"ಅವರು ಎಂದಿಗೂ ಬದಲಾಗಲ್ಲ"; ಪತಿ, ಅತ್ತೆ-ಮಾವನ ಕಿರುಕುಳಕ್ಕೆ ನೊಂದು ವಿಡಿಯೊ ಮಾಡಿ ಆತ್ಮಹತ್ಯೆಗೆ ಶರಣಾದ ಶಿಕ್ಷಕಿ
Crime News: ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಮದುವೆಯಾದ ಎಂಟು ತಿಂಗಳ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ. ಹಲವು ತಿಂಗಳುಗಳಿಂದ ತನ್ನ ಪತಿ, ನಾದಿನಿ, ಅತ್ತೆ-ಮಾವ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪತಿ, ಅತ್ತೆ-ಮಾವನ ಕಿರುಕುಳಕ್ಕೆ ನೊಂದು ಮಹಿಳೆ ಆತ್ಮಹತ್ಯೆ -
ಡೆಹ್ರಾಡೂನ್, ಜು.31: ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಮದುವೆಯಾದ ಎಂಟು ತಿಂಗಳ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಾಖಂಡದ (Uttarakhand) ಡೆಹ್ರಾಡೂನ್‌ನಲ್ಲಿ ನಡೆದಿದೆ. ವಿಡಿಯೊ ಮೂಲಕ ತನ್ನ ಸಾವಿಗೆ ಕಾರಣವೇನೆಂದು ತಿಳಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಹಲವು ತಿಂಗಳುಗಳಿಂದ ತನ್ನ ಪತಿ, ನಾದಿನಿ, ಅತ್ತೆ-ಮಾವ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅತ್ತೆ-ಮಾವನ ಮನಸ್ಥಿತಿ ಎಂದಿಗೂ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ. ಆಕೆಯ ಕುಟುಂಬ ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಆಕೆಯ ಪತಿ, ಅತ್ತೆ ಮತ್ತು ಅತ್ತಿಗೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ (Crime News).
ಸೃಷ್ಟಿ ಕಾಂಧಾರಿ ಮೃತ ದುರ್ದೈವಿ. 2025ರ ನವೆಂಬರ್‌ನಲ್ಲಿ ಸೌರಭ್ ರಾಟೂರಿ ಅವರನ್ನು ವಿವಾಹವಾಗಿದ್ದರು. ತನ್ನ ಸಾವಿಗೆ ಸ್ವಲ್ಪ ಮೊದಲು ವಿಡಿಯೋವನ್ನು ಸೃಷ್ಟಿ ರೆಕಾರ್ಡ್ ಮಾಡಿದ್ದಾಳೆ ಎನ್ನಲಾಗಿದೆ. ಕಳೆದ ಹಲವಾರು ತಿಂಗಳುಗಳಿಂದ ತನ್ನ ಪತಿಯ ಮನೆಯಲ್ಲಿ ಆಗುತ್ತಿರುವ ನಿರಂತರ ಕಿರುಕುಳವನ್ನು ಅವರು ವಿವರಿಸಿದ್ದಾರೆ.
“ಕ್ಷಮಿಸಿ, ಅಮ್ಮ. ನಾನು ಹೊರಡುತ್ತಿದ್ದೇನೆ. ಆದರೆ ಎಲ್ಲವೂ ತುಂಬಾ ವಿಚಿತ್ರವಾಗಿದೆ. ಕಳೆದ ಆರು ತಿಂಗಳಿನಿಂದ ನಾನು ಇದನ್ನು ಸಹಿಸಿಕೊಳ್ಳುತ್ತಿದ್ದೇನೆ. ನನಗೆ ಇನ್ನು ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಅಳುತ್ತಾ ವಿಡಿಯೋದಲ್ಲಿ ಹೇಳಿದ್ದಾರೆ. “ಅತ್ತೆ-ಮಾವ ತಮ್ಮ ಆಲೋಚನಾ ವಿಧಾನವನ್ನು ಎಂದಿಗೂ ಬದಲಾಯಿಸುವುದಿಲ್ಲ. ಅವರು ನನ್ನನ್ನು ಯಾವಾಗಲೂ ಕೆಣಕುತ್ತಲೇ ಇರುತ್ತಾರೆ. ಮದುವೆಯಾದಾಗಿನಿಂದ ನೆಮ್ಮದಿಯಿಲ್ಲ” ಎಂದು ಹೇಳಿದ್ದಾರೆ.
ಹಾಸನದಲ್ಲಿ ಘೋರ ಘಟನೆ; ಬಟ್ಟೆ ನೆನೆಸಿದ್ದ ಬಕೆಟ್‌ಗೆ ಬಿದ್ದು 8 ತಿಂಗಳ ಮಗು ಸಾವು
ತಮ್ಮ ಮಗಳ ಮದುವೆಯ ನಂತರ ನಿರಂತರ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಸೃಷ್ಟಿಯ ತಾಯಿ ಸೀಮಾ ಕಂಧಾರಿ ಆರೋಪಿಸಿದ್ದಾರೆ. ಆಕೆಯನ್ನು ಪದೇ ಪದೇ ನಿಂದಿಸಲಾಗುತ್ತಿತ್ತು. ಮನೆಯಲ್ಲಿ ಸಂಭವಿಸುವ ಪ್ರತಿಯೊಂದು ದುರದೃಷ್ಟಕ್ಕೂ ಆಕೆಯನ್ನೇ ದೂಷಿಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಮದುವೆಯಾದ ಕೆಲವು ತಿಂಗಳ ನಂತರ ಸೃಷ್ಟಿಯ ಮಾವ ಹೃದಯಾಘಾತಕ್ಕೊಳಗಾದ ನಂತರ ಕಿರುಕುಳ ಹೆಚ್ಚಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೊಸೆಯು ಕುಟುಂಬಕ್ಕೆ ದುರದೃಷ್ಟವನ್ನು ತಂದಿದ್ದಾಳೆಂದು ಜ್ಯೋತಿಷಿ ಹೇಳಿದ್ದಾರೆ. ಆ ಬಳಿಕ ಅತ್ತೆ-ಮಾವ ಸೊಸೆ ವಿರುದ್ಧ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಆಕೆಯ ಮಾವ ನಿಧನರಾದ ನಂತರ, ಮಾನಸಿಕ ಕಿರುಕುಳ ತೀವ್ರಗೊಂಡಿತು ಎಂದು ಅವರು ಹೇಳಿದ್ದಾರೆ.
ಜುಲೈ 28 ಮತ್ತು 29 ರಂದು ಕುಟುಂಬವು ಸೃಷ್ಟಿಯನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ದೂರುದಾರರು ತಿಳಿಸಿದ್ದಾರೆ. ಪರಿಚಯಸ್ಥರೊಬ್ಬರು ಅವರ ಮನೆಗೆ ಭೇಟಿ ನೀಡಿದಾಗ, ಅವರು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರಿಗೆ ತಿಳಿಸಲಾಯಿತು. ಅವರ ಕುಟುಂಬಸ್ಥರು ಶ್ರೀನಗರದಿಂದ ಡೆಹ್ರಾಡೂನ್‌ಗೆ ಬರುವ ಹೊತ್ತಿಗೆ, ಅವರು ಈಗಾಗಲೇ ಮೃತಪಟ್ಟಿದ್ದರು.
ಶಾಲೆಯಲ್ಲಿಯೇ ಸಹಪಾಠಿಯ ಕುತ್ತಿಗೆ ಹಿಸುಕಿದ ವಿದ್ಯಾರ್ಥಿ; ಚಿಕಿತ್ಸೆ ಫಲಿಸದೆ 10 ವರ್ಷದ ಬಾಲಕ ದುರ್ಮರಣ
ಸೃಷ್ಟಿಯ ಸಾವಿನ ಬಗ್ಗೆ ಪತಿ ಮನೆಯವರು ತಮಗೆ ತಿಳಿಸಲಿಲ್ಲ ಎಂದು ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ, ದೋಯಿವಾಲಾ ಪೊಲೀಸರು ಪತಿ ಸೌರಭ್ ರಾಟುರಿ, ಅತ್ತೆ ಪರ್ವೀನಾ ದೇವಿ ಮತ್ತು ಅತ್ತಿಗೆ ಚಾರು ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ವರದಕ್ಷಿಣೆ ಸಾವಿಗೆ ಸಂಬಂಧಿಸಿದ ಸೆಕ್ಷನ್ 80(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಸಂತ್ರಸ್ತೆ ದಾಖಲಿಸಿರುವ ವಿಡಿಯೋ, ಮರಣೋತ್ತರ ಪರೀಕ್ಷೆಯ ವರದಿ, ವಿಧಿವಿಜ್ಞಾನ ಸಾಕ್ಷ್ಯಗಳು ಮತ್ತು ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಇತರ ವಸ್ತುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ವಿಡಿಯೋದ ಸತ್ಯಾಸತ್ಯತೆ ಅಥವಾ ಸಾವಿಗೆ ನಿಖರವಾದ ಕಾರಣದ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತನಿಖೆ ಮುಂದುವರೆದಿದೆ.