ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಂಜಾಬ್‍ನಲ್ಲಿ ಇಬ್ಬರು ಪೊಲೀಸರ ಹತ್ಯೆಯ ಹಿಂದೆ ಪಾಕಿಸ್ತಾನದ ಐಎಸ್ಐ ಕೈವಾಡ

Punjab police murder case: ಪಂಜಾಬ್‌ನ ಗುರುದಾಸ್ಪುರದ ಭಾರತ ಮತ್ತು ಪಾಕಿಸ್ತಾನ ಗಡಿಯ ಬಳಿ ಇಬ್ಬರು ಪೊಲೀಸರ ಹತ್ಯೆಯನ್ನು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ನಡೆಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳು ಪಾಕಿಸ್ತಾನದ ಐಎಸ್‌ಐ ಆದೇಶದ ಮೇರೆಗೆ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ.

ಪೊಲೀಸರ ಕೊಲೆಯ ಹಿಂದೆ ಪಾಕ್‍ನ ಐಎಸ್ಐ ಕೈವಾಡ

ಮೃತ ಪೊಲೀಸ್‌ ಸಿಬ್ಬಂದಿ -

Priyanka P
Priyanka P Feb 25, 2026 7:17 PM

ಚಂಡೀಗಢ, ಫೆ. 25: ಪಂಜಾಬ್‌ನ ಗುರುದಾಸ್ಪುರದ ಭಾರತ ಮತ್ತು ಪಾಕಿಸ್ತಾನ ಗಡಿಯ (India-Pak border) ಬಳಿ ಇಬ್ಬರು ಪೊಲೀಸರ ಹತ್ಯೆಯನ್ನು (Punjab police murder case) ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನಡೆಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಗುರುದಾಸ್ಪುರದ ಅಧಿಯಾನ್ ಗ್ರಾಮದ ಡೊರಾಂಗ್ಲಾ ಪೊಲೀಸ್ ಹೊರಠಾಣೆಯಲ್ಲಿ ನಿಯೋಜನೆಗೊಂಡಿದ್ದ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಗುರ್ನಾಮ್ ಸಿಂಗ್ ಮತ್ತು ಗೃಹರಕ್ಷಕ ಅಶೋಕ್ ಕುಮಾರ್ ಅವರ ಮೃತದೇಹಗಳು ಭಾನುವಾರ (ಫೆಬ್ರವರಿ 22) ಚೆಕ್‌ಪೋಸ್ಟ್ ಒಳಗೆ ಪತ್ತೆಯಾಗಿತ್ತು.

ಆರೋಪಿಗಳು ಪಾಕಿಸ್ತಾನದ ಐಎಸ್‌ಐ ಆದೇಶದ ಮೇರೆಗೆ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಗ್ರಾಮದ ನಿವಾಸಿಗಳಾಗಿದ್ದರಿಂದ, ಅವರು ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಅವರು ಹಣಕ್ಕಾಗಿ ಈ ಕೃತ್ಯ ಎಸಗಿದ್ದು, ಐಎಸ್‌ಐ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸಿದ್ದಾರೆ ಎಂದು ಡಿಐಜಿ (ಗಡಿ ವ್ಯಾಪ್ತಿ) ಸಂದೀಪ್ ಗೋಯಲ್ ಗುರುದಾಸ್ಪುರದಲ್ಲಿ ತಿಳಿಸಿದರು.

26/11 ಮುಂಬೈ ಮಾದರಿಯ ಮತ್ತೊಂದು ದಾಳಿ ನಡೆಸುತ್ತೇವೆ; ಪಹಲ್ಗಾಮ್‌ ಅಟ್ಯಾಕ್‌ ಮಾಸ್ಟರ್‌ಮೈಂಡ್‌ ಕಸೂರಿಯಿಂದ ಎಚ್ಚರಿಕೆ

20,000 ರುಪಾಯಿಗಾಗಿ ಈ ಕೊಲೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇಬ್ಬರು ಪೊಲೀಸರ ಹತ್ಯೆಯಲ್ಲಿ ಭಾಗಿಯಾದ ಮೂವರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬನನ್ನು ಎನ್‌ಕೌಂಟರ್‌ನಲ್ಲಿ ಕೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೂರನೇ ಆರೋಪಿ ಪರಾರಿಯಾಗಿದ್ದು, ಅವನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಪಂಜಾಬ್ ಪೊಲೀಸರು ಮೂವರು ಆರೋಪಿಗಳನ್ನು ಅಧಿಯಾನ್ ಗ್ರಾಮದ ನಿವಾಸಿಗಳಾದ ರಂಜಿತ್ ಸಿಂಗ್ (19), ಇಂದರ್ಜಿತ್ ಸಿಂಗ್ (21) ಮತ್ತು ಅಲಿನಂಗಲ್ ಗ್ರಾಮದ ನಿವಾಸಿ ದಿಲಾವರ್ ಸಿಂಗ್ (19) ಎಂದು ಗುರುತಿಸಿದ್ದಾರೆ.

ದೋರಂಗ್ಲಾ ಎಸ್‌ಎಚ್‌ಒ ಇಬ್ಬರು ಪೊಲೀಸರು ತಮ್ಮ ಕರೆಗಳಿಗೆ ಉತ್ತರಿಸುತ್ತಿಲ್ಲ ಎಂದು ತಿಳಿಸಿದ ನಂತರ ಅಧಿಯಾನ್ ಗ್ರಾಮದ ಸರಪಂಚ ಕಮಲ್‌ಜೀತ್ ಸಿಂಗ್ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದಾಗ ಈ ಹತ್ಯೆ ಬೆಳಕಿಗೆ ಬಂದವು. ಚೆಕ್‌ಪೋಸ್ಟ್ ತಲುಪಿದ ಕಮಲ್‌ಜೀತ್ ಸಿಂಗ್ ಎಎಸ್‌ಐ ಮತ್ತು ಗೃಹರಕ್ಷಕ ದಳದ ಇಬ್ಬರು ಗುಂಡೇಟಿನಿಂದ ಮೃತಪಟ್ಟಿರುವುದನ್ನು ನೋಡಿದ್ದಾರೆ. ಎಎಸ್‌ಐ ಅವರ ಮೃತದೇಹ ಕುರ್ಚಿಯ ಮೇಲೆ ಕೈಗಳನ್ನು ಜೇಬಿನಲ್ಲಿಟ್ಟುಕೊಂಡು ಪತ್ತೆಯಾಗಿದ್ದರೆ, ಗೃಹರಕ್ಷಕ ದಳದ ಸಿಬ್ಬಂದಿ ಹಾಸಿಗೆಯ ಮೇಲೆ ಶವವಾಗಿ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರ ನೇಮಕಾತಿಗಾಗಿ ದೆಹಲಿ ಭೇಟಿ: ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಲಷ್ಕರ್ ಯೋಜನೆ ಹೇಗಿತ್ತು?

ಪಾಕಿಸ್ತಾನ ಮೂಲದ ಭಯೋತ್ಪಾದಕರು ಮಾದಕ ದ್ರವ್ಯಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಾಗಿಸುವ ಡ್ರೋನ್‌ಗಳನ್ನು ನುಗ್ಗಿಸಲು ಡೊರಾಂಗ್ಲಾ ವಲಯವನ್ನು ಆಗಾಗ ಗುರಿಯಾಗಿಸಿಕೊಳ್ಳುತ್ತಾರೆ. 2025ರ ಏಪ್ರಿಲ್‌ನಲ್ಲಿ ಗಡಿಯಲ್ಲಿ ಐಇಡಿ ಸ್ಫೋಟಗೊಂಡು ಬಿಎಸ್‌ಎಫ್ ಸೈನಿಕರೊಬ್ಬರು ಗಾಯಗೊಂಡಿದ್ದರು.

ಹತ್ಯೆಯ ಒಂದು ದಿನದ ನಂತರ, ಪಾಕಿಸ್ತಾನ ಮೂಲದ ದರೋಡೆಕೋರನೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಅಪರಿಚಿತ ಶೂಟರ್ ಒಬ್ಬ ಪೊಲೀಸರ ಮೇಲೆ ಪಾಯಿಂಟ್-ಬ್ಲಾಂಕ್ ರೇಂಜ್‌ನಿಂದ ಗುಂಡು ಹಾರಿಸುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ದರೋಡೆಕೋರ ಶಹಜಾದ್ ಭಟ್ಟಿ ಪೋಸ್ಟ್ ಮಾಡಿದ ಅದೇ ವಿಡಿಯೊವನ್ನು ತೆಹ್ರೀಕ್-ಇ-ತಾಲಿಬಾನ್ ಹಿಂದೂಸ್ತಾನ್ ಎಂದು ಕರೆದುಕೊಳ್ಳುವ ಸಂಘಟನೆಯು ಸಹ ಹಂಚಿಕೊಂಡಿದೆ. ಅಲ್ಲದೆ ಆ ಸಂಘಟನೆ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ.