ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Today is First Responders Day: ಪ್ರಾಣವನ್ನೇ ಪಣಕ್ಕಿಟ್ಟು ಜೀವ ಕಾಯುವ ಧೀರರು

ಈ ಪ್ರಥಮ ಪ್ರತಿಕ್ರಿಯಾಶೀಲರ ಪಡೆ ಕೇವಲ ಒಬ್ಬಿಬ್ಬರಿಗೆ ಸೀಮಿತವಾಗಿಲ್ಲ. ಬೆಂಕಿಯ ಜ್ವಾಲೆಯ ನಡುವೆಯೂ ಕಟ್ಟಡ ಹೊಕ್ಕು ಜೀವ ರಕ್ಷಿಸುವ ಅಗ್ನಿಶಾಮಕ ಸಿಬ್ಬಂದಿ, ಆಸ್ಪತ್ರೆ ತಲುಪುವ ಮುನ್ನವೇ ಆಂಬ್ಯುಲೆನ್ಸ್‌ನಲ್ಲೇ ರೋಗಿಯ ಉಸಿರು ಕಾಯುವ ವೈದ್ಯಕೀಯ ತುರ್ತು ಸಿಬ್ಬಂದಿ ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು, ಹಾಗೂ ಹಿನ್ನೆಲೆಯಲ್ಲಿ ನಿಂತು 112 ಅಥವಾ 108 ನಂಬರ್ ಮೂಲಕ ಕರೆ ಸ್ವೀಕರಿಸಿ ಕ್ಷಣಾರ್ಧದಲ್ಲಿ ಸೂಕ್ತ ರಕ್ಷಣಾ ತಂಡವನ್ನು ರವಾನಿಸುವ ಕಂಟ್ರೋಲ್ ರೂಮ್ ನಿರ್ವಾಹಕರು ಈ ಪಡೆಯ ಬೆನ್ನೆಲುಬಾಗಿದ್ದಾರೆ.

ಪ್ರಾಣವನ್ನೇ ಪಣಕ್ಕಿಟ್ಟು ಜೀವ ಕಾಯುವ ಧೀರರು

-

Profile
Ashok Nayak Oct 28, 2026 10:16 PM

ವಿನುತಾ ಹೆಗಡೆ ಶಿರಸಿ

ಅಪಾಯದ ಮುನ್ಸೂಚನೆ ಸಿಕ್ಕ ತಕ್ಷಣ ಸಾಮಾನ್ಯ ಜನ ಸುರಕ್ಷಿತ ಜಾಗದತ್ತ ಓಡಿದರೆ, ತಮ್ಮ ಜೀವದ ಹಂಗು ತೊರೆದು ಆಪತ್ತಿನ ಅಗ್ನಿಗುಂಡಿಗೇ ಧುಮುಕುವ ಏಕೈಕ ರಕ್ಷಕ ಪಡೆಯೆಂದರೆ ಪ್ರಥಮ ಪ್ರತಿಕ್ರಿಯಾಶೀಲರು. ಉರಿಯುವ ಕಟ್ಟಡ, ಭೀಕರ ರಸ್ತೆ ಅಪಘಾತ, ಪ್ರವಾಹ-ಭೂಕುಸಿತದಂತಹ ಪ್ರಕೃತಿ ವಿಕೋಪ ಅಥವಾ ಕರೋನಾದಂತಹ ಜಾಗತಿಕ ಸಾಂಕ್ರಾಮಿಕ ರೋಗದ ತೀವ್ರ ಪರಿಸ್ಥಿತಿ ಏನೇ ಇರಲಿ, ಸಂಕಷ್ಟದಲ್ಲಿರುವವರ ಕರೆಯನ್ನು ಕೇಳಿ ಕ್ಷಣಾರ್ಧದಲ್ಲಿ ಸ್ಥಳಕ್ಕೆ ಧಾವಿಸುವ ಈ ಅನಾಮಧೇಯ ರಕ್ಷಕರ ತ್ಯಾಗ ಮತ್ತು ಸೇವೆಯನ್ನು ಸ್ಮರಿಸಲು ಪ್ರತಿ ವರ್ಷ ಅ.28ರಂದು ‘ರಾಷ್ಟ್ರೀಯ ಪ್ರಥಮ ಪ್ರತಿಕ್ರಿಯಾಶೀಲರ ದಿನ’(Today is First Responders Day) ಎಂದು ಆಚರಿಸಲಾಗುತ್ತದೆ.

ಈ ಪ್ರಥಮ ಪ್ರತಿಕ್ರಿಯಾಶೀಲರ ಪಡೆ ಕೇವಲ ಒಬ್ಬಿಬ್ಬರಿಗೆ ಸೀಮಿತವಾಗಿಲ್ಲ. ಬೆಂಕಿಯ ಜ್ವಾಲೆಯ ನಡುವೆಯೂ ಕಟ್ಟಡ ಹೊಕ್ಕು ಜೀವ ರಕ್ಷಿಸುವ ಅಗ್ನಿಶಾಮಕ ಸಿಬ್ಬಂದಿ, ಆಸ್ಪತ್ರೆ ತಲುಪುವ ಮುನ್ನವೇ ಆಂಬ್ಯುಲೆನ್ಸ್‌ನಲ್ಲೇ ರೋಗಿಯ ಉಸಿರು ಕಾಯುವ ವೈದ್ಯಕೀಯ ತುರ್ತು ಸಿಬ್ಬಂದಿ ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು, ಹಾಗೂ ಹಿನ್ನೆಲೆಯಲ್ಲಿ ನಿಂತು 112 ಅಥವಾ 108 ನಂಬರ್ ಮೂಲಕ ಕರೆ ಸ್ವೀಕರಿಸಿ ಕ್ಷಣಾರ್ಧದಲ್ಲಿ ಸೂಕ್ತ ರಕ್ಷಣಾ ತಂಡವನ್ನು ರವಾನಿಸುವ ಕಂಟ್ರೋಲ್ ರೂಮ್ ನಿರ್ವಾಹಕರು ಈ ಪಡೆಯ ಬೆನ್ನೆಲುಬಾಗಿದ್ದಾರೆ.

ಇದನ್ನೂ ಓದಿ: Sirsi-Haveri Road: ರಸ್ತೆ ದುರಸ್ತಿಗಾಗಿ ಬೀದಿಗಿಳಿದ ಸಾವಿರಾರು ಸಾರ್ವಜನಿಕರು; ಶಿರಸಿ-ಹಾವೇರಿ ಹೈವೆ ಬಂದ್‌: ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್‌ ಜಾಮ್‌

ಈ ವಿಶೇಷ ದಿನದ ಹಿನ್ನೆಲೆಯನ್ನು ನೋಡುವುದಾದರೆ, 2017ರಲ್ಲಿ ಭೀಕರ ಅವಘಡಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಪ್ರಾಣತ್ಯಾಗ ಮಾಡಿದ ಕಾರ್ಯಕರ್ತರ ಸ್ಮರಣಾರ್ಥ ಈ ಆಚರಣೆಗೆ ಗಂಭೀರ ಚಾಲನೆ ದೊರೆಯಿತು. ತದನಂತರ 2019ರಲ್ಲಿ ಅಮೆರಿಕದ ಸೆನೆಟ್‌ನಲ್ಲಿ ಅಧಿಕೃತ ಬೆಂಬಲ ಸಿಕ್ಕಿ, ಇಂದು ಇದು ಜಾಗತಿಕ ಮಟ್ಟದಲ್ಲೂ ಇಂತಹ ಸಿಬ್ಬಂದಿಯ ತ್ಯಾಗವನ್ನು ಗೌರವಿಸುವ ಪ್ರಮುಖ ದಿನವಾಗಿ ಮಾರ್ಪಟ್ಟಿದೆ.

ನಮಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಈ ರಿಯಲ್ ಹೀರೋಗಳು ಸಿನಿಮಾದ ಸೂಪರ್‌ಮ್ಯಾನ್ ಉಡುಪು ಧರಿಸುವುದಿಲ್ಲ. ಬದಲಿಗೆ ಖಾಕಿ, ಸಮವಸ ಹಾಗೂ ಸೈರನ್‌ಗಳ ಸಮ್ಮಿಲನದಲ್ಲಿ ನಮ್ಮ ನಡುವೆಯೇ ಓಡಾಡುತ್ತಾ ಪ್ರತಿಯೊಂದು ಸೆಕೆಂಡಿನಲ್ಲೂ ಜೀವ ರಕ್ಷಣೆಯ ಮಹಾಕಾವ್ಯ ಬರೆಯುತ್ತಾರೆ.

ತುರ್ತು ಸೇವಾ ಸಂಖ್ಯೆಗಳನ್ನ ದುರುಪಯೋಗಪಡಿಸಿಕೊಳ್ಳದಿರಿ ಈ ರಕ್ಷಕರ ಬಾಳು ಕಾಣುವಷ್ಟು ಸರಳವಾಗಿಲ್ಲ. ಪ್ರತಿದಿನ ಕಣ್ಣೆದುರು ನಡೆಯುವ ದೈಹಿಕ ದುರಂತಗಳು, ರಕ್ತಪಾತ ಮತ್ತು ಸಾವು-ನೋವುಗಳನ್ನು ಕಾಣುವ ಇವರು ‘ಪೋಸ್ಟ್-ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್’ ನಂತಹ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಒಳಗಾಗುತ್ತಾರೆ.

ಅನೇಕ ಸಂದರ್ಭಗಳಲ್ಲಿ ಸೂಕ್ತ ಕೌನ್ಸೆಲಿಂಗ್ ಮತ್ತು ಮಾನಸಿಕ ಬೆಂಬಲ ಸಿಗದೆ ಇವರು ಒಳಗೊಳಗೇ ನರಳುವುದೂ ಉಂಟು. ಇವರ ಈ ಅಪ್ರತಿಮ ಸೇವೆಗೆ ನಾವು ನೀಡಬಹುದಾದ ಅತ್ಯಂತ ದೊಡ್ಡ ಗೌರವವೆಂದರೆ, ರಸ್ತೆಯಲ್ಲಿ ಆಂಬ್ಯುಲೆನ್ಸ್ ಅಥವಾ ಅಗ್ನಿಶಾಮಕ ವಾಹನಗಳ ಸೈರನ್ ಕೇಳಿಸಿದ ತಕ್ಷಣ ತಕ್ಷಣವೇ ದಾರಿ ಮಾಡಿಕೊಡುವುದು ಹಾಗೂ ತುರ್ತು ಸೇವಾ ಸಂಖ್ಯೆಗಳನ್ನು ದುರುಪಯೋಗಪಡಿಸಿಕೊಳ್ಳದಿರುವುದು.