Fact Check: ಆಧಾರ್, ಪ್ಯಾನ್ ಕೆವೈಸಿ ಅಪ್‌ಡೇಟ್ ನೋಟಿಸ್; ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಹರಿದಾಡುತ್ತಿದೆ ನಕಲಿ ಸಂದೇಶ
Bank of India: ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡುವುದಾಗಿ ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಹರಿದಾಡುತ್ತಿರುವ ಕೆವೈಸಿ ಅಪ್‌ಡೇಟ್ ನೋಟಿಸ್ ನಕಲಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ನೋಟಿಸ್‌ನಲ್ಲಿ ಸೂಚಿಸಿರುವ ಅನಧಿಕೃತ ಆ್ಯಪ್ ಡೌನ್‌ಲೋಡ್ ಮಾಡದಂತೆ ಹಾಗೂ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಆ. 11: ಆಧಾರ್ ಮತ್ತು ಪ್ಯಾನ್ (Aadhaar - Pan) ಕಾರ್ಡ್ ಕೆವೈಸಿ (KYC) ಅಪ್‌ಡೇಟ್ ಮಾಡದಿದ್ದರೆ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಬ್ಲಾಕ್ ಮಾಡಲಾಗುತ್ತದೆ ಎಂದು ಬ್ಯಾಂಕ್ ಆಫ್ ಇಂಡಿಯಾ (Bank of India) ನೀಡಿದೆ ಎನ್ನಲಾದ ನೋಟಿಸ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವೈರಲ್ ಆಗಿರುವ ಈ ನೋಟಿಸ್‌ನಲ್ಲಿ, ಗ್ರಾಹಕರು ತಮ್ಮ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 'ಬಿಒಐ ಮೊಬೈಲ್ ಡಿಜಿಟಲ್' ಎಂಬ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡುವಂತೆ ಸೂಚಿಸಲಾಗಿದೆ. ಆದರೆ ಕೇಂದ್ರ ಸರ್ಕಾರದ ಅಧಿಕೃತ ಸುದ್ದಿ ಸಂಸ್ಥೆಯಾದ ಪಿಐಬಿ (ಪಿಐಬಿ ಫ್ಯಾಕ್ಟ್ ಚೆಕ್) ಈ ಕುರಿತು ಸ್ಪಷ್ಟನೆ ನೀಡಿದ್ದು, ಈ ನೋಟಿಸ್ ಸಂಪೂರ್ಣವಾಗಿ ನಕಲಿ ಮತ್ತು ಸೈಬರ್ ವಂಚಕರ ಜಾಲದ ಭಾಗ ಎಂದು ಸಾರ್ವಜನಿಕರಿಗೆ ಎಚ್ಚರಿಸಿದೆ.
ನಕಲಿ ನೋಟಿಸ್: ಬ್ಯಾಂಕ್ ಆಫ್ ಇಂಡಿಯಾ ಅಥವಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂತಹ ಯಾವುದೇ ಎಚ್ಚರಿಕೆ ನೋಟಿಸ್ ಅಥವಾ ಖಾತೆ ತಡೆಹಿಡಿಯುವ ಸಂದೇಶವನ್ನು ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಪಿಐಬಿ ಫ್ಯಾಕ್ಟ್ ಚೆಕ್:
ಬ್ಯಾಂಕ್ ಆಫ್ ಇಂಡಿಯಾ ನೀಡಿದೆ ಎನ್ನಲಾದ ನೋಟಿಸ್, ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಆಧಾರ್ ಮತ್ತು ಪ್ಯಾನ್ ಕೆವೈಸಿ ಅಪ್‌ಡೇಟ್ ಮಾಡದ ಕಾರಣ ಗ್ರಾಹಕರ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಬ್ಲಾಕ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಕೆವೈಸಿ ಅಪ್‌ಡೇಟ್ ಮಾಡಲು 'BOI Mobile Digital' ಆ್ಯಪ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡುವಂತೆ… https://t.co/CMrbCuz9Y5
— PIB in Karnataka (@PIBBengaluru) August 11, 2026
ಅನಧಿಕೃತ ಆ್ಯಪ್‌ಗಳಿಂದ ದೂರವಿರಿ: ಹರಿದಾಡುತ್ತಿರುವ ನೋಟಿಸ್‌ನಲ್ಲಿ ತಿಳಿಸಲಾದ 'ಬಿಒಐ ಮೊಬೈಲ್ ಡಿಜಿಟಲ್' ಎಂಬ ನಕಲಿ ಆ್ಯಪ್ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದರಿಂದ ನಿಮ್ಮ ಬ್ಯಾಂಕ್ ಖಾತೆಯ ಹಣ, ರಹಸ್ಯ ಪಿನ್ ಹಾಗೂ ವೈಯಕ್ತಿಕ ಮಾಹಿತಿ ಸೈಬರ್ ಕ್ರಿಮಿನಲ್‌ಗಳ ಪಾಲಾಗುವ ಗಂಭೀರ ಅಪಾಯವಿದೆ ಎಂದೂ ಎಚ್ಚರಿಸಲಾಗಿದೆ.
ಕಾಗದದ ನೋಟು ಬದಲು ಪ್ಲಾಸ್ಟಿಕ್ ನೋಟು ಚಲಾವಣೆಗೆ ತಂದ ಆರ್‌ಬಿಐ; ವೈರಲ್ ಸುದ್ದಿಯ ಅಸಲಿಯತ್ತೇನು?
ಅಧಿಕೃತ ಸಂಪರ್ಕ ಮಾತ್ರ ಬಳಸಿ: ಯಾವುದೇ ಬ್ಯಾಂಕ್ ಆನ್‌ಲೈನ್‌ನಲ್ಲಿ ವಾಟ್ಸ್‌ಆ್ಯಪ್, ಎಸ್‌ಎಂಎಸ್ ಅಥವಾ ಅನುಮಾನಾಸ್ಪದ ಲಿಂಕ್‌ಗಳ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಲು ಕೋರುವುದಿಲ್ಲ. ಕೆವೈಸಿ ಅಪ್‌ಡೇಟ್‌ಗಾಗಿ ತಕ್ಷಣವೇ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯನ್ನು ನೇರವಾಗಿ ಸಂಪರ್ಕಿಸುವುದು ಅತ್ಯಂತ ಸುರಕ್ಷಿತ.
ಜಾಗೃತಿ ಮತ್ತು ಮುನ್ನೆಚ್ಚರಿಕೆ: ಸೈಬರ್ ಅಪರಾಧಿಗಳು ಗ್ರಾಹಕರ ಭಯವನ್ನು ಬಂಡವಾಳ ಮಾಡಿಕೊಂಡು ಹಣ ದೋಚಲು ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಆದ್ದರಿಂದ ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ಹೊರತುಪಡಿಸಿ ಬೇರೆ ಯಾವುದೇ ಮೂಲಗಳಿಂದ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ.
ಇಂತಹ ಯಾವುದೇ ನಕಲಿ ಮೇಲ್, ಮೆಸೇಜ್ ಅಥವಾ ವಾಟ್ಸ್‌ಆ್ಯಪ್ ನೋಟಿಸ್‌ಗಳು ಬಂದಾಗ ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಹಾಗೂ ಯಾವುದೇ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಒಂದು ವೇಳೆ ಇಂತಹ ಸೈಬರ್ ವಂಚನೆಗೆ ಒಳಗಾದರೆ ತಕ್ಷಣವೇ 1930 ಸೈಬರ್ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ದೂರು ನೀಡುವಂತೆ ಪಿಐಬಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.