ಕೇರಳ ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ ಬಣಗಳ ನಡುವೆ ಮುಗಿಯದ ಜಗಳ; ಹೈಕಮಾಂಡ್ ನಿರ್ಧಾರ ಏನು?
ವಿಧಾನ ಸಭಾ ಚುನಾವಣೆ ಫಲಿತಾಂಶ ಹೊರಬಿದ್ದು ವಾರ ಕಳೆದರೂ ಕೂಡ ಕೇರಳ ಮುಖ್ಯಮಂತ್ರಿ ಯಾರು ಎನ್ನುವ ಗೊಂದಲ ಇನ್ನೂ ಬಗೆ ಹರಿದಿಲ್ಲ. ಕಾಂಗ್ರೆಸ್ ಬಣಗಳ ನಡುವೆ ಪೋಸ್ಟರ್ ಜಗಳ ಮುಂದುವರಿದಿದ್ದು, ಮುಖ್ಯಮಂತ್ರಿ ಹುದ್ದೆಗೆ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಲು ಇನ್ನೂ ಸಾಧ್ಯವಾಗಲಿಲ್ಲ. ಪಕ್ಷದ ಹೈಕಮಾಂಡ್ ಕೂಡ ಈ ನಿಟ್ಟಿನಲ್ಲಿ ಯಾವುದೇ ಘೋಷಣೆಯನ್ನು ಮಾಡಿಲ್ಲ.
ಸಂಗ್ರಹ ಚಿತ್ರ -
ಕೇರಳ: ವಿಧಾನ ಸಭಾ ಚುನಾವಣೆ (Kerala Assembly election) ಫಲಿತಾಂಶ ಹೊರಬಿದ್ದು ಏಳು ದಿನಗಳು ಕಳೆದರೂ ಕೇರಳ ಮುಖ್ಯಮಂತ್ರಿ (Kerala cm) ಯಾರು ಎನ್ನುವ ಕುರಿತಾದ ಗೊಂದಲ ಇನ್ನೂ ಬಗೆ ಹರಿದಿಲ್ಲ. ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ (congress) ಬಣಗಳ ನಡುವಿನ ಹೋರಾಟ ಮುಂದುವರಿದಿದ್ದು, ಪೋಸ್ಟರ್ ಜಗಳವು ಕೂಡ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ನಿರ್ಧಾರ ತಳೆಯುವಲ್ಲಿ ಪಕ್ಷದ ಹೈಕಮಾಂಡ್ ಕೂಡ ವಿಳಂಬ ಮಾಡುತ್ತಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಯ್ಕೆಯ ನಾಯಕನನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಒತ್ತಾಯವನ್ನು ಮಾಡುತ್ತಲೇ ಇದ್ದಾರೆ.
ಪಂಚ ರಾಜ್ಯಗಳ ಚುನಾವಣೆ ನಡೆದು ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆಯಾದರೂ ಕೂಡ ಕೇರಳದಲ್ಲಿ ಇನ್ನು ಮುಖ್ಯಮಂತ್ರಿ ಯಾರು ಎನ್ನುವ ಗೊಂದಲ ಬಗೆ ಹರಿದಿಲ್ಲ. ಒಂದೆಡೆ ಕಾಂಗ್ರೆಸ್ ಬಣಗಳು ತಮ್ಮದೇ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎನ್ನುವ ಹೋರಾಟವನ್ನು ತೀವ್ರಗೊಳಿಸಿದ್ದರೆ ಇನ್ನೊಂದೆಡೆ ಪಕ್ಷದ ಹೈಕಮಾಂಡ್ ಮೌನ ತಾಳಿದೆ. ಹೀಗಾಗಿ ಮುಖ್ಯಮಂತ್ರಿ ಯಾರಾಗ್ತಾರೆ ಎನ್ನುವ ಗೊಂದಲ ಇನ್ನೂ ಕಾಡುತ್ತಿದೆ.
ಮೋದಿ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣ; ತನಿಖೆಗೆ ವಿಶೇಷ ತಂಡಗಳ ರಚನೆ
ಮುಖ್ಯಮಂತ್ರಿ ರೇಸಿನಲ್ಲಿ ಕೆ.ಸಿ. ವೇಣುಗೋಪಾಲ್, ರಮೇಶ್ ಚೆನ್ನಿತ್ತಲ ಮತ್ತು ವಿ.ಡಿ. ಸತೀಶನ್ ಅವರ ಹೆಸರು ಕೇಳಿ ಬರುತ್ತಿದ್ದು, ಇವರ ಬೆಂಬಲಿಗರ ಬಣಗಳು ಪೋಸ್ಟರ್ ಪ್ರಚಾರವನ್ನು ತೀವ್ರಗೊಳಿಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡ ತೀವ್ರ ಚರ್ಚೆಯಲ್ಲಿ ತೊಡಗಿಕೊಂಡಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಘೋಷಣೆಯಾಗುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಆಯ್ಕೆ ಸಂಬಂಧ ಕೇರಳಕ್ಕೆ ಶನಿವಾರ ಕಳುಹಿಸಿರುವ ವೀಕ್ಷಕರು ಚುನಾಯಿತ ಶಾಸಕರ ಆದ್ಯತೆಗಳ ಬಗ್ಗೆ ಮಾಹಿತಿ ಪಡೆದಿದೆ. ಈ ನಿಟ್ಟಿನಲ್ಲಿ ಬಳಿಕ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಚರ್ಚೆಯನ್ನು ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಮೂರು ಗಂಟೆಗಳ ಸಭೆಯಲ್ಲಿ ಹಿರಿಯ ನಾಯಕ ರಾಹುಲ್ ಗಾಂಧಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕೇರಳ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ದೀಪಾ ದಾಸ್‌ಮುನ್ಷಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಹಿರಿಯ ರಾಜ್ಯ ನಾಯಕರಾದ ರಮೇಶ್ ಚೆನ್ನಿತ್ತಲ ಮತ್ತು ವಿ.ಡಿ. ಸತೀಶನ್, ಕೇರಳ ಕಾಂಗ್ರೆಸ್ ಮುಖ್ಯಸ್ಥ ಸನ್ನಿ ಜೋಸೆಫ್ ಮತ್ತು ಹಿರಿಯ ವೀಕ್ಷಕರಾದ ಅಜಯ್ ಮಾಕನ್ ಮತ್ತು ಮುಕುಲ್ ವಾಸ್ನಿಕ್ ಭಾಗವಹಿಸಿದ್ದರು.
ಸಭೆಯ ಬಳಿಕ ಭಾನುವಾರ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಘೋಷಣೆ ಮಾಡಿಲ್ಲ. ಸೋಮವಾರ ನಡೆಯಬಹುದು ಎನ್ನುವ ನಿರೀಕ್ಷೆಗಳು ಹೆಚ್ಚಾಗಿದೆ. 140 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು 102 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್‌ನ ಬಹುಪಾಲು ಶಾಸಕರು ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಬೆಂಬಲಿಸಿದ್ದಾರೆ ಎನ್ನಲಾಗಿದೆ. ಆದರೆ ಸತೀಶನ್ ಅವರಿಗೆ ಸಾರ್ವಜನಿಕ ಬೆಂಬಲ ಹೆಚ್ಚಾಗಿದೆ. ಹೀಗಾಗಿ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಪಕ್ಷ ನಿರ್ಧಾರ ತಾಳುವಲ್ಲಿ ವಿಳಂಬ ಮಾಡುತ್ತಿದೆ.
ಈ ನಡುವೆ ದೆಹಲಿ ಮತ್ತು ತಿರುವನಂತಪುರದಲ್ಲಿ ಇಬ್ಬರೂ ನಾಯಕರ ಬೆಂಬಲಿಗರು ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಾಕಿದ್ದಾರೆ. ದೆಹಲಿಯ ಕೆಲವು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸತೀಶನ್ ಅವರಿಗೆ ಬೆಂಬಲ ವ್ಯಕ್ತಪಡಿಸಿ, ತಡರಾತ್ರಿ ರಾಷ್ಟ್ರ ರಾಜಧಾನಿಯಲ್ಲಿ ಅವರನ್ನು ಸ್ವಾಗತ ಕೋರುವ ಪೋಸ್ಟರ್ ಅನ್ನು ಹಾಕಿದ್ದರು. ಖರ್ಗೆ ಅವರ ನಿವಾಸದ ಹೊರಗೆ ವೇಣುಗೋಪಾಲ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಪೋಸ್ಟರ್‌ಗಳನ್ನು ಹಾಕಲಾಗಿತ್ತು.
ಸಭೆಯ ಬಳಿಕ ಮಾತನಾಡಿದ ರಮೇಶ್ ಚೆನ್ನಿತ್ತಲ, ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಎಲ್ಲರ ಮಾತುಗಳನ್ನು ಕೂಡ ತಾಳ್ಮೆಯಿಂದ ಕೇಳಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಮತ್ತು ಯಾವುದೇ ನಿರ್ಧಾರ ತೆಗೆದುಕೊಂಡರೂ ಎಲ್ಲರೂ ಅದನ್ನು ಸ್ವೀಕರಿಸುತ್ತಾರೆ ಎಂದು ತಿಳಿಸಿದರು.
ಸತೀಶನ್ ಅವರು ಮಾತನಾಡಿ, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಕಾರ್ಯಕರ್ತರ ಕಠಿಣ ಪರಿಶ್ರಮದಿಂದಾಗಿ ಐತಿಹಾಸಿಕ ಗೆಲುವು ಸಾಧಿಸಿತು. ಆದರೆ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ವಿಭಜನೆಯ ಅನಿಸಿಕೆ ಸೃಷ್ಟಿಯಾಗಿದೆ. ನಾವೆಲ್ಲರೂ ಇದನ್ನು ತಡೆಯಬೇಕು. ಯಾಕೆಂದರೆ ಇದು ಕಾಂಗ್ರೆಸ್ ಕಾರ್ಯಕರ್ತರು, ಯುಡಿಎಫ್ ಕಾರ್ಯಕರ್ತರು ಮತ್ತು ನಮಗೆ ಮತ ಹಾಕಿದ ಹೆಚ್ಚಿನ ಸಂಖ್ಯೆಯ ಜನರಿಗೆ ನೋವುಂಟು ಮಾಡುತ್ತದೆ ಎಂದರು.
ಚುನಾವಣೆ ನಂತರ ಬಿಕ್ಕಟ್ಟಿನಲ್ಲಿ TMC: ಮಮತಾ ಬ್ಯಾನರ್ಜಿ ವಿರುದ್ಧವೇ ತಿರುಗಿಬಿದ್ದ ಪಕ್ಷದ ನಾಯಕರು, ಮೂವರು ಅಮಾನತು
ವೇಣುಗೋಪಾಲ್ ಕೂಡ ಜನರು ಪಕ್ಷಕ್ಕೆ ದೊಡ್ಡ ಜನಾದೇಶವನ್ನು ನೀಡಿದ್ದಾರೆ. ಅವರಿಗಾಗಿ ಕೆಲಸ ಮಾಡುವ ಯುಡಿಎಫ್ ಸರ್ಕಾರವನ್ನು ನಿರೀಕ್ಷಿಸಿದ್ದಾರೆ. ಆದರೆ ಕೆಲವು ದುರದೃಷ್ಟಕರ ಘಟನೆಗಳು ನಡೆದಿವೆ. ಇವು ಕೊನೆಗೊಳ್ಳಬೇಕು ಎಂದು ತಿಳಿಸಿದರು. ಈ ನಡುವೆ ಕೇರಳ ಮುಖ್ಯಮಂತ್ರಿ ಆಯ್ಕೆ ವಿಳಂಬಕ್ಕೆ ಬಿಜೆಪಿ, ಸಿಪಿಐ(ಎಂ) ನಾಯಕರು ಕಾಂಗ್ರೆಸ್ ಅನ್ನು ಅಣಕಿಸಿದ್ದಾರೆ.