನೀಡಲಾಗಿತ್ತು. ದೇಶದಲ್ಲೇ ಮಾದರಿಯಾಗಿದ್ದ ಆ ಕ್ರಮವನ್ನು ಈಗಿನ ಸರ್ಕಾರ ಏಕೆ ಮುಂದುವರಿಸುತ್ತಿಲ್ಲ? ಜನಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರವೇ ಹೊರೆ ಹೊರಬೇಕು ಎಂದು ಒತ್ತಾಯಿಸಿದರು.

ಬೆಲೆ ಏರಿಕೆಯ ಹೊರೆ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪೆಟ್ರೋಲ್, ಮದ್ಯ, ಸ್ಟಾಂಪ್ ಡ್ಯೂಟಿ, ಹಾಲು ಸೇರಿದಂತೆ ಒಂದರ ಹಿಂದೆ ಒಂದರಂತೆ ಬೆಲೆ ಏರಿಕೆ ಮಾಡಲಾಗುತ್ತಿದೆ. ಆಸ್ಪತ್ರೆಗಳಿಗೆ ಹೋದರೂ ಜನರಿಗೆ ಹೊರೆ. ಬೈಕ್ ಟ್ಯಾಕ್ಸಿ, ಪಾರ್ಕಿಂಗ್ ಎಲ್ಲದರಲ್ಲೂ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಳಿ ಒಂದನ್ನು ಬಿಟ್ಟು ಉಳಿದೆಲ್ಲದರ ಮೇಲೂ ಹೊರೆ ಹಾಕುವ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.

ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಹಾಗೂ ಗ್ರಾಹಕರ ಮೇಲಿನ ಹೊರೆ ತಪ್ಪಿಸಿ ಸರ್ಕಾರವೇ ಹೆಚ್ಚುವರಿ ವೆಚ್ಚ ಭರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ವಾಲ್ಮೀಕಿ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಕಪಟ ನಾಟಕ

ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಸಂವಿಧಾನದ ಒಂಬತ್ತನೇ ಶೆಡ್ಯೂಲ್‍ಗೆ ಸೇರಿಸದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ನಾಯಕ ಉಗ್ರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿ.ವೈ. ವಿಜಯೇಂದ್ರ, ಬಿಜೆಪಿ ತಪ್ಪು ಮಾಡಿದೆ ಎಂದು ಯಾರು ಹೇಳಿದ್ದಾರೆ? ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಬೇಕಿತ್ತು. ನ್ಯಾಯಾಲಯದ ಮುಂದೆ ಸರಿಯಾಗಿ ಹಾಜರಾಗದೆ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜವಾಬ್ದಾರಿ ಹೊರಿಸುವುದು ಸರಿಯಲ್ಲ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರು ಕಪಟ ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲ

ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ಹಾಸ್ಯಾಸ್ಪದವಾಗಿದೆ. ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ ಮುಖ್ಯಮಂತ್ರಿಗಳು ರೈತರಿಗೆ ಸಿಹಿಸುದ್ದಿ ನೀಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಕೊನೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ಹೇಳಿ ವಾಪಸ್ಸಾಗಿದ್ದಾರೆ. ಇಷ್ಟೊಂದು ವೇಗವಾಗಿ ದೆಹಲಿಗೆ ತೆರಳಿದವರು ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಕೇಂದ್ರದತ್ತ ಬೆರಳು ತೋರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಹರಿಯಾಣದಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.

ನಾಲ್ಕು ಎಂಎಲ್‍ಸಿ ಸ್ಥಾನಗಳ ಗೆಲುವು ಕಾಂಗ್ರೆಸ್‍ಗೆ ತಕ್ಕ ಉತ್ತರ

ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಎನ್‍ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಜನರು ನೀಡಿರುವ ತಕ್ಕ ಉತ್ತರವಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಬೆಳಗಾವಿಯಲ್ಲಿ ಸಿಹಿಸುದ್ದಿ ನೀಡುತ್ತೇವೆ ಎಂದು ಹೇಳುವ ಕಾಂಗ್ರೆಸ್ ನಾಯಕರು ರಾಜ್ಯದ ಜನರ ಸಮಸ್ಯೆಗಳಿಗೆ ಯಾವ ಪರಿಹಾರ ನೀಡಿದ್ದಾರೆ? ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾ ಆಡಳಿತದ ಮೂಲಭೂತ ಜವಾಬ್ದಾರಿಗಳನ್ನು ಮರೆತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯಲ್ಲಿನ ಆಂತರಿಕ ಸಮಸ್ಯೆಗಳು ಶೀಘ್ರದಲ್ಲೇ ಪರಿಹಾರ

ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಮಸ್ಯೆಗಳು ಎದುರಾದಷ್ಟೂ ನನಗೆ ಇನ್ನಷ್ಟು ಉತ್ಸಾಹ ಬರುತ್ತದೆ. ಸವಾಲುಗಳನ್ನು ಎದುರಿಸಿಯೇ ನಾವು ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ಪಕ್ಷದೊಳಗಿನ ಗೊಂದಲಗಳು ಶೀಘ್ರದಲ್ಲೇ ಬಗೆಹರಿಯಲಿವೆ. ದಾವಣಗೆರೆಯಲ್ಲಿನ ಸಮಸ್ಯೆಯೂ ಸರಿಯಾಗಲಿದೆ. ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಶಕ್ತಿಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದರು.

ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನ

ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವ ವಿಚಾರವಾಗಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಕಂಡು ರಾಹುಲ್ ಗಾಂಧಿ ಹತಾಶರಾಗಿದ್ದಾರೆ. ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸಿ, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ನಡೆಸುತ್ತಿದೆ. ಕಮ್ಯುನಿಸ್ಟ್ ಸಂಘಟನೆಗಳ ಸಹಕಾರದೊಂದಿಗೆ ದೇಶದಲ್ಲಿ ಗೊಂದಲ ಮತ್ತು ಅಸ್ಥಿರತೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.‌

ಬೊಕ್ಕಸ ಭರ್ತಿಗೆ ಇಡೀ KMF ಅನ್ನೇ ಗುತ್ತಿಗೆ ಪಡೆದ ಕಾಂಗ್ರೆಸ್ ಸರ್ಕಾರ: ಪ್ರಲ್ಹಾದ್‌ ಜೋಶಿ ಆಕ್ರೋಶ

ಇದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ದೇಶಾದ್ಯಂತ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ' ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿಯೂ ಈ ಅಭಿಯಾನದಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಚಿತ್ರದುರ್ಗ ವಿಭಾಗದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದ್ದು, ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಪಾದಯಾತ್ರೆ, ಸಾರ್ವಜನಿಕ ಸಂವಾದ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಕೇಂದ್ರದ ಎನ್‍ಡಿಎ ಸರ್ಕಾರದ ಸಾಧನೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.