ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Miss World 2025: ಥಾಯ್ಲೆಂಡ್‌ನ ಓಪಲ್‌ ಸುಚಾಟಾ ಚಯವಾಂಗ್ಸ್ರಿಗೆ ವಿಶ್ವ ಸುಂದರಿ ಪಟ್ಟ; ಭಾರತದ ನಂದಿನಿ ಗುಪ್ತಾಗೆ ನಿರಾಸೆ

Opal Suchata Chuangsri: ಈ ಬಾರಿಯ ವಿಶ್ವ ಸುಂದರಿಯಾಗಿ ಥಾಯ್ಲೆಂಡ್‌ನ 22 ವರ್ಷದ ಓಪಲ್‌ ಸುಚಾಟಾ ಚಯವಾಂಗ್ಸ್ರಿ ಆಯ್ಕೆಯಾಗಿದ್ದಾರೆ. ಭಾರತದ ನಂದಿನಿ ಗುಪ್ತಾ ಅಗ್ರ 8ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದ್ದಾರೆ. ಇನ್ನು ಇಥಿಯೋಪಿಯಾದ ಹ್ಯಾಸೆಟ್‌ ಡೆರೆಜೆ ಮೊದಲ ರನ್ನರ್‌‌ ಅಪ್‌ ಆದರೆ, 2ನೇ ರನ್ನರ್‌ ಅಪ್‌ ಆಗಿ ಪೋಲೆಂಡ್‌ನ ಮಜಾ ಕ್ಲಾಜ್ಡಾ ಹೊರಹೊಮ್ಮಿದ್ದಾರೆ.

ಥಾಯ್ಲೆಂಡ್‌ನ ಓಪಲ್‌ ಸುಚಾಟಾ ಚಯವಾಂಗ್ಸ್ರಿಗೆ ವಿಶ್ವ ಸುಂದರಿ ಪಟ್ಟ

Profile Ramesh B May 31, 2025 10:33 PM

ಹೈದರಾಬಾದ್‌: ಭಾರಿ ಕುತೂಹಲ ಕೆರಳಿಸಿದ್ದ ವಿಶ್ವ ಸುಂದರಿ ಸ್ಪರ್ಧೆ 2025 (Miss World 2025)ರ ಗ್ರ್ಯಾಂಡ್‌ ಫಿನಾಲೆ ಹೈದರಾಬಾದ್‌ನಲ್ಲಿ ನಡೆದಿದ್ದು, ಥಾಯ್ಲೆಂಡ್‌ನ ಓಪಲ್‌ ಸುಚಾಟಾ ಚಯವಾಂಗ್ಸ್ರಿ (Opal Suchata Chuangsri) ಕಿರೀಟವನ್ನು ತಮ್ಮದಾಗಿಸಿಕೊಂಡರು. ಹೈಟೆಕ್ಸ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಹಾಲಿ ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಜ್ಕೋ (Krystyna Pyszkova) ಅವರು ಓಪಲ್‌ ಸುಚಾಟಾ ಚಯವಾಂಗ್ಸ್ರಿಗೆ ವಿಶ್ವ ಸುಂದರಿ ಕಿರೀಟ ತೊಡಿಸಿದರು. ಭಾರತದ ನಂದಿನಿ ಗುಪ್ತಾ ಅಗ್ರ 8ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದರು.

ಇನ್ನು ಇಥಿಯೋಪಿಯಾದ ಹ್ಯಾಸೆಟ್‌ ಡೆರೆಜೆ ಮೊದಲ ರನ್ನರ್‌‌ಅಪ್‌ ಆದರೆ, 2ನೇ ರನ್ನರ್‌ ಅಪ್‌ ಆಗಿ ಪೋಲೆಂಡ್‌ನ ಮಜಾ ಕ್ಲಾಜ್ಡಾ ಹೊರಹೊಮ್ಮಿದರು. ಈ ಬಾರಿ ಒಟ್ಟು 108 ಮಂದಿ ಸ್ಪರ್ಧಾ ಕಣದಲ್ಲಿದ್ದರು. 22 ವರ್ಷದ ಓಪಲ್‌ ಸುಚಾಟಾ ಚಯವಾಂಗ್ಸ್ರಿ ವಿದ್ಯಾರ್ಥಿನಿ ಮತ್ತು ರೂಪರ್ದರ್ಶಿ.



ಈ ಸುದ್ದಿಯನ್ನೂ ಓದಿ: Miss Universe India Interview: ಉದ್ಯಾನನಗರಿಯವರು ಸಖತ್‌ ಫ್ಯಾಷನೆಬಲ್‌ ಎಂದು ಹೊಗಳಿದ ಮಿಸ್‌ ಯೂನಿವರ್ಸ್‌ ಇಂಡಿಯಾ ರಿಯಾ ಸಿಂಘಾ

72ನೇ ವಿಶ್ವ ಸುಂದರಿ ಸ್ಪರ್ಧೆ ಇದಾಗಿದ್ದು, ನಂದಿನಿ ಗುಪ್ತಾ ಭಾರತವನ್ನು ಪ್ರತಿನಿಧಿಸಿದ್ದರು. ವಿಶ್ವ ಸುಂದರಿ ಕಿರೀಟ ಸುಮಾರು 8 ಕೋಟಿ ರೂ. ಬೆಳೆ ಬಾಳುತ್ತದೆ. ವಿಶೇಷ ಎಂದರೆ ಭಾರತ ಇದು 3ನೇ ಬಾರಿ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯ ವಹಿಸಿದೆ. ಈ ಹಿಂದೆ 1996 ಮತ್ತು 2024ರಲ್ಲಿ ಭಾರತದಲ್ಲಿ ಈ ಪ್ರತಿಷ್ಠಿತ ಸ್ಪರ್ಧೆ ನಡೆದಿತ್ತು.

ಶನಿವಾರ (ಮೇ 31) ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ ಬಾಲಿವುಡ್‌ ತಾರೆಗಳಾದ ಜಾಕ್ವೆಲಿನ್‌ ಫರ್ನಾಂಡಿಸ್‌ ಮತ್ತು ಇಶಾನ್‌ ಖಟ್ಟರ್‌ ಅಮೋಘ ಪ್ರದರ್ಶನ ನೀಡಿದರು. 2016ರ ವಿಶ್ವ ಸುಂದರಿ ಸ್ಟಫೆನಿ ಡೆಲ್‌ ವ್ಯಾಲೆ ಮತ್ತು ಭಾರತದ ಸಚಿನ್‌ ಕುಂಬಾರ್‌ ಕಾರ್ಯಕ್ರಮ ನಡೆಸಿಕೊಟ್ಟರು. ಕರೀನಾ ಟೈರೆಲ್‌, ಸುಧಾ ರೆಡ್ಡಿ, ಸೋನು ಸೂದ್‌, ಮಾನುಷಿ ಚಿಲ್ಲರ್‌ ಮತ್ತಿತರರು ಭಾಗವಹಿಸಿದರು.

ಕಳೆದ ವರ್ಷ ಮುಂಬೈಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕನ್ನಡತಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಿದ್ದರು. ಉಡುಪಿಯ ಇನ್ನಂಜೆ ಮೂಲದ ಇವರು ಮುಂಬೈಯಲ್ಲಿ ನೆಲೆಸಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿದ್ದ ಅವರು ಟಾಪ್​ 8ಗೆ ಬಂದರೂ ಟಾಪ್​ 4ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಒಟ್ಟು 112 ಸ್ಪರ್ಧಿಗಳು ಪೈಪೋಟಿ ಒಡ್ಡಿದ್ದರು.

ಇದುವರೆಗೆ ಭಾರತ 6 ಬಾರಿ ವಿಶ್ವ ಸುಂದರಿ ಪಟ್ಟ ತನ್ನದಾಗಿಸಿಕೊಂಡಿದೆ. ರೀಟಾ ಫಾರಿಯಾ (1966), ಐಶ್ವರ್ಯಾ ರೈ (1994), ಡಯಾನಾ ಹೇಡನ್‌ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000) ಮತ್ತು ಮಾನುಷಿ ಚಿಲ್ಲರ್‌ (2017) ಈ ಟೈಟಲ್‌ ಗೆದ್ದ ಭಾರತೀಯರು.