ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Lokayukta Raid: ನಿವೃತ್ತ ಮುಖ್ಯ ಶಿಕ್ಷಕರಿಂದ ಹಣ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸೂಪರಿಂಟೆಂಡೆಂಟ್

ಸವದತ್ತಿ ನಗರದ ನಿವೃತ್ತ ಮುಖ್ಯ ಶಿಕ್ಷಕ ವಿಶಾಲ ಬೆಟ್ಟದ ಅವರು ತಾಲೂಕಿನ ಸಿಂಗಾರಗೊಪ್ಪ ಶಾಲೆ ಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ತಮ್ಮ ಗಳಿಕೆ ರಜೆ ನಗದೀಕರಣ (ಲೀವ್ ಸರಂಡರ್) ಪ್ರಕ್ರಿಯೆಗಾಗಿ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಕಚೇರಿಯ ಸೂಪರಿಂಟೆಂಡೆಂಟ್ ವಿಠ್ಠಲ ರಾವೂಳ ಅವರು ₹5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

₹5 ಸಾವಿರ ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಅಧಿಕಾರಿ

-

Profile
Ashok Nayak Oct 28, 2026 9:55 PM

ಸವದತ್ತಿ: ನಿವೃತ್ತ ಮುಖ್ಯ ಶಿಕ್ಷಕರೊಬ್ಬರ ಗಳಿಕೆ ರಜೆ ನಗದೀಕರಣ ಪ್ರಕ್ರಿಯೆಗಾಗಿ ₹5 ಸಾವಿರ ಲಂಚ(Bribe)ಕ್ಕೆ ಬೇಡಿಕೆ ಇಟ್ಟು, ಹಣ ಸ್ವೀಕರಿಸುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸೂಪರಿಂಟೆಂಡೆಂಟ್ ವಿಠ್ಠಲ ರಾವೂಳ ಅವರನ್ನು ಲೋಕಾಯುಕ್ತ ಪೊಲೀಸ(Lokayukta Police)ರು ಬುಧವಾರ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಸವದತ್ತಿ ನಗರದ ನಿವೃತ್ತ ಮುಖ್ಯ ಶಿಕ್ಷಕ ವಿಶಾಲ ಬೆಟ್ಟದ ಅವರು ತಾಲೂಕಿನ ಸಿಂಗಾರಗೊಪ್ಪ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ತಮ್ಮ ಗಳಿಕೆ ರಜೆ ನಗದೀಕರಣ (ಲೀವ್ ಸರಂಡರ್) ಪ್ರಕ್ರಿಯೆಗಾಗಿ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಕಚೇರಿಯ ಸೂಪರಿಂಟೆಂಡೆಂಟ್ ವಿಠ್ಠಲ ರಾವೂಳ ಅವರು ₹5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Lokayukta Raid: ಲಂಚ ಸ್ವೀಕರಿಸುತ್ತಿದ್ದ ತುಮಕೂರು ವಿಶೇಷ ಉಪವಿಭಾಗಾಧಿಕಾರಿ ನ್ಯಾಯಾಲಯದ ಇಬ್ಬರು ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಈ ಕುರಿತು ನಿವೃತ್ತ ಮುಖ್ಯ ಶಿಕ್ಷಕರು ಮಂಗಳವಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ರೂಪಿಸಿದ ಲೋಕಾಯುಕ್ತ ಪೊಲೀಸರು, ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ದಾಳಿ ನಡೆಸಿದರು. ಈ ವೇಳೆ ಲಂಚದ ಹಣ ಸ್ವೀಕರಿಸುತ್ತಿದ್ದ ವಿಠ್ಠಲ ರಾವೂಳ ಅವರನ್ನು ರೆಡ್‌ ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ವೆಂಕಟೇಶ ಯಡಳ್ಳಿ, ಸಂಗಮೇಶ ಹೊಸಮನಿ, ಟಿ.ಎಸ್. ಪಾಟೀಲ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.