Chinthamani News: ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂಕೇತ: ಸಡಗರದ ಮೊಹರಂ ಆಚರಣೆ
ಮೊಹರಂ ಹಬ್ಬವು ಇಸ್ಲಾಂ ಧರ್ಮದ ಹೊಸ ವರ್ಷದ ಆರಂಭವಾಗಿದೆ. ಹಿಂದೂ ಧರ್ಮದಲ್ಲಿ ಚಂದ್ರ ಮಾನ ಯುಗಾದಿ ಮತ್ತು ಕ್ರೈಸ್ತ ಧರ್ಮದಲ್ಲಿ ಜನವರಿ ಮೊದಲ ದಿನ ಇರುವಂತೆ, ಇಸ್ಲಾಂ ಧರ್ಮದಲ್ಲಿ ಮೊಹರಂ ತಿಂಗಳ ಮೊದಲ ದಿನವನ್ನು ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ನಂತರ ಚಂದ್ರನ ದರ್ಶನವಾದ ದಿನದಿಂದಲೇ ಈ ಆಚರಣೆಗಳು ಆರಂಭ ಗೊಳ್ಳುತ್ತವೆ.
-
ಚಿಂತಾಮಣಿ: ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬದ ಆಚರಣೆಯು ಜೂ.17 ರಿಂದ ಆರಂಭಗೊಂಡಿದ್ದು, ನಗರದಾದ್ಯಂತ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಈ ಹಬ್ಬವನ್ನು ಗ್ರಾಮೀಣ ಪ್ರದೇಶಗಳಲ್ಲಿ 'ಬಾಬ್ಯಯನ ಹಬ್ಬ'ಎಂದೇ ಪ್ರಸಿದ್ಧಿಯಾಗಿದೆ. ಇದೇ ಜೂ.26 ರ ಶುಕ್ರವಾರದಂದು ಮೊಹರಂ ಹಬ್ಬದ ಕೊನೆಯ ದಿನವಾಗಿದೆ.
ಮೊಹರಂ ಹಬ್ಬವು ಇಸ್ಲಾಂ ಧರ್ಮದ ಹೊಸ ವರ್ಷದ ಆರಂಭವಾಗಿದೆ. ಹಿಂದೂ ಧರ್ಮದಲ್ಲಿ ಚಂದ್ರಮಾನ ಯುಗಾದಿ ಮತ್ತು ಕ್ರೈಸ್ತ ಧರ್ಮದಲ್ಲಿ ಜನವರಿ ಮೊದಲ ದಿನ ಇರುವಂತೆ, ಇಸ್ಲಾಂ ಧರ್ಮದಲ್ಲಿ ಮೊಹರಂ ತಿಂಗಳ ಮೊದಲ ದಿನವನ್ನು ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ನಂತರ ಚಂದ್ರನ ದರ್ಶನವಾದ ದಿನದಿಂದಲೇ ಈ ಆಚರಣೆಗಳು ಆರಂಭ ಗೊಳ್ಳುತ್ತವೆ.
ಪ್ರವಾದಿ ಹಜರತ್ ಮಹಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಜರತ್ ಇಮಾಂ ಹಸನ್ ಮತ್ತು ಇಮಾಂ ಹುಸೇನ್ ಅವರು ಇಸ್ಲಾಂ ಧರ್ಮದ ರಕ್ಷಣೆಗಾಗಿ, ಸತ್ಯ, ಧರ್ಮ ಮತ್ತು ನ್ಯಾಯಕ್ಕಾಗಿ ಹೋರಾಡಿ ಯುದ್ಧದಲ್ಲಿ ಹುತಾತ್ಮರಾದರು. ಅಂದಿನ ಸರ್ವಾಧಿಕಾರಿಗಳು ಅವರನ್ನು ಕ್ರೂರವಾಗಿ ನಡೆಸಿ ಕೊಂಡು,ಅವರ ಕೈಗಳನ್ನು ಕತ್ತರಿಸಿ ಮೆರವಣಿಗೆ ಮಾಡಿದ್ದರು.ಅವರ ಈ ಮಹೋನ್ನತ ತ್ಯಾಗ ಮತ್ತು ಬಲಿದಾನದ ಸವಿ ನೆನಪಿಗಾಗಿ ಮೊಹರಂ ಹಬ್ಬವನ್ನು ಆಚರಿಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಇದನ್ನೂ ಓದಿ: Chinthamani News: ಜುಲೈ 27ರಿಂದ 29ರ ತನಕ ಕೈವಾರದಲ್ಲಿ ಗುರುಪೂಜಾ-ಸಂಗೀತೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ
ಅವರ ನೆನಪಿಗಾಗಿ ಪಂಜೆಗಳನ್ನು (ದೇವರು)ಹೂಗಳಿಂದ ಆಕರ್ಷಕವಾಗಿ ಅಲಂಕರಿಸಿ ಮೆರವಣಿಗೆ ಮಾಡುವುದು ಈ ಹಬ್ಬದ ಪ್ರಮುಖ ವಿಶೇಷತೆಯಾಗಿದೆ. ನಗರದ ಊರ ಮುಂದೆ, ವೆಂಕಟಗಿರಿ ಕೋಟೆ, ಶಾಂತಿನಗರ, ಕೀರ್ತಿನಗರ, ಸೊಣ್ಣಶೆಟ್ಟಹಳ್ಳಿ, ಟಿಪ್ಪುನಗರ, ಅಗ್ರಹಾರ, ಮೆಹಬೂಬ್ ನಗರ ಹಾಗೂ ಗ್ರಾಮೀಣ ಭಾಗಗಳಾದ ನಿಮ್ಮಕಾಯಲಹಳ್ಳಿ, ಮುರುಗಮಲ್ಲ, ಯನಮಲಪಾಡಿ, ಸಿದ್ದಿಮಠ ಸೇರಿದಂತೆ ಹಲವೆಡೆ ಪಂಜೆಗಳನ್ನು ಸ್ಥಾಪಿಸಿ ಪ್ರತಿನಿತ್ಯ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತಿದೆ.
"ಮೊಹರಂನ ಕೊನೆಯ ನಾಲ್ಕು ದಿನಗಳಲ್ಲಿ ಪ್ರತಿನಿತ್ಯ ಪಂಜೆಗಳ (ಪೀರಲದೇವರ) ಮೆರವಣಿಗೆ ಅತ್ಯಂತ ವೈಭವದಿಂದ ನಡೆಯುತ್ತದೆ" ಎಂದು ಧಾರ್ಮಿಕ ಮುಖಂಡರಾದ ಮೊಹಮ್ಮದ್ ಅಸ್ಲಾಂ ತಿಳಿಸಿದ್ದಾರೆ.
ಮೊಹರಂ ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ಹುಲಿವೇಷ. ಭಕ್ತರು ಹುಲಿವೇಷ ಧರಿಸಿ ದೇವರ ಸೇವೆಯಲ್ಲಿ ನಿರತರಾಗುತ್ತಾರೆ. ಪಂಜೆಗಳ ಮೆರವಣಿಗೆಯಲ್ಲಿ ಹಲಗೆಯ(ಡೋಲು)ಸದ್ದಿಗೆ ತಕ್ಕಂತೆ ಭರ್ಜರಿಯಾಗಿ ನೃತ್ಯ ಮಾಡುತ್ತಾರೆ. ಗ್ರಾಮಗಳಲ್ಲಿ ಜನರು ನೀಡುವ ಹಣ ಮತ್ತು ಪದಾರ್ಥಗಳನ್ನು ಸಂಗ್ರಹಿಸಿ ದೇವರಿಗೆ ಅರ್ಪಿಸುತ್ತಾರೆ.
9ನೇ ದಿನದ ರಾತ್ರಿ 12 ರಿಂದ 1 ಗಂಟೆಯ ಅವಧಿಯಲ್ಲಿ ಹರಕೆ ಹೊತ್ತವರು ಹಾಗೂ ಪಂಜೆಗಳನ್ನು ಹೊತ್ತ ಭಕ್ತರು ಧಗಧಗಿಸುವ ಅಗ್ನಿಕುಂಡ ಹಾಯುವ ಮೂಲಕ ಭಕ್ತಿ ಮೆರೆಯುತ್ತಾರೆ. ಅಂದು ಸಹ ಅನ್ನದಾನ, ಕಿಚಡಿ ಮತ್ತು ಶರಬತ್ ಹಂಚಲಾಗುತ್ತದೆ. ಹಬ್ಬದ 10 ನೇ ದಿನದಂದು ಪಂಜೆಗಳನ್ನು ಪವಿತ್ರವಾಗಿ ತೊಳೆದು ಮುಂದಿನ ವರ್ಷದ ಆಚರಣೆಗಾಗಿ ಸ್ವಸ್ಥಾನದಲ್ಲಿ ಭದ್ರಪಡಿಸುವುದರೊಂದಿಗೆ ಮೊಹರಂ ಆಚರಣೆಗೆ ತೆರೆಬೀಳುತ್ತದೆ.
ಹಿಂದೂ-ಮುಸ್ಲಿಂ ಬಾಂಧವರು ಜೊತೆಗೂಡಿ ಆಚರಿಸುವ ಮೊಹರಂ ಹಬ್ಬವು ಇಂದಿಗೂ ತನ್ನ ಸಾಂಸ್ಕೃತಿಕ ವೈಭವ ಮತ್ತು ಪರಂಪರೆಯನ್ನು ಯಶಸ್ವಿಯಾಗಿ ಉಳಿಸಿಕೊಂಡು ಬಂದಿದೆ.