ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KSET 2026: ಸಹಾಯಕ ಪ್ರಾಧ್ಯಾಯಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ; ಕೆಸೆಟ್-2026ಕ್ಕೆ ಅರ್ಜಿ ಆಹ್ವಾನ; ಪರೀಕ್ಷೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ

KSET 2026: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2026 (ಕೆಸೆಟ್) ಅನ್ನು 37 ವಿಷಯಗಳಲ್ಲಿ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ, ಪ್ರಥಮ ದರ್ಜೆ ಪದವಿ ಕಾಲೇಜು, ಉನ್ನತ ಶಿಕ್ಷಣ ಸಂಸ್ಥೆ ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ.

ಕೆಸೆಟ್-2026ಕ್ಕೆ ಅರ್ಜಿ ಆಹ್ವಾನ; ಪರೀಕ್ಷೆ ಕುರಿತ ಮಾಹಿತಿ ಇಲ್ಲಿದೆ

-

Prabhakara R
Prabhakara R Aug 11, 2026 9:31 PM

ಬೆಂಗಳೂರು: ಸಹಾಯಕ ಪ್ರಾಧ್ಯಾಯಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2026 (KSET 2026) ಅನ್ನು ಅ.11ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲು ಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ಅಭ್ಯರ್ಥಿಗಳು ಕೆಸೆಟ್-2026ಕ್ಕೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು.

ಕೆಸೆಟ್ ಪರೀಕ್ಷೆಗೆ ಕೆಇಎ ವೆಬ್‌ ಸೈಟ್ https://cetonline.karnataka.gov.in/kea/ ಪ್ರವೇಶಿಸುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.

ಕೆಸೆಟ್-2026 ವೇಳಾಪಟ್ಟಿ

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ : 10-08-2026
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 05-09-2026
  • ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ : 06-09-2026
  • ಪ್ರವೇಶ ಪತ್ರ ಬಿಡುಗಡೆ ದಿನಾಂಕ : 01-10-2026
  • ಪರೀಕ್ಷಾ ದಿನಾಂಕ: 11-10-2026

37 ವಿಷಯಗಳಿಗೆ ಕೆಸೆಟ್‌ ಪರೀಕ್ಷೆ

ಕೆಸೆಟ್ (KSET) 2026ರ ಪರೀಕ್ಷೆಯನ್ನು 37 ವಿಷಯಗಳಲ್ಲಿ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಪದವಿ ಕಾಲೇಜು / ಉನ್ನತ ಶಿಕ್ಷಣ ಸಂಸ್ಥೆ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ.

ಅರ್ಹತಾ ನಿಬಂಧನೆ:

ಅಭ್ಯರ್ಥಿಗಳು ಯು.ಜಿ.ಸಿ ಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯ / ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ.55% ರಷ್ಟು ಅಂಕಗಳನ್ನು ಪಡೆದಿರಬೇಕು. ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ಅಭ್ಯರ್ಥಿಗಳು, ವಿಶೇಷಚೇತನರು ಮತ್ತು ತೃತೀಯ ಲಿಂಗ ಗುಂಪಿಗೆ ಸೇರಿದ ಅಭ್ಯರ್ಥಿಗಳು ಶೇ.50% ರಷ್ಟು ಅಂಕಗಳನ್ನು ಪಡೆದಿರಬೇಕು. ಸ್ನಾತಕೋತ್ತರ ಪದವಿ ಪಡೆದವರು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ (ಅಂತಿಮ ಅಥವಾ ದ್ವಿತೀಯ) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

ವಯೋಮಿತಿ :

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2026 ತೆಗೆದುಕೊಳ್ಳಲು ಗರಿಷ್ಠ ವಯೋಮಿತಿ ಇರುವುದಿಲ್ಲ.

ವಿನಾಯಿತಿ:

ಕರ್ನಾಟಕ ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ, ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಕಾಲೇಜುಗಳು / ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಸರ್ಕಾರಿ / ಅನುದಾನಿತ / ಖಾಸಗಿ) ನೇಮಕವಾಗಬೇಕಾದರೆ, ಅಭ್ಯರ್ಥಿಗಳು ಕಡ್ಡಾಯವಾಗಿ ಕೆಸೆಟ್ ಅಥವಾ ಎನ್‌ಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕೆಂಬ ನಿಯಮವಿದೆ.

a) ಯು.ಜಿ.ಸಿ ಕಾಲಕಾಲಕ್ಕೆ ಹೊರಡಿಸುವ ನಿಬಂಧನೆಗಳು, ಯು.ಜಿ.ಸಿ ಮಾರ್ಗಸೂಚಿಗಳು ಮತ್ತು ಅಧಿನಿಯಮಗಳ ಅನ್ವಯ ಕೆಸೆಟ್ ಅರ್ಹತೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು.

b) ಅಭ್ಯರ್ಥಿಯು 1989 ಕ್ಕಿಂತ ಮುಂಚಿತವಾಗಿ ಯು.ಜಿ.ಸಿ-ನೆಟ್/ಸಿ.ಎಸ್.ಐ.ಆರ್-ನೆಟ್, ಜೆ.ಆರ್.ಎಫ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಲ್ಲಿ ಅಂತಹವರಿಗೆ ಕೆಸೆಟ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.

c) ಅಭ್ಯರ್ಥಿಯು 1ನೇ ಜೂನ್ 2002 ಕ್ಕಿಂತ ಮೊದಲೇ ನಡೆಸಲಾದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ (SET) ತೇರ್ಗಡೆಯಾಗಿದ್ದ ಅಭ್ಯರ್ಥಿಗಳಿಗೂ ಕೆಸೆಟ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿರುತ್ತದೆ. ಅಂತಹ ಅಭ್ಯರ್ಥಿಗಳು ಭಾರತದಲ್ಲಿ ಎಲ್ಲಿಯಾದರೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗುತ್ತಾರೆ. ಆದರೆ 01 ಜೂನ್, 2002 ರ ನಂತರ ಕೆಸೆಟ್‌ನಲ್ಲಿ ಅರ್ಹರಾದ ಅಭ್ಯರ್ಥಿಗಳು ಆಯಾ ರಾಜ್ಯಗಳ ವಿಶ್ವವಿದ್ಯಾನಿಲಯಗಳು / ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಾತ್ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗಿರುತ್ತಾರೆ.

ಪರೀಕ್ಷಾ ಶುಲ್ಕ:

  • ಸಾಮಾನ್ಯ ವರ್ಗ, ಪ್ರವರ್ಗ II-A, II-B, III-A, III-B ಹಾಗೂ ಇತರೆ ರಾಜ್ಯಗಳ ಅಭ್ಯರ್ಥಿಗಳಿಗೆ: 750 ರೂ.
  • ಪ್ರವರ್ಗ-I, SC, ST, ವಿಶೇಷ ಚೇತನ, ತೃತೀಯ ಲಿಂಗ ಅಭ್ಯರ್ಥಿಗಳಿಗೆ: 500 ರೂ.

(ಮೇಲ್ಕಂಡ ಶುಲ್ಕವನ್ನು ಕೆಇಎ ಸೂಚಿಸಿದಂತೆ ಆನ್‌ಲೈನ್ ಮೂಲಕ ಮಾತ್ರವೇ ಪಾವತಿಸಬೇಕು.)

ಪರೀಕ್ಷಾ ವಿಧಾನ ಮತ್ತು ಪರಿಕ್ಷಾ ದಿನಾಂಕ :

ಕೆಸೆಟ್ (KSET) ಪರೀಕ್ಷೆಯಲ್ಲಿ ಬಹು ಆಯ್ಕೆಯ ಎರಡು ಪ್ರಶ್ನೆಪತ್ರಿಕೆಗಳಿರುತ್ತವೆ. ಪರೀಕ್ಷೆಯನ್ನು ಆಫ್‌ಲೈನ್ ಓ.ಎಂ.ಆರ್ ಮಾದರಿಯಲ್ಲಿ ದಿನಾಂಕ:11-10-2026 ರಂದು ಒಂದು ಅವಧಿಯಲ್ಲಿ ಈ ಕೆಳಕಂಡಂತೆ ನಡೆಯುವುದು. (ಅವಧಿ: 3 ಗಂಟೆಗಳು (ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ )

ಪತ್ರಿಕೆ-1 (100 ಅಂಕ)
ಪತ್ರಿಕೆ-2 (100 ಅಂಕ)

ಫಲಿತಾಂಶ ಪ್ರಕಟಣೆಯ ವಿಧಾನ :

UGC ಮಾರ್ಗಸೂಚಿಗಳ ಪ್ರಕಾರ KSETನ ಮಾನದಂಡವು UGC-NETನ ಮಾನದಂಡದ ಪ್ರಕಾರವಾಗಿರುತ್ತದೆ. ಇದು ಅಂತಿಮ ಮತ್ತು ಅಭ್ಯರ್ಥಿಗಳು ಇದಕ್ಕೆ ಬಾಧ್ಯರಾಗಿರಬೇಕಾಗುತ್ತದೆ.

ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಅಭ್ಯರ್ಥಿಗಳನ್ನು ಈ ಕೆಳಗಿನ UGC ಮಾರ್ಗಸೂಚಿಗಳಂತೆ ಪರಿಗಣಿಸಲಾಗುತ್ತದೆ. ಸಹಾಯಕ ಪ್ರಾಧ್ಯಾಪಕರ ಅರ್ಹತೆಗಾಗಿ ಅಭ್ಯರ್ಥಿಗಳು ಪೇಪರ್-I ಮತ್ತು ಪೇಪರ್-II ರ ಪತ್ರಿಕೆಗಳ ಒಟ್ಟು ಅಂಕಗಳಲ್ಲಿ ಕೆಳಗೆ ನಿರ್ದಿಷ್ಟಪಡಿಸಿದ ಕನಿಷ್ಟ ಅಂಕಗಳನ್ನು ಪಡೆಯಬೇಕು.

  • ಸಾಮಾನ್ಯ ವರ್ಗ: ಎರಡು ಪತ್ರಿಕೆಗಳಲ್ಲಿ ಶೇ.40 ಅಂಕ
  • ಎಸ್‌ಸಿ, ಎಸ್‌ಟಿ, ಒಬಿಸಿ, ವಿಶೇಷ ಚೇತನ, ತೃತೀಯ ಲಿಂಗ: ಶೇ. 35 ಅಂಕ

ಕೆಸೆಟ್‌ ಪರೀಕ್ಷೆ 2026 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ KSET_NOTI_KAN_10082026kannada.pdf

ಕೆಸೆಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಈ ಲಿಂಕ್‌ಗೆ ಭೇಟಿ ನೀಡಿ: https://kearecruitment.karnataka.gov.in/kset2026/Account/Login