ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು 10 ವರ್ಷಗಳ ಬಳಿಕ ಅಗ್ರ ಸ್ಥಾನಕ್ಕೇರಿದ ದಕ್ಷಿಣ ಆಫ್ರಿಕಾ!
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 176 ರನ್ಗಳ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು. ಇದರೊಂದಿಗೆ 10 ವರ್ಷಗಳ ಬಳಿಕ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದೆ. ಸೈಮನ್ ಹಾರ್ಮರ್ ಆರು ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆಸ್ಟ್ರೇಲಿಯಾ ಎದುರು ದಕ್ಷಿಣ ಆಫ್ರಿಕಾ ತಂಡಕ್ಕೆ ಭರ್ಜರಿ ಜಯ. -
ಕೇಪ್ ಟೌನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಒಂದು ದಶಕಕ್ಕೂ ಹೆಚ್ಚು ಕಾಲದ ಬಳಿಕ ಐಸಿಸಿ ಟೆಸ್ಟ್ ತಂಡಗಳ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಸರಣಿಯ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲಿ (AUS vs SA) ಆಸ್ಟ್ರೇಲಿಯಾ ವಿರುದ್ಧ 176 ರನ್ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಹರಿಣಗಳ ಪಡೆ ಈ ಸಾಧನೆ ಮಾಡಿದೆ. ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿರುವ ದಕ್ಷಿಣ ಆಫ್ರಿಕಾ, ಕೊನೆಯ ಬಾರಿ 2016ರ ಜನವರಿಯಲ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದಿತ್ತು.
ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ದಕ್ಷಿಣ ಆಫ್ರಿಕಾ ನಂತರದ ಎರಡು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿ ಅದ್ಭುತ ಕಮ್ಬ್ಯಾಕ್ ಮಾಡಿತು. ತಂಡದ ಎಲ್ಲಾ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಿದ್ದು, ಈ ಗೆಲುವು ಸಾಮೂಹಿಕ ಪ್ರಯತ್ನದ ಫಲವಾಗಿದೆ. ಇದರೊಂದಿಗೆ ಪ್ರಸ್ತುತ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಅಂಕಪಟ್ಟಿಯಲ್ಲೂ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನಕ್ಕೇರಿದೆ.
IND vs NZ: ಏಕದಿನ ಸರಣಿಯ ಭಾರತ ತಂಡದಲ್ಲಿ ಪ್ರಸಿಧ್ ಕೃಷ್ಣ ಸ್ಥಾನಕ್ಕೆ ಆಕಿಬ್ ನಬಿ ಆಯ್ಕೆ!
ಕೇಪ್ ಟೌನ್ ಟೆಸ್ಟ್ನ ಐದನೇ ದಿನ ನಡೆದಿದ್ದೇನು?
ಐದನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ಗೆಲುವಿಗೆ ಇನ್ನೂ 288 ರನ್ಗಳ ಅಗತ್ಯವಿತ್ತು. ಆದರೆ ದಕ್ಷಿಣ ಆಫ್ರಿಕಾದ ಶಿಸ್ತಿನ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ಬ್ಯಾಟರ್ಗಳು ತತ್ತರಿಸಿದರು. ವೇಗಿ ಕಗಿಸೊ ರಬಾಡ ಮತ್ತು ಸ್ಪಿನ್ನರ್ ಸೈಮನ್ ಹಾರ್ಮರ್ ಒಟ್ಟಾಗಿ ಒಂಬತ್ತು ವಿಕೆಟ್ ಹಂಚಿಕೊಳ್ಳುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ಕೇವಲ 111 ರನ್ಗಳಿಗೆ ಆಲೌಟ್ ಮಾಡಿದರು.
ಆರಂಭದಲ್ಲೇ ಆಕ್ರಮಣಕಾರಿ ಬೌಲಿಂಗ್ ನಡೆಸಿದ ರಬಾಡ ಮೊದಲ ಓವರ್ನಲ್ಲೇ ಮ್ಯಾಥ್ಯೂ ರೆನ್ಶಾ ಮತ್ತು ಮಾರ್ನಸ್ ಲಾಬುಶೇನ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಇಬ್ಬರೂ ಯಾವುದೇ ಮಹತ್ವದ ರನ್ ಗಳಿಸದೆ ಔಟಾದ ಪರಿಣಾಮ ಆಸ್ಟ್ರೇಲಿಯಾ 5 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಸ್ವಲ್ಪ ಸಮಯದ ವಿರಾಮದ ಬಳಿಕ ಮತ್ತೆ ದಾಳಿಗಿಳಿದ ರಬಾಡ, ಟ್ರಾವಿಸ್ ಹೆಡ್ ಅವರನ್ನು 14 ರನ್ಗಳಿಗೆ ಔಟ್ ಮಾಡಿದರು. ಈ ವಿಕೆಟ್ನೊಂದಿಗೆ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 350 ವಿಕೆಟ್ಗಳ ಮೈಲುಗಲ್ಲು ತಲುಪಿದರು. ಅತಿ ಕಡಿಮೆ ಎಸೆತಗಳಲ್ಲಿ 350 ಟೆಸ್ಟ್ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿ, ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಅವರ ದಾಖಲೆಯನ್ನು ಮುರಿದರು.
IND vs NZ: ಐದನೇ ಟಿ20ಐಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸೂಚಿಸಿದ ಅಜಿಂಕ್ಯ ರಹಾನೆ!
ಸೈಮನ್ ಹಾರ್ಮರ್ ಆರು ವಿಕೆಟ್ ಸಾಧನೆ
ರಬಾಡ ಆರಂಭಿಕ ಆಘಾತ ನೀಡಿದ ಬಳಿಕ ಸ್ಪಿನ್ನರ್ ಸೈಮನ್ ಹಾರ್ಮರ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಆಸ್ಟ್ರೇಲಿಯಾದ ಉಳಿದ ಬ್ಯಾಟಿಂಗ್ ವಿಭಾಗವನ್ನು ತಮ್ಮ ಸ್ಪಿನ್ ಮೂಲಕ ಧ್ವಂಸಗೊಳಿಸಿದ ಅವರು ಆರು ವಿಕೆಟ್ಗಳನ್ನು ಕಬಳಿಸಿದರು. ಈ ಅದ್ಭುತ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಅಲೆಕ್ಸ್ ಕೇರಿ, ಕೂಪರ್ ಕೊನೊಲಿ, ಮಿಚೆಲ್ ಸ್ಟಾರ್ಕ್, ಕ್ಯಾಮೆರಾನ್ ಗ್ರೀನ್, ಪ್ಯಾಟ್ ಕಮಿನ್ಸ್ ಮತ್ತು ಜಾಶ್ ಹೇಝಲ್ವುಡ್ ಅವರು ಹಾರ್ಮರ್ ಬೌಲಿಂಗ್ಗೆ ಬಲಿಯಾದರು.
ಆಸ್ಟ್ರೇಲಿಯಾ ಪರ ಕ್ಯಾಮೆರಾನ್ ಗ್ರೀನ್ ಮಾತ್ರ ಕೊಂಚ ಪ್ರತಿರೋಧ ತೋರಿದರು. ಅವರು 100 ಎಸೆತಗಳಲ್ಲಿ 27 ರನ್ ಗಳಿಸಿದರು. ನಾಯಕ ಪ್ಯಾಟ್ ಕಮಿನ್ಸ್ ಮತ್ತು ನೇಥನ್ ಲಯನ್ ಕೆಳ ಕ್ರಮಾಂಕದಲ್ಲಿ ಹೋರಾಟ ನಡೆಸಿದರೂ ದಕ್ಷಿಣ ಆಫ್ರಿಕಾದ ಗೆಲುವನ್ನು ತಡೆಯಲು ಸಾಧ್ಯವಾಗಲಿಲ್ಲ.
ಹಾರ್ಮರ್ ಅವರ ಈ ಆರು ವಿಕೆಟ್ ಸಾಧನೆ ಮತ್ತೊಂದು ವಿಶೇಷ ದಾಖಲೆಯನ್ನೂ ನಿರ್ಮಿಸಿತು. 1952ರಲ್ಲಿ ಮೆಲ್ಬೋರ್ನ್ನಲ್ಲಿ ಹ್ಯೂ ಟೇಫೀಲ್ಡ್ 81 ರನ್ ನೀಡಿ 7 ವಿಕೆಟ್ ಪಡೆದ ಬಳಿಕ, ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ದಾಖಲಿಸಿದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಇದಾಗಿದೆ.
IND vs NZ: ವೈಭವ್ ಸೂರ್ಯವಂಶಿ ಬಗ್ಗೆ ದೊಡ್ಡ ಭವಿಷ್ಯ ನುಡಿದ ಸನತ್ ಜಯಸೂರ್ಯ!
ಐಸಿಸಿ ಟೆಸ್ಟ್ ತಂಡಗಳ ನೂತನ ಶ್ರೇಯಾಂಕ
ದಕ್ಷಿಣ ಆಫ್ರಿಕಾ 124 ರೇಟಿಂಗ್ ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನಕ್ಕೇರಿದ್ದು, ಆಸ್ಟ್ರೇಲಿಯಾ 122 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಭಾರತ 105 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
- ದಕ್ಷಿಣ ಆಫ್ರಿಕಾ: 124
- ಆಸ್ಟ್ರೇಲಿಯಾ: 122
- ನ್ಯೂಜಿಲೆಂಡ್: 106
- ಭಾರತ: 105
- ಇಂಗ್ಲೆಂಡ್: 102
- ಬಾಂಗ್ಲಾದೇಶ: 77
- ಶ್ರೀಲಂಕಾ 75
- ವೆಸ್ಟ್ ಇಂಡೀಸ್:74
- ಪಾಕಿಸ್ತಾನ: 71
- ಜಿಂಬಾಬ್ವೆ:17