ವಾಷಿಂಗ್ ಮೆಷಿನ್ ಬಳಸುವಾಗ ಶಾಕ್ ತಗುಲಿ ಮಹಿಳೆ ಬಲಿ; ಅಳಿಯನೇ ಮಗಳನ್ನು ಕೊಂದ ಎಂದ ಪೋಷಕರು
ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿಯಲ್ಲಿ ನಡೆದಿದೆ. ಆದರೆ, ಮಗಳ ಸಾವಿನ ಹಿಂದೆ ಅಳಿಯನ ಕೈವಾಡವಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಮೃತ ಮಹಿಳೆಯನ್ನು ಸುಜಾತ (30) ಎಂದು ಗುರುತಿಸಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ (Bengaluru Crime) ತಾಲೂಕಿನ ಗೌಡಹಳ್ಳಿಯಲ್ಲಿ ನಡೆದಿದೆ. ಆದರೆ, ಮಗಳ ಸಾವಿನ ಹಿಂದೆ ಅಳಿಯನ ಕೈವಾಡವಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಮೃತ ಮಹಿಳೆಯನ್ನು ಸುಜಾತ (30) ಎಂದು ಗುರುತಿಸಲಾಗಿದೆ. ತುಮಕೂರಿನ ಹೆಗ್ಗೆರೆ ನಿವಾಸಿಗಳಾದ ಪಾಂಡುರಂಗಯ್ಯ ಮತ್ತು ಭಾಗ್ಯಮ್ಮ ದಂಪತಿಯ ನಾಲ್ಕನೇ ಮಗಳಾದ ಸುಜಾತ, 10 ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಎಂಬುವವರನ್ನು ವಿವಾಹವಾಗಿದ್ದರು. ಇಂದು ಬೆಳಗ್ಗೆ 7:30ರ ಸುಮಾರಿಗೆ ವಾಷಿಂಗ್ ಮೆಷಿನ್ ಹಾಕಲು ಹೋದಾಗ ಕರೆಂಟ್ ಶಾಕ್ ತಗುಲಿ ಸುಜಾತ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಸುಜಾತ ವಾರದ ಹಿಂದಷ್ಟೇ ಬೆಂಗಳೂರು ಉತ್ತರ ತಾಲ್ಲೂಕಿನ ಗೌಡಹಳ್ಳಿಯಲ್ಲಿ ಬಾಡಿಗೆ ಮನೆಗೆ ಬಂದಿದ್ದರು. ಏ.28 ಬೆಳಗ್ಗೆ 7 ಗಂಟೆ ಸುಮಾರಿಗೆ ವಾಶಿಂಗ್ ಮೆಷಿನ್ ಸ್ವಿಚ್ ಹಾಕುವಾಗ ವಿದ್ಯುತ್ ಶಾಕ್ ಹೊಡೆದು ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯುತ್ ಶಾಕ್ನಿಂದ ಕೆಳಗೆ ಬಿದ್ದ ಮಹಿಳೆಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ವೇಳೆಗಾಗಲೇ ಸುಜಾತ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದು, ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸುಜಾತ ಅವರ ಸಾವು ಕೇವಲ ಆಕಸ್ಮಿಕವಲ್ಲ, ಇದರ ಹಿಂದೆ ಅವರ ಪತಿ ಚೇತನ್ ಸಂಚು ಇರಬಹುದು ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಅದಕ್ಕೆ ಕೆಲವೊಂದು ಕಾರಣಗಳನ್ನು ನೀಡಿದ್ದಾರೆ. ಮೊದಲಾಗಿ ಮದುವೆಯಾದಾಗಿನಿಂದಲೂ ದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು. ಗಂಡನ ಕಿರುಕುಳ ತಾಳಲಾರದೆ ಸುಜಾತ ಒಂದು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದರು ಎಂದು ಹೇಳಲಾಗಿದೆ. ಚೇತನ್ ಮತ್ತು ಆತನ ತಾಯಿ ಸುಜಾತಳ ಮನವೊಲಿಸಿ ಕೇವಲ ಒಂದು ವಾರದ ಹಿಂದಷ್ಟೇ ಗೌಡಹಳ್ಳಿಗೆ ಕರೆಕೊಂಡು ಬಂದಿದ್ದರು. ಮನೆಗೆ ಬಂದ ಎಂಟೇ ದಿನದಲ್ಲಿ ಸುಜಾತ ಶವವಾಗಿರುವುದು ಪೋಷಕರಲ್ಲಿ ಅನುಮಾನ ಮೂಡಿಸಿದೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.