ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಗ ರಾಜ ರಘುವಂಶಿ ಈಗ ಕೇತನ್‌ ಅಗರ್ವಾಲ್‌: ಪ್ರವಾಸಿ ತಾಣದಲ್ಲಿ ಸಂಗಾತಿಯಿಂದಲೇ ಕೊಲೆಯಾದ ನತದೃಷ್ಟರು

Pune Man Murder Case: ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಲೋಹಗಢ ಕೋಟೆಯಲ್ಲಿ ಜೂ. 18ರಂದು ನಡೆದ ಯುವ ಉದ್ಯಮಿ 26 ವರ್ಷದ ಕೇತನ್‌ ವಿಶಾಲ್‌ ಅಗರ್ವಾಲ್‌ನ ಕೊಲೆ ಪ್ರಕರಣ ಸದ್ಯ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಕಳೆದ ವರ್ಷದ ರಾಜ ರಘುವಂಶಿ ಹತ್ಯೆಯನ್ನು ಇದು ನೆನಪಿಸಿದೆ.

ರಾಜ ರಘುವಂಶಿ ಹತ್ಯೆ ನೆನಪಿಸಿದ ಕೇತನ್‌ ಕೊಲೆ ಪ್ರಕರಣ

ಕೇತನ್‌ ಮತ್ತು ರಾಜ ರಘುವಂಶಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Jun 24, 2026 9:57 PM

ಮುಂಬೈ, ಜೂ. 24: ಅವನು ಶ್ರೀಮಂತ ಕುಟುಂಬದ ಕುಡಿ. ನೂರಾರು ಕೋಟಿ ರುಪಾಯಿ ಆಸ್ತಿಯ ಒಡೆಯ. ಆಕೆ ಸ್ವಂತ ಬೇಕರಿ ಹೊಂದಿರುವ ಯುವ ಉದ್ಯಮಿ. ಅವರಿಬ್ಬರ ನಿಶ್ಚಿತಾರ್ಥ ನೆರೆವೇರಿತ್ತು. ನವೆಂಬರ್‌ನಲ್ಲಿ ಮದುವೆಯೂ ನಿಗಧಿಯಾಗಿತ್ತು (Pune Man Murder Case). ಆದರೆ ಆಕೆ ತನ್ನ ಪ್ರಿಯಕರನ ಜತೆ ಸೇರಿ ಭಾವಿ ಪತ್ನಿಯನ್ನು ಕೊಂದೇ ಬಿಟ್ಟಿದ್ದಾಳೆ. ಕೋಟೆಯಿಂದ ತಳ್ಳಿ ಇಬ್ಬರೂ ಸೇರಿ ಅಮಾಯಕನ ಪ್ರಾಣ ತೆಗೆದಿದ್ದಾರೆ. ಈ ಪುಣೆ ಕೊಲೆ ಪ್ರಕರಣ ಸದ್ಯ ದೇಶದ ಗಮನ ಸೆಳೆದಿದೆ. ಕಳೆದ ವರ್ಷ ನಡೆದ ಮೇಘಾಲಯ ಹನಿಮೂನ್‌ ಹತ್ಯೆಯನ್ನು ನೆನಪಿಸುವ ಈ ಘಟನೆ ಆಧುನಿಕ ಸಂಬಂಧದ ಸಂಕೀರ್ಣತೆಯನ್ನು ಮತ್ತೊಮ್ಮೆ ಸಾರಿ ಹೇಳಿದೆ.

ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಲೋಹಗಢ ಕೋಟೆಯಲ್ಲಿ ಜೂ. 18ರಂದು ಕೊಲೆಯಾದ ಯುವ ಉದ್ಯಮಿಯನ್ನು 26 ವರ್ಷದ ಕೇತನ್‌ ವಿಶಾಲ್‌ ಅಗರ್ವಾಲ್‌ ಎಂದು ಗುರುತಿಸಲಾಗಿದೆ. ಕೇತನ್‌ ಕೊಲೆಗೈದ ಆತನ ಭಾವಿ ಪತ್ನಿ ಸಿಯಾ ಗೋಯಲ್‌ (20) ಮತ್ತು ಆಕೆಯ ಪ್ರಿಯಕರ ಚೇತನ್‌ ಚೌಧರಿ (22)ಯನ್ನು ಸದ್ಯ ಪೊಲೀಸರು ಬಂಧಿಸಿದ್ದು, ತನಿಖೆ ನಡೆಯುತ್ತಿದೆ.

ಕೇತನ್‌ ಕೊಲೆಯ ಕೆಲವೇ ತಾಸುಗಳ ಮೊದಲು ಕೆಫೆಯೊಂದರಲ್ಲಿ ಪ್ರಿಯಕರನನ್ನು ಭೇಟಿಯಾದ ಸಿಯಾ

ಘಟನೆ ವಿವರ

ಫೆಬ್ರವರಿಯಲ್ಲಿ ಕೇತನ್‌ ಮತ್ತು ಸಿಯಾ ನಿಶ್ಚಿತಾರ್ಥ ನಡೆದಿತ್ತು. ಆದರೆ ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ಹಾಗಂತ ಅವಳು ಬಾಯಿಬಿಟ್ಟು ಹೇಳಿರಲಿಲ್ಲ ಎನ್ನಲಾಗಿದೆ. 2025ರ ನವೆಂಬರ್‌ನಲ್ಲಿ ಪರಿಚಯವಾದ ಚೇತನ್‌ನನ್ನು ಅವಳು ಪ್ರೀತಿಸುತ್ತಿದ್ದಳು. ಹೀಗಾಗಿ ಚೇತನ್‌ ಮತ್ತು ಸಿಯಾ ಇಬ್ಬರು ಸೇರಿ ಕೇತನ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದರು.

ಕೇತನ್‌-ಸಿಯಾ ಜತೆಗಿನ ವಿಡಿಯೊ:



ಜೂನ್‌ 19ರಂದು ಸಿಯಾ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಜೂನ್‌ 18ರಂದು ಲೋನಾವಾಲಾ ಸಮೀಪದ ಲೋಹಗಢ ಕೋಟೆಗೆ ಕೇತನ್‌ನನ್ನು ಕರೆಸಿ ಚೇತನ್‌ ಮತ್ತು ಸಿಯಾ 400 ಅಡಿಯ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದರು. ಬಳಿಕ ಸಿಯಾ ಇದನ್ನು ಆಕಸ್ಮಿಕ ಸಾವು ಎಂದು ಕರೆದಿದ್ದಳು. ಕೊನೆಗೆ ಆಕೆಯ ಹೇಳಿಕೆಯಲ್ಲಿನ ವ್ಯತ್ಯಾಸ ಗಮನಿಸಿ ಅನುಮಾನಗೊಂಡು ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂತು. ಸದ್ಯ ಈ ಘಟನೆಯ ಹೆಚ್ಚಿನ ತನಿಖೆ ನಡೆಯುತ್ತಿದೆ.

ಮೇಘಾಲಯ ಹನಿಮೂನ್‌ ಹತ್ಯೆ

ಸದ್ಯ ಕೇತನ್‌ ಕೊಲೆಯನ್ನು ಕಳೆದ ವರ್ಷ ನಡೆದ ಮೇಘಾಲಯ ಹನಿಮೂನ್‌ ಹತ್ಯೆಯೊಂದಿಗೆ ಹೋಲಿಸಲಾಗುತ್ತಿದೆ. 2025ರಲ್ಲಿ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ ಮಧ್ಯ ಪ್ರದೇಶದ ಇಂದೋರ್‌ ಮೂಲದ ರಾಜ ರಘುವಂಶಿಯನ್ನು ಆತನ ಪತ್ನಿ ಸೋನಂ ರಘುವಂಶಿ ತನ್ನ ಪ್ರಿಯಕರ ರಾಜ್‌ ಕುಶ್ವಾಹಾ ಜತೆ ಸೇರಿ ಹತ್ಯೆ ಮಾಡಿದ್ದಳು. ಮೇ 13ರಂದು ಮದುವೆಯಾದ ರಾಜ ರಘುವಂಶಿ ಮತ್ತು ಸೋನಂ ಮೇ 20ರಂದು ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಮೇ 23ರಂದು ಸೋನಂ ಫೋಟೋಶೂಟ್ ನೆಪದಲ್ಲಿ ರಾಜ ಅವರನ್ನು ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದಿದ್ದಳು. ಬಳಿಕ ಸೋನಂ ಮತ್ತು ರಾಜ್‌ ಕುಶ್ವಾಹಾ ಗೊತ್ತುಪಡಿಸಿದ ಹಂತಕರು ರಾಜ ರಘುವಂಶಿಯನ್ನು ಕೊಲೆ ಮಾಡಿದ್ದರು. ಬಳಿಕ ರಾಜ ರಘುವಂಶಿ ನಾಪತ್ತೆಯಾಗಿದ್ದಾರೆ ಎಂದು ಸೋನಂ ಕಥೆ ಕಟ್ಟಿದ್ದಳು. ಕೊನೆಗೆ ಆಕೆಯ ವರ್ತನೆಯಿಂದ ಸತ್ಯ ಬೆಳಕಿಗೆ ಬಂದಿತ್ತು.

ಪತಿಯ ಕೊಲೆಗೆ 20 ಲಕ್ಷ ರೂ. ಆಮಿಷ ಒಡ್ಡಿದ್ದ ಸೋನಂ; ಮೇಘಾಲಯ ಹನಿಮೂನ್‌ ಹತ್ಯೆಯ ಭೀಕರ ರಹಸ್ಯ ಬಯಲು

2 ಕೊಲೆಗಳ ನಡುವೆ ಇದೆ ಸಾಕಷ್ಟು ಸಾಮ್ಯತೆ

ಸದ್ಯ ಈ 2 ಕೊಲೆಗಳ ನಡುವೆ ಸಾಮ್ಯತೆ ಸಾಕಷ್ಟು ಚರ್ಚೆಯಾಗುತ್ತದೆ. ಇಬ್ಬರೂ ತಮ್ಮ ಸಂಗಾತಿಯಿಂದಲೇ, ಪ್ರವಾಸಿ ತಾಣದಲ್ಲೇ ಕೊಲೆಯಾಗಿದ್ದಾರೆ. ಎರಡೂ ಪ್ರಕರಣದಲ್ಲಿ ಸಂಗಾತಿಯ ಪ್ರಿಯಕರನ ಕೈವಾಡ ಇದೆ. ಕೇತನ್‌ ಮದುವೆಗೆ ಮೊದಲೇ ಹತ್ಯೆಯಾದರೆ ರಾಜ ರಘುವಂಶಿ ಮದುವೆಯಾದ ಬಳಿಕ ಹತ್ಯೆಯಾಗಿದ್ದಾರೆ. ಇಬ್ಬರ ಸಂಗಾತಿಯರು ಜನ ಓಡಾಟ ಕಡಿಮೆ ಇರುವ ಪ್ರವಾಸಿ ತಾಣಕ್ಕೆ ಕರೆದೊಯ್ದು ಉಸಿರು ನಿಲ್ಲಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.