ಮಣಿಪುರದಲ್ಲಿ ಗುಂಡಿನ ದಾಳಿ: ಮೂವರು ಚರ್ಚ್ ನಾಯಕರು ಸಾವು, ಹಲವರಿಗೆ ಗಾಯ
ಮಣಿಪುರದ ಕಾಂಗ್ಪೋಕ್ಪಿಯಲ್ಲಿ ಮೂವರು ಚರ್ಚ್ ನಾಯಕರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಚರ್ಚ್ ನಾಯಕರು ಲಮ್ಕಾದಲ್ಲಿ ನಡೆದ ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ ಸಮ್ಮೇಳನದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ದಾಳಿಯಲ್ಲಿ ಸುಮಾರು ಐದು ಮಂದಿ ಗಾಯಗೊಂಡಿದ್ದು, ಸ್ಥಳದಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಿದೆ.
ಸಂಗ್ರಹ ಚಿತ್ರ -
ಮಣಿಪುರ: ಚರ್ಚ್ ನಾಯಕರ (Church Leaders) ಮೇಲೆ ಗುಂಡಿನ ದಾಳಿ ನಡೆದ ಘಟನೆ ಮಣಿಪುರದ (Manipur) ಕಾಂಗ್ಪೋಕ್ಪಿಯಲ್ಲಿ ಬುಧವಾರ ನಡೆದಿದೆ. ಚುರಚಂದ್‌ಪುರ ಜಿಲ್ಲೆಯ ಲಮ್ಕಾದಲ್ಲಿ ಆಯೋಜಿಸಿದ್ದ ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ (Thadou Baptist Association) ಸಮ್ಮೇಳನದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಚರ್ಚ್ ನಾಯಕರ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳು ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಚರ್ಚ್ ನಾಯಕರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಘಟನೆಯಿಂದ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ರಾಷ್ಟ್ರೀಯ ಹೆದ್ದಾರಿ- 2 (National Highway-2) ಅನ್ನು ತಡೆ ಮಾಡಲಾಗಿತ್ತು.
ಲಮ್ಕಾದಲ್ಲಿ ನಡೆದ ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್ ಸಮ್ಮೇಳನದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಮಣಿಪುರ ಬ್ಯಾಪ್ಟಿಸ್ಟ್ ಕನ್ವೆನ್ಷನ್ ನ ಮಾಜಿ ಪ್ರಧಾನ ಕಾರ್ಯದರ್ಶಿ ರೆವರೆಂಡ್ ವಿ ಸಿಟ್ಲ್ ಹೌ ಸೇರಿದಂತೆ ರೆವರೆಂಡ್ ವಿ. ಕೈಗೌಲುನ್ ಮತ್ತು ಪಾದ್ರಿ ಪಾಗೊಲೆನ್ ಅವರ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಐದು ಮಂದಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ರೆವರೆಂಡ್ ಎಸ್.ಎಂ. ಹಾಪು, ರೆವರೆಂಡ್ ಹೆಕೈ ಸಿಮ್ಟೆ, ರೆವರೆಂಡ್ ಪಾವೊಥಾಂಗ್, ಚಾಲಕರಾದ ಲೆಲೆನ್, ಗೌಮಾಂಗ್ ಸೇರಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆಗಾಗಿ ಗುರುಗ್ರಾಮ ವೈದ್ಯರೊಂದಿಗೆ ನಡೆದಿತ್ತು 30 ಲಕ್ಷ ರೂ. ಗೆ ಒಪ್ಪಂದ
ಲಮ್ಕಾದಲ್ಲಿ ನಡೆದ ಟಿಬಿಎ ಸಮ್ಮೇಳನದಲ್ಲಿ ಭಾಗವಹಿಸಿದ್ದ ಚರ್ಚ್ ನಾಯಕರು ಎರಡು ವಾಹನಗಳಲ್ಲಿ ಚುರಾಚಂದ್‌ಪುರ ಜಿಲ್ಲೆಯಿಂದ ಕಾಂಗ್‌ಪೋಕ್ಪಿಗೆ ಮರಳಿ ಬರುತ್ತಿದ್ದರು.
ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಮಣಿಪುರವನ್ನು ನಾಗಾಲ್ಯಾಂಡ್ ಮತ್ತು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-2 ಅನ್ನು ತಡೆ ಗೊಳಿಸಲಾಯಿತು. ಕಾಂಗ್‌ಪೋಕ್ಪಿ ಮತ್ತು ಪಕ್ಕದ ಕುಕಿ-ಝೋ ಜನವಸತಿ ಪ್ರದೇಶಗಳಲ್ಲಿಯೂ ಉದ್ವಿಗ್ನತೆ ಹೆಚ್ಚಾಗಿದೆ.
ಚರ್ಚ್ ನಾಯಕರ ಹತ್ಯೆಗೆ ಥಡೌ ನಾಯಕ ಮತ್ತು ಮಣಿಪುರ ಬಿಜೆಪಿ ವಕ್ತಾರ ಮೈಕೆಲ್ ಲಮ್ಜಥಾಂಗ್ ಅವರು ಸಂತಾಪ ಸೂಚಿಸಿದ್ದು, ಥಡೌ ಸಮುದಾಯವು ಕುಕಿ ಗುಂಪಿನ ಭಾಗವಲ್ಲ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಸಮುದಾಯವು ಸಾಕಷ್ಟು ನಷ್ಟ ಅನುಭವಿಸಿದೆ ಎಂದು ಹೇಳಿದರು.
ಘಟನೆಯನ್ನು ಖಂಡಿಸಿರುವ ಚುರಾಚಂದ್‌ಪುರ ಜಿಲ್ಲೆಯ ಕುಕಿ ವಿದ್ಯಾರ್ಥಿ ಸಂಘಟನೆ (ಕೆಎಸ್‌ಒ) ಅನಿರ್ದಿಷ್ಟಾವಧಿ ಬಂದ್ ಅನ್ನು ಘೋಷಿಸಿದ್ದು, ಇದೊಂದು ಕ್ರೂರ ಹತ್ಯೆ. ಸಶಸ್ತ್ರ ಗುಂಪುಗಳ ಚಟುವಟಿಕೆಗಳನ್ನು ತಡೆಯುವಲ್ಲಿ ರಾಜ್ಯ ಕಾನೂನು ಜಾರಿ ಸಂಸ್ಥೆಗಳು ವಿಫಲವಾಗಿವೆ ಎಂದು ಹೇಳಿದ್ದು, ಬಂದ್ ಸಮಯದಲ್ಲಿ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದ್ದು, ಸಾರ್ವಜನಿಕರು ಮತ್ತು ಸಂಸ್ಥೆಗಳು ಸಹಕರಿಸುವಂತೆ ಮನವಿ ಮಾಡಿದೆ.
CBSE 12th Result 2026: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ?
ಕುಕಿ ಬುಡಕಟ್ಟು ಜನಾಂಗದ ಸರ್ವೋಚ್ಚ ಸಂಸ್ಥೆಯಾದ ಕುಕಿ ಇನ್ಪಿ ಮಣಿಪುರ ಈ ದಾಳಿಯನ್ನು ಖಂಡಿಸಿದ್ದು, ನಿರಾಯುಧ ಚರ್ಚ್ ನಾಯಕರ ಹತ್ಯೆಯು ಶಾಂತಿ ಮತ್ತು ಸಂವಾದ ಪ್ರಯತ್ನಗಳ ಮೇಲಿನ ನೇರ ದಾಳಿಯಾಗಿದೆ. ಇದಕ್ಕೆ ಕಾರಣವಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.