Post Man Cheat: ಪೋಸ್ಟ್ ಮ್ಯಾನ್ ವಂಚನೆಯಿಂದ ಹಣ ಕಳೆದುಕೊಂಡ ಸಾವಿರಾರು ಖಾತೆದಾರರು
ತಾಲ್ಲೂಕಿನ ಇಡಗೂರು ಗ್ರಾಮದ ರಮ್ಯಾ ಎಂಬಾಕೆ ಕೆಲಸ ಆರಂಭಿಸಿದ್ದು, ಇತ್ತೀಚಿನ ಕೆಲವು ತಿಂಗಳುಗಳಿಂದ ಗ್ರಾಹಕರ ಠೇವಣಿ, ಮನಿ ಆರ್ಡರ್, ಮಂತ್ರಿ ಪಿಂಚಣಿ, ಮಾಸಾಶನ, ಸ್ಥಿರ ಠೇವಣಿಯ ಸುಮಾರು ಎರಡು ಕೋಟಿಯಷ್ಟು ಹಣವನ್ನು ಅಕ್ರಮ ಹಾಗೂ ವಂಚನೆ ಮಾಡಿದ್ದಾರೆ
-
ಗೌರಿಬಿದನೂರು : ತಾಲೂಕಿನ ಹಾಲಗಾನಹಳ್ಳಿ ಗ್ರಾಮದ ಅಂಚೆ ಕಚೇರಿಯಲ್ಲಿ ಸುಮಾರು 1200 ಖಾತೆದಾರರಿಗೆ ಸುಮಾರು ಎರಡು ಕೋಟಿಯಷ್ಟು ಹಣವನ್ನು ಪೋಸ್ಟ್ ಮಾಸ್ಟರ್ ರಮ್ಯಾ ವಂಚಿಸಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿ ಅಂಚೆ ಕಛೇರಿಗೆ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿಗೆ ಸೇರಿರುವ ಹಾಲಗಾನಹಳ್ಳಿಯ ಅಂಚೆ ಕಛೇರಿಯಲ್ಲಿ 2013ರಲ್ಲಿ ಪೋಸ್ಟ್ ಮಾಸ್ಟರ್ ಆಗಿ ಬಂದ, ತಾಲ್ಲೂಕಿನ ಇಡಗೂರು ಗ್ರಾಮದ ರಮ್ಯಾ ಎಂಬಾಕೆ ಕೆಲಸ ಆರಂಭಿಸಿದ್ದು, ಇತ್ತೀಚಿನ ಕೆಲವು ತಿಂಗಳುಗಳಿಂದ ಗ್ರಾಹಕರ ಠೇವಣಿ, ಮನಿ ಆರ್ಡರ್, ಮಂತ್ರಿ ಪಿಂಚಣಿ, ಮಾಸಾಶನ, ಸ್ಥಿರ ಠೇವಣಿಯ ಸುಮಾರು ಎರಡು ಕೋಟಿಯಷ್ಟು ಹಣವನ್ನು ಅಕ್ರಮ ಹಾಗೂ ವಂಚನೆ ಮಾಡಿದ್ದಾರೆ ಎಂದು ಹಾಲಗಾನ ಹಳ್ಳಿ ಗ್ರಾಮಸ್ಥರು ಗುರುವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.
ಇದರ ಪರಿಣಾಮ ಶುಕ್ರವಾರ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಖಾತೆದಾರರಿಗೆ ಭರವಸೆ ನೀಡುವ ಪ್ರಯತ್ನ ಮಾಡಿದರು.ಅವರ ಮಾತಿಗೆ ಒಪ್ಪದ ಖಾತೆದಾರರು ಒಂದು ಗಂಟೆಗೂ ಅಧಿಕ ಸಮಯ ಹಿರಿಯ ಅಧಿಕಾರಿಗಳನ್ನು ಕಚೇರಿಯ ಒಳಗಡೆ ಹಾಕಿ ಬೀಗ ಹಾಕಲಾಗಿತ್ತು.
ಇದನ್ನೂ ಓದಿ: Cheating Case: ₹5 ಕೋಟಿ ವಂಚನೆ ಆರೋಪ; ಬಾಲಿವುಡ್ ನಟರು ಸೇರಿ 22 ಜನರ ವಿರುದ್ಧ ಪ್ರಕರಣ ದಾಖಲು
ವಿಷಯ ತಿಳಿದ ಕೂಡಲೇ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ ರಮೇಶ್ ಗುಗ್ಗರಿ ಸ್ಥಳಕ್ಕೆ ಭೇಟಿ ನೀಡಿ ಗಲಾಟೆಯ ತೀವ್ರತೆಯನ್ನು ಶಮನಗೊಳಿಸಿ ಅಧಿಕಾರಿಗಳನ್ನು ಹೊರ ಕರೆತಂದರು ನಂತರ ಗ್ರಾಮಸ್ಥರ ಜೊತೆ ಮಾತನಾಡಿ ನಿಮಗೆ ಯಾರಿಂದ ಮೋಸ ಆಗಿದೆಯೋ ಅವರ ವಿರುದ್ಧ ನಿಮ್ಮಲ್ಲಿರುವ ದಾಖಲೆಗಳೊಂದಿ ಬಂದು ಠಾಣೆಯಲ್ಲಿ ದೂರು ನೀಡಿ ತಪ್ಪಿತಸ್ಥರು ಯಾರಾದರೂ ಸರಿ ಅವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ನಿಮಗೆ ನ್ಯಾಯ ಕೊಡಿಸುವಲ್ಲಿ ಪೊಲೀಸ್ ಇಲಾಖೆಯ ಪೂರ್ತಿ ಸಹಕಾರ ಇರುತ್ತದೆ ಎಂದು ಗ್ರಾಮಸ್ಥರ ಮನವೊಲಿಸಿದರು.
ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಹಣದ ಅವ್ಯವಹಾರ ಆಗಿರುವ ಬಗ್ಗೆ ಗ್ರಾಹಕ ರೊಬ್ಬರು ನೀಡಿದ ದೂರಿನನ್ವಯ ನಾವು ಹೋಗಿ ಪರಿಶೀಲನೆ ನಡೆಸಿದಾಗ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಬಂದಿದೆ. ಅನಕ್ಷರಸ್ಥರು. ವೃದ್ಧರು. ಅಮಾಯಕರೇ ಹೆಚ್ಚಾಗಿ ಹಣ ಕಳೆದುಕೊಂಡಿರುವ ಬಗ್ಗೆ ಗ್ರಾಮಸ್ಥರು ದೂರುತ್ತಿದ್ದಾರೆ. ಈ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಿ, ಎಲ್ಲಾ ಗ್ರಾಹಕರ ಹಣವನ್ನು ಹಿಂತಿರುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಂಚೆ ಕಚೇರಿಯ ನಿರೀಕ್ಷಕ ಹನುಮಂತಪ್ಪ ತಿಳಿಸಿದ್ದಾರೆ.