Car crash: ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರ ಮೃತದೇಹ ಪತ್ತೆ
ಅಮೆರಿಕದಲ್ಲಿ 5 ದಿನಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಹಿರಿಯ ನಾಗರಿಕರ ಮೃತದೇಹ ಭಾನುವಾರ (ಆಗಸ್ಟ್ 3) ಪತ್ತೆಯಾಗಿದೆ. ಮೃತರನ್ನು ಆಶಾ ದಿವಾನ್ (85), ಡಾ. ಕಿಶೋರ್ ದಿವಾನ್ (89), ಶೈಲೇಶ್ ದಿವಾನ್ (86) ಮತ್ತು ಗೀತಾ ದಿವಾನ್ (84) ಎಂದು ಗುರುತಿಸಲಾಗಿದೆ.


ವಾಷಿಂಗ್ಟನ್: ಅಮೆರಿಕದಲ್ಲಿ 5 ದಿನಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಹಿರಿಯ ನಾಗರಿಕರ ಮೃತದೇಹ ಭಾನುವಾರ (ಆಗಸ್ಟ್ 3) ಪತ್ತೆಯಾಗಿದೆ. 80 ವರ್ಷ ಆಸುಪಾಸಿನ ಇವರೆಲ್ಲ ಕಾರು ಅಪಘಾತದಲ್ಲಿ (Car crash) ಮೃತಪಟ್ಟಿರುವುದಾಗಿ ಮಾರ್ಷಲ್ ಕಂಟ್ರಿ ಶೆರೀಫ್ ಕಚೇರಿ ತಿಳಿಸಿದೆ. ಈ ನಾಲ್ವರು ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಭಾರಿ ಸಂಚಲನ ಸೃಷ್ಟಿಸಿತ್ತು. ಮೃತಪಟ್ಟವರನ್ನು ಆಶಾ ದಿವಾನ್ (85), ಡಾ. ಕಿಶೋರ್ ದಿವಾನ್ (89), ಶೈಲೇಶ್ ದಿವಾನ್ (86) ಮತ್ತು ಗೀತಾ ದಿವಾನ್ (84) ಎಂದು ಗುರುತಿಸಲಾಗಿದೆ. ನ್ಯೂಯಾರ್ಕ್‌ನ ಬಫೆಲೋ ಪ್ರದೇಶದಿಂದ ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ಗೆ ರಸ್ತೆ ಮೂಲಕ ತೆರಳಿತ್ತಿದ್ದಾಗ ಇವರ ಕಾರು ಅಪಘಾತಕ್ಕೀಡಾಗಿತ್ತು.
ಈ ನಾಲ್ವರು ಸಂಚರಿಸುತ್ತಿದ್ದ ತಿಳಿ ಹಸಿರು ಬಣ್ಣದ ಟೊಯೊಟಾ ಕ್ಯಾಮ್ರಿ ಬಿಗ್ ವ್ಹೀಲಿಂಗ್ ಕ್ರೀಕ್ (Big Wheeling Creek Road) ರಸ್ತೆಯ ಕಡಿದಾದ ತಿರುವಿನಲ್ಲಿ ಕಣಿವೆಗೆ ಉರುಳಿ ಬಿದ್ದಿತ್ತು. ಇದು ಜನವಸತಿ ಪ್ರದೇಶದಿಂದ ದೂರದಲ್ಲಿರುವುದರಿಂದ ರಕ್ಷಣಾ ತಂಡಗಳಿಗೆ ಅಪಘಾತದ ಸ್ಥಳವನ್ನು ತಲುಪಲು ತಡವಾಯಿತು ಎಂದು ವರದಿಯೊಂದು ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Indians Missing: ದೇವಸ್ಥಾನಕ್ಕೆ ಹೋದವರು ತಿರುಗಿ ಬರಲೇ ಇಲ್ಲ... ಅಮೆರಿಕದಲ್ಲಿ ಭಾರತೀಯ ಮೂಲದ ನಾಲ್ವರು ಮಿಸ್ಸಿಂಗ್!
ಕಾರು ಅಪಘಾತಕ್ಕೇನು ಕಾರಣ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ನಾಲ್ವರು ಹಿರಿಯ ನಾಗರಿಕರು ಕೊನೆಯ ಬಾರಿಗೆ ಜುಲೈ 29ರಂದು ಪೆನ್ಸಿಲ್ವೇನಿಯಾದ ಎರಿಯ ಪೀಚ್ ಸ್ಟ್ರೀಟ್‌ನಲ್ಲಿರುವ ಬರ್ಗರ್ ಕಿಂಗ್ ಔಟ್‌ಲೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರ ಕೊನೆಯ ಕ್ರೆಡಿಟ್ ಕಾರ್ಡ್ ವಹಿವಾಟು ಕೂಡ ಇದೇ ಸ್ಥಳದಲ್ಲಿ ನಡೆದಿತ್ತು.
ಅವರು ಮಾರ್ಷಲ್ ಕೌಂಟಿಯಲ್ಲಿರುವ ಪ್ಯಾಲೇಸ್ ಆಫ್ ಗೋಲ್ಡ್‌ಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇಸ್ಕಾನ್ ಸಂಸ್ಥಾಪಕ ಸ್ವಾಮಿ ಪ್ರಭುಪಾದರ ಶಿಷ್ಯರು ಅಭಿವೃದ್ಧಿಪಡಿಸಿದ ಪ್ರಸಿದ್ಧ ಧಾರ್ಮಿಕ ಸ್ಥಳ ಪ್ಯಾಲೇಸ್ ಆಫ್ ಗೋಲ್ಡ್ ಅಮೆರಿಕದಲ್ಲಿ ಬಹು ಜನಪ್ರಿಯ. ಅವರ ವಾಹನವು ನ್ಯೂಯಾರ್ಕ್ ಪರವಾನಗಿ ಫಲಕವನ್ನು (EKW2611) ಹೊಂದಿತ್ತು. ಅವರು ಜುಲೈ 29ರ ರಾತ್ರಿ ಪ್ಯಾಲೇಸ್ ಆಫ್ ಗೋಲ್ಡ್‌ನಲ್ಲಿ ತಂಗಲು ತೀರ್ಮಾನಿಸಿದ್ದರು. ಅದಾಗ್ಯೂ ಅವರು ಅಲ್ಲಿಗೆ ತಲುಪಿರಲಿಲ್ಲ. ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.
ಜುಲೈ 29ರಿಂದ ನಾಪತ್ತೆಯಾದ ನಾಲ್ವರ ಪೈಕಿ ಯಾರೊಬ್ಬರೂ ಕರೆಗೆ ಉತ್ತರಿಸಿರಲಿಲ್ಲ ಎಂದು ಅವರ ಪರಿಚಿತರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದರು. ನಾಪತ್ತೆಯಾದ ಇವರ ಪತ್ತೆಗೆ ಹೆಲಿಕಾಪ್ಟರ್ ಮತ್ತು ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗಿತ್ತು. ಇದೀಗ ಮೃತದೇಹವನ್ನು ಪತ್ತೆ ಹಚ್ಚಲಾಗಿದ್ದು, ಕುಟುಂಬಕ್ಕೆ ಹಸ್ತಾಂತರಿಸುವ ಪ್ರತಿಕ್ರಿಯೆ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನಾಪತ್ತೆಯಾಗಿದ್ದ ಭಾರತೀಯ ಯುವತಿ
ಜೂನ್‌ನಲ್ಲಿ ಭಾರತದಿಂದ ಅಮೆರಿಕಕ್ಕೆ ತೆರಳಿದ್ದ 24 ವರ್ಷದ ಯುವತಿ ನಾಪತ್ತೆಯಾಗಿದ್ದರು. ಮದುವೆಗಾಗಿ ನ್ಯೂ ಜೆರ್ಸಿಗೆ ತೆರಳಿದ್ದ ಸಿಮ್ರಾನ್ ಅಲ್ಲಿಂದ ನಾಪತ್ತೆಯಾಗಿದ್ದರು. ಒಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಅವರು ಪರಾರಿಯಾಗಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.